ತಿರುಪತಿ ಭಕ್ತರಿಗೆ ಗುಡ್‌ನ್ಯೂಸ್ – ಇನ್ಮುಂದೆ ರಷ್ ಕಮ್ಮಿ ಮಾಡುತ್ತೆ AI

ತಿರುಪತಿ ಭಕ್ತರಿಗೆ ಗುಡ್‌ನ್ಯೂಸ್ – ಇನ್ಮುಂದೆ ರಷ್ ಕಮ್ಮಿ ಮಾಡುತ್ತೆ AI

ತಿರುಮಲ ತಿರುಪತಿ  ತಿಮ್ಮಪ್ಪನ ದೇವಸ್ಥಾನದಲ್ಲಿ ದೇಶದ ಮೊದಲ ಕೃತಕ ಬುದ್ಧಿಮತ್ತೆ (AI) ಆಧಾರಿತ ಕಮಾಂಡ್ ಕಂಟ್ರೋಲ್ ಸೆಂಟರ್  ತೆರೆಯಲಾಗಿದೆ. ಈ ಹೊಸ ಯೋಜನೆಯಿಂದ ಭಕ್ತರಿಗೆ ಸಾಕಷ್ಟು ಅನುಕೂಲ ಆಗಲಿದೆ.

ಈ ಕೇಂದ್ರವನ್ನು ತಿರುಮಲದ ವೈಕುಂಠಂ 1 ಕಾಂಪ್ಲೆಕ್ಸ್‌ನಲ್ಲಿ ಸ್ಥಾಪಿಸಲಾಗಿದೆ. ದೇವಸ್ಥಾನದಾದ್ಯಂತ ನೂರಾರು ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ದೊಡ್ಡ ಪರದೆಯ ಮೂಲಕ ಭಕ್ತರ ಚಲನೆ ಮತ್ತು ಸಾಲುಗಳನ್ನು ನೈಜ ಸಮಯದಲ್ಲಿ ಗಮನಿಸಲಾಗುತ್ತದೆ. 25ಕ್ಕೂ ಹೆಚ್ಚು ಟೆಕ್ನಿಕಲ್ ಸಿಬ್ಬಂದಿ ಈ ಕ್ಯಾಮೆರಾಗಳನ್ನು ನಿರ್ವಹಿಸುತ್ತಾರೆ. ತಿರುಮಲದ ಪ್ರಮುಖ ಪ್ರವೇಶದ್ವಾರವಾದ ಅಲಿಪಿರಿಯಿಂದಲೇ ಭಕ್ತರ ಒತ್ತಡವನ್ನು ಗಮನಿಸಲು ಕ್ಯಾಮೆರಾಗಳನ್ನು ಸ್ಥಾಪಿಸಲಾಗಿದೆ. ಇನ್ನೂ ಇಲ್ಲಿಅಳವಡಿಸಿರೋ AI ಕ್ಯಾಮರಾ ಸಾಕಷ್ಟು ವಿಶೇಷತೆಗಳನ್ನ ಹೊಂದಿದೆ.

ಎಐ ಕ್ಯಾಮೆರಾಗಳ ವಿಶೇಷತೆ

ಈ ಎಐ ಕ್ಯಾಮೆರಾಗಳು ಕೇವಲ ವಿಡಿಯೋ ರೆಕಾರ್ಡ್ ಮಾಡುವುದಷ್ಟೇ ಅಲ್ಲ, ಸಾಲಿನಲ್ಲಿ ಜನರ ಸಂಖ್ಯೆಯನ್ನು ಎಣಿಕೆ ಮಾಡುತ್ತೆ.. ಅಷ್ಟೇ ಅಲ್ಲ ಗುಂಪಿನ ಚಲನೆಯನ್ನು ಗಮನಿಸುವುದು ಮತ್ತು ದರ್ಶನದ ಕಾಯುವ ಸಮಯವನ್ನು ಅಂದಾಜಿಸುವುದು ಸೇರಿದಂತೆ ಹಲವು ಕಾರ್ಯಗಳನ್ನು ಮಾಡುತ್ತವೆ. 3ಡಿ ನಕ್ಷೆಗಳ ಮೂಲಕ ನೈಜ ಸಮಯದ ದೃಶ್ಯವನ್ನು ಒದಗಿಸುವ ಈ ವ್ಯವಸ್ಥೆ, ಜನರ ಗುಂಪು ತುಂಬಿದ ಕಾರಿಡಾರ್‌ಗಳನ್ನು ಗುರುತಿಸಿ, ಪರಿಹಾರ ಸೂಚಿಸುತ್ತದೆ. ಕಳ್ಳತನ ಮಾಡಿದ್ರೆ ಅಥವಾ ಯಾರಾದ್ರೂ ಅನುಮಾನಾಸ್ಪದ ವ್ಯಕ್ತಿಗಳು ಕಂಡ್ರೆ ಪತ್ತೆಹಚ್ಚುವ ಜೊತೆಗೆ, ಕಳೆದುಹೋದ ಮಕ್ಕಳು ಅಥವಾ ವೃದ್ಧರನ್ನು ಮುಖ ಗುರುತಿಸುವ ಮೂಲಕ ಹುಡುಕಲು ಸಹಾಯ ಮಾಡುತ್ತದೆ.

ಭಕ್ತರ ಸುರಕ್ಷತೆಗೆ ಕ್ರಮ

ಎಐ ವ್ಯವಸ್ಥೆ ಭಕ್ತರ ಮುಖದ ಭಾವನೆ ಮತ್ತು ದೇಹದ ಚಲನೆಯನ್ನು ವಿಶ್ಲೇಷಿಸಿ, ಒಬ್ಬ ವ್ಯಕ್ತಿಯು ಒತ್ತಡದಲ್ಲಿ, ಅನಾರೋಗ್ಯದಲ್ಲಿದ್ದರೆ ಅಥವಾ ಅಸ್ವಸ್ಥರಾಗಿದ್ದರೆ ತಕ್ಷಣ ಅಧಿಕಾರಿಗಳಿಗೆ ಎಚ್ಚರಿಕೆ ನೀಡುತ್ತದೆ. ಕ್ಯಾಮೆರಾಗಳು ಮತ್ತು ಟಿಕೆಟ್ ದಾಖಲೆಗಳಿಂದ ಡೇಟಾವನ್ನು ಸಂಗ್ರಹಿಸಿ, ಗರಿಷ್ಠ ಭಕ್ತರ ಒತ್ತಡದ ಸಮಯವನ್ನು ಊಹಿಸುತ್ತದೆ. ಇದರಿಂದ ಟಿಟಿಡಿ ಹೆಚ್ಚಿನ ಸಿಬ್ಬಂದಿಯನ್ನು ನಿಯೋಜಿಸುವುದು ಅಥವಾ ಹೆಚ್ಚುವರಿ ಸಾಲು ತೆರೆಯುವುದನ್ನು ಯೋಜಿಸಬಹುದು. ಬೆಂಕಿ ಅಥವಾ ವೈದ್ಯಕೀಯ ತುರ್ತು ಸಂದರ್ಭದಲ್ಲಿ, ಸುರಕ್ಷಿತ ಮತ್ತು ತ್ವರಿತ ನಿರ್ಗಮನ ಮಾರ್ಗಗಳನ್ನು ತೋರಿಸುತ್ತದೆ.

Kishor KV