ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕನ ಪ್ಯಾಂಟ್ ಒಳಗೆ ಹೋಗಿ ಕಚ್ಚಿದ ಇಲಿ! – ಆಮೇಲೆ ಏನಾಯ್ತು?

ಎಲ್ಲಿ ಹೋದ್ರೂ ತಪ್ಪಲ್ಲ ಇಲಿಗಳ ಕಾಟ. ಮನೆ, ಹೋಟೆಲ್, ಬಸ್ ನಿಲ್ದಾಣಗಳಲ್ಲೂ ಇಲಿಗಳು ಕಾಣಿಸಿಕೊಳ್ತವೆ. ಅವುಗಳ ಕಾಟಕ್ಕೆ ಜನ ಹೈರಾಣಗಿದ್ದಾರೆ. ಇದೀಗ ಇಲ್ಲೊಂದು ಕಡೆ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕನೊಬ್ಬನ ಪ್ಯಾಂಟ್ ಒಳಗೆ ಹೋಗಿ ಇಲಿ ಕಚ್ಚಿರುವ ವಿಚಿತ್ರ ಘಟನೆ ನಡೆದಿದೆ.
ಇದನ್ನೂ ಓದಿ: ಸಿನಿ ರಸಿಕರಿಗೆ ಗುಡ್‌ನ್ಯೂಸ್ – ʼಕಾಂತಾರ: ಚಾಪ್ಟರ್ 1′ ಅಡ್ವಾನ್ಸ್ ಬುಕ್ಕಿಂಗ್ ಡೇಟ್ ಫಿಕ್ಸ್
ಏನಿದು ಘಟನೆ?
ಈ ವಿಚಿತ್ರ ಘಟನೆ ಮಧ್ಯಪ್ರದೇಶದ ಇಂದೋರ್ನ ದೇವಿ ಅಹಲ್ಯಾ ಬಾಯಿ ಹೋಳ್ಕರ್ ವಿಮಾನ ನಿಲ್ದಾಣದಲ್ಲಿ ನಡೆದಿದೆ. ಭೋಪಾಲ್ ನಗರದ ನಿವಾಸಿ ಅರುಣ್ ಮೋದಿ ಎನ್ನುವ ಐಟಿ ಉದ್ಯೋಗಿ ತನ್ನ ಹೆಂಡತಿಯೊಂದಿಗೆ ಬೆಂಗಳೂರಿಗೆ ಬರುತ್ತಿದ್ದರು. ಹೀಗಾಗಿ ಇಂದೋರ್ನ ದೇವಿ ಅಹಲ್ಯಾ ಬಾಯಿ ಹೋಳ್ಕರ್ ವಿಮಾನ ನಿಲ್ದಾಣದ ಕೆಳ ಮಹಡಿಗೆ ಬಂದು, ಕುಳಿತುಕೊಂಡು ವಿಮಾನಕ್ಕಾಗಿ ಕಾಯುತ್ತಿದ್ದರು. 3:05 ಗಂಟೆಗೆ ಇದ್ದ ವಿಮಾನಕ್ಕಾಗಿ ಅರುಣ್ ಮೋದಿ ತನ್ನ ಹೆಂಡತಿ ಜತೆ ಏರ್ಪೋರ್ಟ್ಗೆ ಮಧ್ಯಾಹ್ನ 1 ಗಂಟೆಗೆ ಬಂದಿದ್ದರು. ಕೆಳ ಮಹಡಿಯ ಹಾಲ್ನಲ್ಲಿ ಚೇರ್ ಮೇಲೆ ಕುಳಿತುಕೊಂಡು ಕಾಯುತ್ತಿರುವಾಗ ಇಲಿ ಓಡೋಡಿ ಬಂದು ನೇರ ಅವರ ಪ್ಯಾಂಟ್ ಒಳಗೆ ಹೋಗಿದೆ. ಇದರಿಂದ ಗಾಬರಿಗೊಂಡ ಅವರು ಅದನ್ನು ಹೊರ ತೆಗೆಯಲು ಹರಸಾಹಸ ಪಟ್ಟರು. ಪ್ಯಾಂಟ್ ಅನ್ನು ಅಲ್ಲೇ ಬಿಚ್ಚಿ ಇಲಿಯನ್ನು ಹೇಗೋ ಮಾಡಿ ಭಯದಿಂದಲೇ ಹಿಡಿದುಕೊಂಡು ಬೀಸಾಡಿದರು. ಆದರೆ ಇಲಿ ಪ್ಯಾಂಟ್ ಒಳಗೆ ಹೋಗ್ತಿದ್ದಂತೆ ಅರುಣ್ ಕಾಲಿಗೆ ಎರಡು ಬಾರಿ ಅವರ ಮೊಣಕಾಲಿಗೆ ಕಚ್ಚಿದೆ.
ಇನ್ನು ಅರುಣ್ ಗೆ ಇಲಿ ಕಚ್ಚಿರುವ ವಿಚಾರ ಗೊತ್ತಾಗುತ್ತಿದ್ದಂತೆ ಏರ್ಪೋರ್ಟ್ ಸಿಬ್ಬಂದಿ ಅವರ ಬಳಿಗೆ ಆಗಮಿಸಿ ತಕ್ಷಣ ಮೆಡಿಕಲ್ ರೂಮ್ಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಅಲ್ಲಿ ರೇಬಿಸ್ ಲಸಿಕೆ ಇರಲಿಲ್ಲ. ಟಿಟನಸ್ ಶಾಟ್ (Tetanus Shot) ಕೂಡ ಲಭ್ಯ ಇರಲಿಲ್ಲ. ಬಳಿಕ ಅಲ್ಲಿನ ಮತ್ತೊಬ್ಬ ಸಿಬ್ಬಂದಿ ಬಂದು ಟಿಟನಸ್ ಅನ್ನ ವ್ಯವಸ್ಥೆ ಮಾಡಿದ್ದಾರೆ. ಬಳಿಕ ಬೆಂಗಳೂರಿಗೆ ಬಂದ ನಂತರ ಇಲಿ ಕಚ್ಚಿದ್ದಕ್ಕೆ ಚಿಕಿತ್ಸೆ ತೆಗೆದುಕೊಂಡಿದ್ದಾರೆ. ಇಂದೋರ್ ವಿಮಾನ ನಿಲ್ದಾಣದಲ್ಲಿ ಈ ರೀತಿಯಾದ ಘಟನೆ ನಡೆಯುವುದು ಇದೇ ಮೊದಲಲ್ಲ. ಈ ಹಿಂದೆಯೂ ಪ್ರಯಾಣಿಕರಿಗೆ ಇಲಿ ಕಚ್ಚಿದೆ ಎಂದು ಹೇಳಲಾಗ್ತಿದೆ.

ನೋಡಿರಿ

