ಸೀರೆ ಕದ್ದಿದ್ದಾಳೆಂದು ಮಹಿಳೆಗೆ ಬೂಟ್ ಕಾಲಿನಲ್ಲಿ ಒದ್ದ ಅಂಗಡಿ ಮಾಲೀಕ!

ಮಹಿಳೆಯೊಬ್ಬಳು ಸೀರೆ ಕದ್ದಿದ್ದಾಳೆ ಎಂದು ಆರೋಪಿಸಿ ಬಟ್ಟೆ ಅಂಗಡಿ ಮಾಲೀಕ ಆಕೆಯ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿರುವ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಡೆದಿದೆ. ಇದ್ರ ವಿಡಿಯೋ ವೈರಲ್ ಆಗ್ತಿದ್ದಂತೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ.
ಇದನ್ನೂ ಓದಿ: ಕಾವೇರಿ ಆರತಿಗೆ ಕೌಂಟ್‌ಡೌನ್ ಶುರು! – ಮದುವಣಗಿತ್ತಿಯಂತೆ ಸಿಂಗಾರಗೊಂಡ ಕೆಆರ್‌ಎಸ್
ಏನಿದು ಘಟನೆ?
ಅವೆನ್ಯೂ ರಸ್ತೆಯಲ್ಲಿರುವ ಬಟ್ಟೆ ಅಂಗಡಿಯೊಂದಕ್ಕೆ ಮಹಿಳೆ ಬಟ್ಟೆ ಖರೀದಿಸಲು ಹೋಗಿದ್ದರು. ಈ ವೇಳೆ ಮಹಿಳೆ ಸೀರೆ ಕಳ್ಳತನ ಮಾಡಿದ್ದಾಳೆ ಎಂದು ಅಂಗಡಿ ಮಾಲೀಕ ಆರೋಪಿಸಿದ್ದಾರೆ. ಬಳಿಕ ಆಕೆಯನ್ನ ಅಂಗಡಿಯಿಂದ ಹೊರಗೆಳೆದು ತಂದು ಹಲ್ಲೆ ನಡೆಸಿ, ಬೂಟುಗಾಲಿನಲ್ಲಿ ಒದ್ದಿದ್ದಾರೆ. ಆಕೆಯ ಮಗನ ಮುಂದೆಯೇ ಉಮೇದ್ ರಾಮ್ ಮತ್ತು ಮಹೇಂದ್ರ ಶರ್ಮಾ ವಿಕೃತವಾಗಿ ನಡೆದುಕೊಂಡಿದ್ದಾರೆ. ಮಹಿಳೆ ಮೇಲೆ ಹಲ್ಲೆ ಮಾಡಿದ್ದನ್ನ ಅಲ್ಲೇ ಇದ್ದವರು ವಿಡಿಯೋ ಮಾಡಿದ್ದಾರೆ. ಬಳಿಕ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಪೋಸ್ಟ್ ಮಾಡಿದ್ದಾರೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ. ಈ ಬೆನ್ನಲ್ಲೇ ಪೊಲೀಸರು ಕ್ರಮ ಕೈಗೊಂಡಿದ್ದಾರೆ.
ಮಹಿಳೆಯೊಬ್ಬರನ್ನು ನಡು ರಸ್ತೆಯಲ್ಲಿ ಬೂಟ್ ಕಾಲಿನಲ್ಲಿ ಒದ್ದು ಕ್ರೌರ್ಯ ಮೆರೆದ ಬಟ್ಟೆ ಅಂಗಡಿ ಮಾಲೀಕ ಉಮೇದ್ ರಾಮ್ ಮತ್ತು ಮತ್ತೊಬ್ಬ ಮಹೇಂದ್ರ ಶರ್ಮಾ ಎಂಬಿಬ್ಬರನ್ನು ಸಿಟಿ ಮಾರ್ಕೆಟ್ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಇಬ್ಬರನ್ನೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಆರೋಪಿಗಳು ಆರಂಭದಲ್ಲಿ ಮಹಿಳೆಯ ವಿರುದ್ಧ ದೂರು ನೀಡಿದ್ದರು. ಆದರೆ, ವಿಡಿಯೋ ವೈರಲ್ ಆದ ನಂತರ ಸತ್ಯ ಬಯಲಿಗೆ ಬಂದಿದೆ.

ನೋಡಿರಿ

