ಟಿ20 ವಿಶ್ವಕಪ್ ಟೂರ್ನಿಗೆ ಭಾರತದ ಮಹಿಳಾ ತಂಡ ಪ್ರಕಟ – ತಂಡಕ್ಕೆ ಸೇರ್ಪಡೆಗೊಂಡ ಶಿಖಾ ಪಾಂಡೆ
ಟಿ20 ವಿಶ್ವಕಪ್ ಟೂರ್ನಿಗೆ ಭಾರತ ಮಹಿಳಾ ತಂಡ ಸಜ್ಜಾಗಿದೆ. ದಕ್ಷಿಣ ಆಫ್ರಿಕಾದ ಆತಿಥ್ಯದಲ್ಲಿ ಫೆಬ್ರವರಿ10 ರಿಂದ ಆರಂಭವಾಗಲಿರುವ ಮಹತ್ವದ ಟಿ20 ವಿಶ್ವಕಪ್ ಟೂರ್ನಿಗೆ ಮಹಿಳಾ ತಂಡವನ್ನು ಬಿಸಿಸಿಐ ಪ್ರಕಟಿಸಿದೆ. ದಕ್ಷಿಣ ಆಫ್ರಿಕಾದಲ್ಲಿ ಜನವರಿಯಲ್ಲಿ ಪ್ರಾರಂಭವಾಗುವ ಟಿ20 ತ್ರಿಕೋನ ಸರಣಿಗೂ ಭಾರತ ತಂಡವನ್ನು ಆಯ್ಕೆ ಮಾಡಲಾಗಿದೆ. ತ್ರಿಕೋನ ಸರಣಿ ಮತ್ತು 2023ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಹರ್ಮನ್ ಪ್ರೀತ್ ಕೌರ್, ಭಾರತ ಮಹಿಳಾ ತಂಡವನ್ನು ಮುನ್ನಡೆಸಲಿದ್ದಾರೆ. ಹಾಗೂ ಸ್ಮೃತಿ ಮಂದಾನ ಉಪನಾಯಕಿಯಾಗಿದ್ದಾರೆ.
ಇದನ್ನೂ ಓದಿ: ಧೋನಿ ಮಗಳಿಗೆ ಮೆಸ್ಸಿ ಸ್ಪೆಷಲ್ ಗಿಫ್ಟ್ – ಫುಟ್ಬಾಲ್ ತಾರೆಯಿಂದ ಉಡುಗೊರೆ ಪಡೆದ ಜೀವಾ
2022ರಲ್ಲಿ ನಡೆದ ಐಸಿಸಿ ಮಹಿಳಾ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಸ್ಥಾನ ಪಡೆಯಲು ವಿಫಲವಾಗಿದ್ದ ಯುವ ಬ್ಯಾಟರ್ ಜೆಮಿಮಾ ರೊಡ್ರಿಗಸ್, ಇದೀಗ ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಅಲ್ಲದೆ ಬಹು ಸಮಯದಿಂದ ಕಡೆಗಣನೆಗೆ ಗುರಿಯಾಗಿದ್ದ ಅನುಭವಿ ವೇಗದ ಬೌಲರ್ ಶಿಖಾ ಪಾಂಡೆ ಕೂಡ ಕಮ್‌ಬ್ಯಾಕ್ ಮಾಡಿದ್ದಾರೆ. ಯುವ ವೇಗಿ ಅಂಜಲಿ ಸರವಣಿ ಟಿ20 ವಿಶ್ವಕಪ್‌ಗೆ ಆಯ್ಕೆ ಆಗಿದ್ದಾರೆ. ರೇಣುಕಾ ಸಿಂಗ್ ಮತ್ತು ಪೂಜಾ ವಸ್ತ್ರಕಾರ ತಂಡದಲ್ಲಿರುವ ವೇಗದ ಬೌಲರ್‌ಗಳಾಗಿದ್ದಾರೆ. 2023ರ ಐಸಿಸಿ ಮಹಿಳಾ ಟಿ20 ವಿಶ್ವಕಪ್ ಟೂರ್ನಿಯು ಫೆಬ್ರವರಿ 10ರಿಂದ ಪ್ರಾರಂಭವಾಗಲಿದೆ. ಭಾರತ ಮಹಿಳಾ ತಂಡ ತನ್ನ ಮೊದಲ ಪಂದ್ಯದಲ್ಲೇ ಬದ್ಧವೈರಿ ಪಾಕಿಸ್ತಾನ ವಿರುದ್ಧ ಹೋರಾಟ ನಡೆಸಲಿದೆ. ಫೆಬ್ರವರಿ 12ರಂದು ಇಂಡೋ- ಪಾಕ್ ಕದನ ಏರ್ಪಡಿಸಲಾಗಿದೆ. ಬಳಿಕ ಫೆಬ್ರವರಿ 15 ರಂದು ವೆಸ್ಟ್ ಇಂಡೀಸ್ ವಿರುದ್ಧ ಕಾದಾಟ ನಡೆಸಲಿದೆ. ಫೆಬ್ರವರಿ 18 ರಂದು ಇಂಗ್ಲೆಂಡ್ ವಿರುದ್ಧ ಹೋರಾಟ ನಡೆಸಲಿರುವ ಭಾರತ ಮಹಿಳಾ ತಂಡ, ಫೆಬ್ರವರಿ 20 ರಂದು ಐರ್ಲೆಂಡ್ ವಿರುದ್ಧ ಸೆಣೆಸಾಡಲಿದೆ. ಭಾರತ ಮಹಿಳಾ ತಂಡವು ಇಂಗ್ಲೆಂಡ್, ವೆಸ್ಟ್ ಇಂಡೀಸ್, ಪಾಕಿಸ್ತಾನ ಮತ್ತು ಐರ್ಲೆಂಡ್ ಜೊತೆಗೆ ಗುಂಪು 2ರಲ್ಲಿದೆ. ಫೈನಲ್ ಪಂದ್ಯವು 2023ರ ಫೆಬ್ರವರಿ 26ರಂದು ನಡೆಯಲಿದೆ.