ಜಾತಿ ಸಮೀಕ್ಷೆಗಾಗಿ ಮಕ್ಕಳ ದಸರಾ ರಜೆ ಮುಂದೂಡಿಕೆ – ಅಕ್ಟೋಬರ್ 18 ರ ತನಕ ಸರ್ಕಾರಿ ಶಾಲೆಗಳಿಗೆ ರಜೆ

ಜಾತಿ ಸಮೀಕ್ಷೆಗಾಗಿ  ಮಕ್ಕಳ ದಸರಾ ರಜೆ ಮುಂದೂಡಿಕೆ – ಅಕ್ಟೋಬರ್ 18 ರ ತನಕ  ಸರ್ಕಾರಿ ಶಾಲೆಗಳಿಗೆ ರಜೆ

ರಾಜ್ಯದಲ್ಲಿ  ಅಕ್ಟೋಬರ್ 18ರವರೆಗೆ ಶಾಲೆಗಳ ದಸರಾ ರಜೆ ವಿಸ್ತರಿಸಲಾಗಿದೆ. ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಇಂದು ನಡೆದ ಸಭೆಯಲ್ಲಿ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದೆ. ರಾಜ್ಯದಲ್ಲಿ ನಡೆಯುತ್ತಿರುವ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸಮೀಕ್ಷೆಗೆ ಶಿಕ್ಷಕರನ್ನು ಪೂರ್ಣ ಪ್ರಮಾಣದಲ್ಲಿ ಬಳಸಿಕೊಳ್ಳಲು ಶಾಲೆಗಳ ದಸರಾ ರಜೆಯನ್ನು ಆಕ್ಟೋಬರ್ 18ರವರೆಗೆ ವಿಸ್ತರಿಸಲಾಗಿದೆ. ರಾಜ್ಯ ಸರ್ಕಾರಿ ನೌಕರರ ಸಂಘ ಕೂಡ ಈ ಬಗ್ಗೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿತ್ತು. ಶಿಕ್ಷಕರನ್ನು ಅರ್ಧ ದಿನ ಸಮೀಕ್ಷೆ, ಅರ್ಧ ದಿನ ಶಾಲೆಗಳಲ್ಲಿ ಪಾಠ ಭೋಧನೆಗೆ ಬಳಕೆಯಿಂದ ಯಾವುದಕ್ಕೂ ನ್ಯಾಯ ನೀಡಲು ಆಗಲ್ಲ. ಹೀಗಾಗಿ ಪೂರ್ಣ ಪ್ರಮಾಣದಲ್ಲಿ ಶಾಲಾ ಶಿಕ್ಷಕರನ್ನು ಸಮೀಕ್ಷೆಗೆ ಬಳಕೆ ಮಾಡಲು ಅಕ್ಟೋಬರ್ 18ರವರೆಗೆ ಶಾಲೆಗಳ ದಸರಾ ರಜೆ ವಿಸ್ತರಿಸಲಾಗಿದೆ.

ಇದನ್ನೂ ಓದಿ: ಕಾಂತಾರ ಚಾಪ್ಟರ್ 1 ನೋಡಿದ KL ರಾಹುಲ್ – ರಿಷಭ್ ಶೆಟ್ಟಿ ಮ್ಯಾಜಿಕ್ ಸೂಪರ್ ಎಂದ ಕನ್ನಡಿಗ ಕ್ರಿಕೆಟರ್

ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಸಮೀಕ್ಷೆ ಕಾರ್ಯವು ಸೆಪ್ಟೆಂಬರ್ 22 ರಿಂದ ಆರಂಭಗೊಂಡಿತ್ತು. ಇದನ್ನು ಅಕ್ಟೋಬರ್ 7 ರೊಳಗೆ ಪೂರ್ಣಗೊಳಿಸಲು ತೀರ್ಮಾನಿಸಲಾಗಿತ್ತು. ಆದರೆ, ಸಮೀಕ್ಷೆಯ ಪ್ರಗತಿ ನಿರೀಕ್ಷಿಸಿದಷ್ಟು ಆಗಿಲ್ಲ ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ. ರಾಜ್ಯದಾದ್ಯಂತ ನಮ್ಮ ನಿರೀಕ್ಷೆಗೆ ತಕ್ಕಂತೆ ಸರ್ವೇ ಪೂರ್ಣಗೊಂಡಿಲ್ಲ. ಕೊಪ್ಪಳದಂತಹ ಕೆಲವು ಜಿಲ್ಲೆಗಳಲ್ಲಿ ಶೇ. 97ರಷ್ಟು ಪ್ರಗತಿ ಸಾಧಿಸಿದ್ದರೆ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಕೇವಲ ಶೇ. 60ರಷ್ಟು ಮಾತ್ರ ಆಗಿದೆ. ಅಕ್ಟೋಬರ್ 7 ಕೊನೆಯ ದಿನವಾಗಿದ್ದರೂ, ಎಲ್ಲ ಜಿಲ್ಲೆಗಳಲ್ಲಿ ಸಂಪೂರ್ಣ ಸರ್ವೇ ಪೂರ್ಣವಾಗುವುದು ಅಸಾಧ್ಯವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

ಸಮೀಕ್ಷಾ ಕಾರ್ಯದಲ್ಲಿ ರಾಜ್ಯದಾದ್ಯಂತ ಸುಮಾರು 1.20 ಲಕ್ಷ ಶಿಕ್ಷಕರು ಹಾಗೂ 40 ಸಾವಿರ ಇತರ ಸಿಬ್ಬಂದಿ ಸೇರಿ ಒಟ್ಟು 1.60 ಲಕ್ಷ ಜನರು ಭಾಗಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ, ಶಿಕ್ಷಕರ ಸಂಘಟನೆಗಳು ಸಮೀಕ್ಷೆ ಪೂರ್ಣಗೊಳಿಸಲು ಕನಿಷ್ಠ 10 ದಿನಗಳ ಹೆಚ್ಚುವರಿ ಕಾಲಾವಕಾಶ ಬೇಕು ಎಂದು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದವು. ಈ ಮನವಿಯನ್ನು ಪುರಸ್ಕರಿಸಿದ ಸರ್ಕಾರವು, ಶಾಶ್ವತ ಹಿಂದುಳಿದ ಆಯೋಗದ ಜೊತೆ ಚರ್ಚಿಸಿ ಶಿಕ್ಷಣ ಇಲಾಖೆಯ ಮೂಲಕ ರಜೆ ವಿಸ್ತರಿಸಿ ಆದೇಶ ನೀಡಿದೆ. ನಾಳೆಯಿಂದ (ಅ.08) ಆರಂಭಗೊಂಡು ಅಕ್ಟೋಬರ್ 18 ರವರೆಗೆ  ಸರ್ಕಾರಿ ಮತ್ತು ಅನುದಾನಿತ ಶಾಲೆಗಳಿಗೆ ರಜೆ ಮುಂದುವರೆಯಲಿದೆ.

Kishor KV