ನಮ್ಮ ಮೆಟ್ರೋ ಇನ್ಮುಂದೆ ಬಸವ ಮೆಟ್ರೋ! – ಹೊಸ ಹೆಸರು ಕೇಂದ್ರಕ್ಕೆ ಶಿಫಾರಸ್ಸು ಮಾಡುವುದಾಗಿ ಘೋಷಿಸಿದ ಸಿಎಂ

ನಮ್ಮ ಮೆಟ್ರೋ ಇನ್ಮುಂದೆ ಬಸವ ಮೆಟ್ರೋ! – ಹೊಸ ಹೆಸರು ಕೇಂದ್ರಕ್ಕೆ ಶಿಫಾರಸ್ಸು ಮಾಡುವುದಾಗಿ ಘೋಷಿಸಿದ ಸಿಎಂ

ಬೆಂಗಳೂರಿನ ನಮ್ಮ ಮೆಟ್ರೋ ಹೆಸರು ಬದಲಾವಣೆ ಮಾಡ್ಬೇಕು.. ನಮ್ಮ ಮೆಟ್ರೋಗೆ ಬಸವಣ್ಣನ  ಹೆಸರು ಇಡಬೇಕು ಎಂಬ ಚರ್ಚೆ ನಡೆಯುತ್ತಿದೆ. ಬೆಂಗಳೂರಿನ ಮೆಟ್ರೋಗೆ 12ನೇ ಶತಮಾನದ ಸಾಮಾಜಿಕ ಕ್ರಾಂತಿಕಾರಿ ಬಸವಣ್ಣನವರ ಹೆಸರನ್ನು ಇಡುವಂತೆ ಒತ್ತಡ ಹೇರಲಾಗಿದ್ದು, ಈ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಬಸವ ಮೆಟ್ರೋ ಎಂದು ಮರುನಾಮಕರಣ ಮಾಡಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವುದಾಗಿ ಘೋಷಿಸಿದ್ದಾರೆ.

ಇದನ್ನೂ ಓದಿ: ಮೈಕ್ರೋವೇವ್ ಬಳಸೋ ಮುನ್ನ ಈ ವಿಚಾರ ತಿಳ್ಕೊಳ್ಳಿ! – ತಿಳಿಯದೇ ಮಾಡುವ ತಪ್ಪಿನಿಂದ ಬರುತ್ತೆ ಈ ಕಾಯಿಲೆ!

ಬಸವ ಸಂಸ್ಕೃತಿ ಅಭಿಯಾನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಸಿಎಂ, ನಮ್ಮ ಮೆಟ್ರೋ ಹೆಸರು ಬದಲಾವಣೆ ಬಗ್ಗೆ ಮಾತನಾಡಿದ್ದಾರೆ. ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ.  ನಮ್ಮ ಮೆಟ್ರೋಗೆ ಬಸವ ಮೆಟ್ರೋ ಎಂದು ನಾಮಕರಣ ಮಾಡುವ ಬಗ್ಗೆ ಕೇಂದ್ರಕ್ಕೆ ಶಿಫಾರಸ್ಸು ಮಾಡುತ್ತೇವೆ. ಇದು ಪೂರ್ಣವಾಗಿ ರಾಜ್ಯ ಸರ್ಕಾರದ ಯೋಜನೆ ಆಗಿದ್ದರೆ ಇವತ್ತೇ ಬಸವ ಮೆಟ್ರೋ  ಎಂದು ಘೋಷಿಸಿ ಬಿಡುತ್ತಿದ್ದೆ ಎಂದರು.

ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಿಸುವ ಮೂಲಕ ಇಡೀ ಸರ್ಕಾರ ಬಸವಣ್ಣನವರಿಗೆ ಗೌರವ ಸೂಚಿಸಿದೆ. ಜಾತಿ ವ್ಯವಸ್ಥೆ, ಅಂದಿಗಲ್ಲ-ಇಂದಿಗಲ್ಲ-ಮುಂದೆ ಎಂದೆಂದಿಗೂ ಬಸವ ತತ್ವ ಶಾಶ್ವತ. ಜಾತಿ-ವರ್ಗ ರಹಿತ ಮಾನವ ಸಮಾಜದ ನಿರ್ಮಾಣ ಬಸವಣ್ಣನವರ ಕನಸಾಗಿತ್ತು. ನಾವೆಲ್ಲರೂ ಮೊದಲು ಮನುಷ್ಯರು, ಬಳಿಕ ಭಾರತೀಯರು. ಹೀಗಾಗಿ ನಾವು ಮನುಷ್ಯ ನಿರ್ಮಿತ ಜಾತಿ, ಧರ್ಮದ, ಅಸಮಾನತೆಯ ತಾರತಮ್ಯಗಳನ್ನು ಸಹಿಸಬಾರದು, ಆಚರಿಸಬಾರದು ಎಂದು ಕರೆ ನೀಡಿದರು.

ನಾವೆಲ್ಲರೂ ಶೂದ್ರರು. ಜಾತಿ ಯಾವುದಾದರೂ ಶೂದ್ರರೆಲ್ಲರೂ ಒಂದೇ.‌ ಚಲನೆ ಇಲ್ಲದ ಜಾತಿ ವ್ಯವಸ್ಥೆಯನ್ನು ವಿರೋಧಿಸಿ ಬಸವಣ್ಣ ಹೊಸ ಧರ್ಮವನ್ನೇ ಸ್ಥಾಪಿಸಿದರು . ನಾನು ಬಸವಣ್ಣನವರ ಅಭಿಮಾನಿ. ಬಸವ ತತ್ವದಲ್ಲಿ‌ ನಂಬಿಕೆ-ಬದ್ದತೆ ಇಟ್ಟುಕೊಂಡಿದ್ದೀನಿ. ಅಂದಿಗಲ್ಲ- ಇಂದಿಗಲ್ಲ- ಮುಂದೆ ಎಂದೆಂದಿಗೂ ಬಸವ ತತ್ವ ಶಾಶ್ವತ ಮತ್ತು ಪ್ರಸ್ತುತ ಎನ್ನುವುದು ನನ್ನ ನಂಬಿಕೆ. ಸಹಬಾಳ್ವೆ ಮತ್ತು ಸಹಿಷ್ಣತೆಯನ್ನು ಬಸವಣ್ಣನವರು ಬದುಕಿನುದ್ದಕ್ಕೂ ಸಾರಿದರು. ನಾನೂ ಇದನ್ನು ಪಾಲಿಸುತ್ತೇನೆ ಎಂದು ಹೇಳಿದರು.

ಬಸವ ಜಯಂತಿಯ ದಿನವೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನಾನು ಅದೇ ದಿನ ಎಲ್ಲರಿಗೂ ಬದುಕುವ ಸಮಾನ ಅವಕಾಶಗಳನ್ನು ಕಲ್ಪಿಸುವ ಬಸವಣ್ಣನವರ ಆಶಯಗಳನ್ನು ಈಡೇರಿಸುವ ತೀರ್ಮಾನ ಮಾಡಿ ಹತ್ತು ಹಲವು ಭಾಗ್ಯಗಳ, ಗ್ಯಾರಂಟಿಗಳ ಮೂಲಕ ಎಲ್ಲಾ ಜಾತಿ, ಎಲ್ಲಾ ಧರ್ಮದ ಬಡವರ ಬದುಕಿಗೆ ಅವಕಾಶಗಳನ್ನು ಕಲ್ಪಿಸಿದೆ. ಎಲ್ಲಾ ಸರ್ಕಾರಿ ಕಚೇರಿಗಳಲ್ಲೂ ಬಸವಣ್ಣನವರ ಭಾವಚಿತ್ರ ಇಡುವುದನ್ನು ಕಡ್ಡಾಯ ಮಾಡಿದ್ದು ಇದೇ ಕಾರಣಕ್ಕೆ ಎಂದು ಹೇಳಿದರು.

ಜಾತಿಯಿಂದ ಯಾರೂ ಶ್ರೇಷ್ಠರಲ್ಲ. ಹಾಗೆಯೇ ಪ್ರತಿಭೆ, ಜ್ಞಾನ ಕೂಡ ಯಾವುದೇ ಒಂದು ಜಾತಿಯ ಸ್ವತ್ತು ಅಲ್ಲ. ನಾನು ಅರ್ಜಿ ಹಾಕಿಕೊಂಡು ಕುರುಬ ಜಾತಿಯಲ್ಲಿ ಹುಟ್ಟಿಲ್ಲ. ನಾನು ಶೂದ್ರ ಎನ್ನುವ ಕಾರಣಕ್ಕೆ ಶಿಕ್ಷಣ ಪಡೆಯುವ ಅರ್ಹತೆ ಇಲ್ಲ ಎನ್ನುವುದು ಪಟ್ಟಭದ್ರರ ಷಡ್ಯಂತ್ರ ಎಂದರು.

Shwetha M