ಡಿಕೆ ಶಿವಕುಮಾರ್ ಅವರು ನವೆಂಬರ್​​ನಲ್ಲಿ ಮುಖ್ಯಮಂತ್ರಿ ಆಗ್ತಾರೆ – ಎಲ್ ಆರ್ ಶಿವರಾಮೇಗೌಡ

ಡಿಕೆ ಶಿವಕುಮಾರ್ ಅವರು ನವೆಂಬರ್​​ನಲ್ಲಿ ಮುಖ್ಯಮಂತ್ರಿ ಆಗ್ತಾರೆ – ಎಲ್ ಆರ್ ಶಿವರಾಮೇಗೌಡ

ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ನವೆಂಬರ್​​ನಲ್ಲಿ ಮುಖ್ಯಮಂತ್ರಿ ಆಗುತ್ತಾರೆ ಎಂಬ ನಂಬಿಕೆ ನಮಗಿದೆ,. ನಮಗೆ ಸಿಕ್ಕಿರುವ ಮಾಹಿತಿ ಪ್ರಕಾರ ಅವರು ಸಿಎಂ ಆಗಲಿದ್ದಾರೆ ನಮ್ಮ ಆಶಯ ಕೂಡ ಅದೇ ಎಂದು ಮಾಜಿ ಸಂಸದ ಎಲ್ ಆರ್ ಶಿವರಾಮೇಗೌಡ ಹೇಳಿದ್ದಾರೆ.

ಡಿ ಕೆ ಶಿವಕುಮಾರ್ ಅವರು ಮುಖ್ಯಮಂತ್ರಿ ಅಗಬೇಕು ಎಂಬುದೇ ನಮ್ಮ ಇಚ್ಛೆ ಎಂದು ಶಿವರಾಮೇಗೌಡ ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಮಾತನಾಡಿ ಹೇಳಿದ್ದಾರೆ. ಕಾಂಗ್ರೆಸ್ ನಲ್ಲಿ ಏನೇ ಬೆಳವಣಿಗೆ ಆಗುವುದಿದ್ದರೂ ಅಂತಿಮ ನಿರ್ಧಾರವನ್ನು ಹೈಕಮಾಂಡ್ ಕೈಗೊಳ್ಳುತ್ತದೆ. ಆದರೆ, ಡಿಕೆ ಶಿವಕುಮಾರ್ ಸಿಎಂ ಆಗಬೇಕೆಂದು ಹಳೆ ಮೈಸೂರು ಭಾಗದವರಾದ ನಮ್ಮೆಲ್ಲರ ಇಚ್ಛೆ. ಅವರು ಮುಖ್ಯಮಂತ್ರಿ ಆಗಿಯೇ ಆಗುತ್ತಾರೆ ನಮಗೆ ತಿಳಿದ ಮಟ್ಟಿಗೆ ಹೈಕಮಾಂಡ್ ಮಟ್ಟದಲ್ಲಿ ಎರಡೂವರೆ ವರ್ಷ ಸಿಎಂ ಅಧಿಕಾರ ಹಂಚಿಕೆ ಒಪ್ಪಂದವಾಗಿದೆ, ಎರಡೂವರೆ ವರ್ಷ ಸಿದ್ದರಾಮಯ್ಯನವರು ಮತ್ತು ಎರಡೂವರೆ ವರ್ಷ ಡಿ ಕೆ ಶಿವಕುಮಾರ್ ಎಂದು ಮಾತುಕತೆಯಾಗಿದೆ ಎಂದು ನಮಗೆ ಮಾಹಿತಿ ಸಿಕ್ಕಿದೆ ಎಂದರು.

ಡಿ.ಕೆ.ಶಿವಕುಮಾರ್ ಒಂದಲ್ಲ ಒಂದು ದಿನ ಮುಖ್ಯಮಂತ್ರಿ ಆಗುತ್ತಾರೆ

ಕಳೆದ ವಿಧಾನಸಭಾ ಚುನಾವಣೆ ವೇಳೆ ಕರ್ನಾಟಕದಲ್ಲಿ ಕಾಂಗ್ರೆಸ್​ ಪಕ್ಷ 140 ಸ್ಥಾನ ಗೆಲ್ಲುವಲ್ಲಿ ಡಿಕೆಶಿ ಶ್ರಮವಿದೆ ಎಂದು ಕುಣಿಗಲ್ ಕ್ಷೇತ್ರದ ಶಾಸಕ ಡಾ.ರಂಗನಾಥ್ ಹೇಳಿದ್ದಾರೆ. ಡಿ.ಕೆ.ಶಿವಕುಮಾರ್ ಒಂದಲ್ಲ ಒಂದು ದಿನ ಮುಖ್ಯಮಂತ್ರಿ ಆಗುತ್ತಾರೆಂಬ ಭವಿಷ್ಯವನ್ನೂ ನುಡಿದ್ದಾರೆ. ಕಾರ್ಯಕರ್ತರು ಡಿ.ಕೆ. ಶಿವಕುಮಾರ್​ ಅವರು ಮುಖ್ಯಮಂತ್ರಿ ಆಗಬೇಕೆಂದು ಅಪೇಕ್ಷೆ ಪಡುತ್ತಿದ್ದಾರೆ. ಹೀಗಾಗಿ ಡಿಕೆಶಿಗೆ ಸ್ಥಾನಮಾನ ಕೊಡುವ ಬಗ್ಗೆ ಹೈಕಮಾಂಡ್ ಚಿಂತನೆ ಮಾಡಬೇಕು. ಹೈಕಮಾಂಡ್ ನಿರ್ಧಾರಕ್ಕಾಗಿ ಪಕ್ಷದ ಕಾರ್ಯಕರ್ತರು ಕಾಯುತ್ತಿದ್ದಾರೆ. ರಾಜಕೀಯ ಅನ್ನೋದು ಕೃಷಿ ಇದ್ದ ಹಾಗೆ. ಕೃಷಿಯಲ್ಲಿ ಶ್ರಮ ಹಾಕಿದಂತೆ ರಾಜಕೀಯದಲ್ಲಿ ಸಮಸ್ಯೆ ಬಗೆಹರಿಸಬೇಕು ಎಂದು ರಂಗನಾಥ್​ ಆಗ್ರಹಿಸಿದ್ದಾರೆ. ಡಿ.ಕೆ.ಶಿವಕುಮಾರ್ ಹಾರ್ಡ್​ಶಿಪ್ ನಂಬಿ ಕೆಲಸ ಮಾಡುವವರಾಗಿದ್ದು, ಬೆಳಗ್ಗೆ 8 ಗಂಟೆಯಿಂದ ಮಧ್ಯರಾತ್ರಿವರೆಗೂ ದುಡಿಯುತ್ತಾರೆ. ಅವರಿಗೆ ಭಗವಂತನ ಆಶೀರ್ವಾದ ಇರುವುದರಿಂದ ಸಿಎಂ ಆಗ್ತಾರೆ. ಡಿಸಿಎಂ ಡಿ.ಕೆ.ಶಿವಕುಮಾರ್​ ನಮಗೆ ರಾಜಕೀಯ ಗುರುಗಳು. ಸದ್ಯ ಮುಖ್ಯಮಂತ್ರಿ ಕುರ್ಚಿಯಲ್ಲಿ ಇರುವ ಸಿದ್ದರಾಮಯ್ಯನವರು ದೇಶಕ್ಕೆ ಮಾದರಿಯಾಗುವ ಕೆಲಸ ಮಾಡ್ತಿದ್ದಾರೆ ಎಂದು ಬೆಂಗಳೂರಿನಲ್ಲಿ ಕುಣಿಗಲ್ ಕ್ಷೇತ್ರದ ಶಾಸಕ ಡಾ.ರಂಗನಾಥ್ ಹೇಳಿದ್ದಾರೆ.

Kishor KV