ಶನಿವಾರ ಯಾವ ಬಣ್ಣದ ಬಟ್ಟೆ ಧರಿಸಬೇಕು? – ಶನಿ ದೋಷ ದೂರಾಗುವುದ್ದಕ್ಕೆ ಏನ್ ಮಾಡಬೇಕು?

ಶನಿವಾರ ಯಾವ ಬಣ್ಣದ ಬಟ್ಟೆ ಧರಿಸಬೇಕು? –  ಶನಿ ದೋಷ ದೂರಾಗುವುದ್ದಕ್ಕೆ ಏನ್ ಮಾಡಬೇಕು?

ಶನಿವಾರದ ದಿನವು ಕೆಲವೆಡೆ ಆಂಜನೇಯ ಸ್ವಾಮಿಯನ್ನು ಪೂಜಿಸುತ್ತಾರೆ. ಇನ್ನು ಕೆಲವೆಡೆ ಶನಿ ದೇವನನ್ನು ಪೂಜಿಸುತ್ತಾರೆ. ಈ ದಿನದಂದು ಶನಿ ದೋಷದಿಂದ ಮುಕ್ತರಾಗಲು ಸಾಕಷ್ಟು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ. ಈ ದಿನದಂದು ನಾವು ಸಾಕಷ್ಟು ನಿಯಮಗಳ ಪ್ರಕಾರ ದಿನವನ್ನು ಕಳೆಯಬೇಕಾಗುತ್ತದೆ. ಇಲ್ಲವಾದರೆ, ನಾವು ಶನಿ ದೋಷದಂತಹ ಅನೇಕ ಸಮಸ್ಯೆಗಳನ್ನು, ದೋಷಗಳನ್ನು ಎದುರಿಸಬೇಕಾಗುತ್ತದೆ. ಶನಿವಾರದ ದಿನದಂದು ನಾವು ಧರಿಸುವ ಬಟ್ಟೆ ಕೂಡ ಶನಿ ದೋಷಕ್ಕೆ ಕಾರಣವಾಗುತ್ತದೆ. ಶನಿವಾರದ ದಿನದಂದು ಯಾವ ಬಣ್ಣದ ಬಟ್ಟೆ ಧರಿಸಬೇಕು.? ಯಾವೆಲ್ಲಾ ಕೆಲಸಗಳನ್ನು ಮಾಡಬೇಕು ಅನ್ನೋದ್ದನ್ನ ನೋಡೋಣ.

ಯಾವ ವ್ಯಕ್ತಿಯು ಶನಿದೋಷಕ್ಕೆ ಗುರಿಯಾಗಿರುತ್ತಾನೋ, ಯಾವ ವ್ಯಕ್ತಿಯ ಜಾತಕದಲ್ಲಿ ಶನಿಯ ಸ್ಥಾನ ದುರ್ಬಲವಾಗಿರುತ್ತದೆಯೋ ಅಂತಹ ವ್ಯಕ್ತಿ ತಪ್ಪದೇ ಶನಿವಾರದ ದಿನದಂದು ಶನಿ ದೇವನನ್ನು ಪೂಜಿಸಬೇಕು. ನಂತರ ಶನಿ ದೇವನಿಗೆ ಎಳ್ಳೆಣ್ಣೆಯನ್ನು ಅರ್ಪಿಸಿ. ಅಥವಾ ಶನಿ ದೇವನಿಗೆ ಎಳ್ಳೆಣ್ಣೆಯ ದೀಪವನ್ನು ಕೂಡ ಹಚ್ಚಿಡಬೇಕು. ಹಾಗೂ ಆತನಿಗೆ ಪ್ರಿಯವಾದ ನೀಲಿ ಬಣ್ಣದ ಹೂವುಗಳನ್ನು ಅರ್ಪಿಸಿ. ಇದನ್ನು ಸಾಡೇಸಾತಿ ಶನಿ ದೋಷವನ್ನು ಹೊಂದಿರುವವರು ಕೂಡ ಪಾಲಿಸಬೇಕು.

ಶನಿವಾರದ ದಿನದಂದು ಶನಿ ದೇವನನ್ನು ಮಾತ್ರವಲ್ಲ, ಹನುಮಂತನನ್ನು ಪೂಜಿಸುವ ಸಂಪ್ರದಾಯವೂ ಇದೆ. ಈ ದಿನ ಆಂಜನೇಯ ಸ್ವಾಮಿಯನ್ನು ಪೂಜಿಸುವುದು ಅತ್ಯಂತ ಶುಭ. ಈ ಕಾರಣಕ್ಕಾಗಿ ಶನಿವಾರದ ದಿನದಂದು ಮನೆಯ ಹತ್ತಿರವಿರುವ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ಆತನನ್ನು ಪೂಜಿಸಿ ನಂತರ ದೇವಸ್ಥಾನದಲ್ಲಿ ಕೆಂಪು ಬಣ್ಣದ ಧ್ವಜವನ್ನು ಹಾರಿಸಿ. ಈ ರೀತಿ ಮಾಡುವುದರಿಂದ ನೀವು ಶುಭ ಫಲಿತಾಂಶಗಳನ್ನು ಪಡೆದುಕೊಳ್ಳುತ್ತೀರಿ.

​ಶನಿವಾರದ ದಿನದಂದು ಕಪ್ಪು ಅಥವಾ ನೀಲಿ ಬಣ್ಣದ ಬಟ್ಟೆಯನ್ನು ಧರಿಸುವುದು ಶುಭವೆಂದು ಪರಿಗಣಿಸಲಾಗಿದೆ. ಈ ಬಣ್ಣವು ಶನಿ ದೇವನಿಗೆ ಅತ್ಯಂತ ಪ್ರಿಯವಾದ ಬಣ್ಣವಾಗಿದೆ. ಒಂದು ವೇಳೆ ನಿಮ್ಮ ಬಳಿ ಈ ಬಣ್ಣದ ಬಟ್ಟೆ ಇಲ್ಲದೇ ಇದ್ದರೆ ಅಂತಹ ಸಮಯದಲ್ಲಿ ಈ ಬಣ್ಣದ ಕರವಸ್ತ್ರಗಳನ್ನು ನಿಮ್ಮ ಪರ್ಸ್‌ನಲ್ಲಿ ಅಥವಾ ಪಾಕೆಟ್‌ನಲ್ಲಿ ಇಟ್ಟುಕೊಳ್ಳಬಹುದು.

ಶನಿ ದೇವನು ಅಗತ್ಯವಿರುವ ವ್ಯಕ್ತಿಗೆ, ಬಡವರಿಗೆ, ನಿರ್ಗತಿಕರಿಗೆ ತಮ್ಮ ಕೈಲಾದಷ್ಟು ದಾನ ಮಾಡುವುದರಿಂದ ಬೇಗ ಸಂತುಷ್ಟನಾಗುತ್ತಾನೆ. ಹಾಗಾಗಿ, ಶನಿವಾರದ ದಿನದಂದು ಶನಿ ದೇವನೊಂದಿಗೆ ಸಂಬಂಧವನ್ನು ಹೊಂದಿರುವಂತಹ ಕಪ್ಪು ಬಟ್ಟೆ, ಕಪ್ಪು ಕಂಬಳಿ, ಛತ್ರಿ, ಕಡಲೆಕಾಳು, ಎಣ್ಣೆ, ಕಬ್ಬಿಣದ ವಸ್ತುಗಳು ಮತ್ತು ಶೂ-ಚಪ್ಪಲಿಗಳು ಇತ್ಯಾದಿಗಳನ್ನು ದಾನ ಮಾಡಬೇಕು. ಇವುಗಳನ್ನು ದಾನವಾಗಿ ನೀಡುವುದರಿಂದ ಶನಿಯು ನಿಮ್ಮ ಸಮಸ್ಯೆಗಳನ್ನು ಬಹುಪಾಲು ಕಡಿಮೆ ಮಾಡುತ್ತಾನೆ

Kishor KV