ಭಾರತದ ಅತಿದೊಡ್ಡ ಶತ್ರು ಬೇರೆ ದೇಶದ ಮೇಲಿನ ಅವಲಂಬನೆ – ಪ್ರಧಾನಿ ನರೇಂದ್ರ ಮೋದಿ

ಭಾರತದ ಅತಿದೊಡ್ಡ ಶತ್ರು ಬೇರೆ ದೇಶದ ಮೇಲಿನ ಅವಲಂಬನೆ – ಪ್ರಧಾನಿ ನರೇಂದ್ರ ಮೋದಿ

ಪ್ರಧಾನಿ ನರೇಂದ್ರ ಮೋದಿ ಗುಜರಾತ್‌ನಲ್ಲಿಂದು ಹಲವಾರು ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು. ಈ ವೇಳೆ ಮಾತಾನಾಡಿದ ಮೋದಿ  ಭಾರತದ ಅತಿದೊಡ್ಡ ಸವಾಲು ಇತರ ದೇಶಗಳ ಮೇಲಿನ ಅವಲಂಬನೆಯಾಗಿದೆ ಎಂದು  ಹೇಳಿದ್ದಾರೆ. ಬೇರೆ ದೇಶಗಳ ಮೇಲಿನ ಅವಲಂಬನೆಯು ದೇಶದ ನಿಜವಾದ ಶತ್ರು. ವಿದೇಶಿ ರಾಷ್ಟ್ರಗಳ ಮೇಲಿನ ಹೆಚ್ಚಿನ ಅವಲಂಬನೆಯು ಭಾರತವನ್ನು ಹಿನ್ನಡೆಗಳಿಗೆ ಗುರಿಯಾಗಿಸುತ್ತದೆ. ಆದ್ದರಿಂದ ಈ ದುರ್ಬಲತೆಯನ್ನು ನಿವಾರಿಸುವಲ್ಲಿ ಎಲ್ಲರೂ ಒಗ್ಗೂಡಬೇಕೆಂದು ಮೋದಿ ಒತ್ತಾಯಿಸಿದರು.

ಇದನ್ನೂ ಓದಿ: ದಯವಿಟ್ಟು ನನ್ನ ಕಷ್ಟವನ್ನೂ ಅರ್ಥಮಾಡಿಕೊಳ್ಳಿ.. ದೂರು ಹೇಳಲು ಬಂದ ಜನರ ಬಳಿಯೇ ತನ್ನ ಕಷ್ಟ ಹೇಳಿದ ಸಂಸದೆ ಕಂಗನಾ!

ಭಾವನಗರದಲ್ಲಿ ನಡೆದ ಸಾರ್ವಜನಿಕ ಱಲಿಯನ್ನು ಉದ್ದೇಶಿಸಿ ಮಾತನಾಡಿದ ಮೋದಿ ಸ್ವಾವಲಂಬನೆಯ ಅಗತ್ಯವನ್ನು ಪುನರುಚ್ಚರಿಸಿದರು.  ಇಂದು ಭಾರತ ವಿಶ್ವಬಂಧು  ಮನೋಭಾವದೊಂದಿಗೆ ಮುಂದುವರಿಯುತ್ತಿದೆ. ನಮಗೆ ಜಗತ್ತಿನಲ್ಲಿ ಯಾವುದೇ ಪ್ರಮುಖ ಶತ್ರುವಿಲ್ಲ. ನಮ್ಮ ದೊಡ್ಡ ಶತ್ರು ಎಂದರೆ ಇತರ ದೇಶಗಳ ಮೇಲಿನ ನಮ್ಮ ಅವಲಂಬನೆ. ಇದು ನಮ್ಮ ದೊಡ್ಡ ಶತ್ರು. ನಾವು ಒಟ್ಟಾಗಿ ಭಾರತದ ಈ ಶತ್ರುವಾದ ಅವಲಂಬನೆಯನ್ನು ಸೋಲಿಸಬೇಕು ಎಂದು ಅವರು ಕರೆನೀಡಿದರು. ವಿದೇಶಿ ಅವಲಂಬನೆ ಹೆಚ್ಚಾದಷ್ಟೂ ದೇಶದ ವೈಫಲ್ಯ ಹೆಚ್ಚಾಗುತ್ತದೆ. ಜಾಗತಿಕ ಶಾಂತಿ, ಸ್ಥಿರತೆ ಮತ್ತು ಸಮೃದ್ಧಿಗಾಗಿ, ವಿಶ್ವದ ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ದೇಶವು ಆತ್ಮನಿರ್ಭರವಾಗಬೇಕು. ನಾವು ಇತರರ ಮೇಲೆ ಅವಲಂಬಿತರಾಗಿದ್ದರೆ, ನಮ್ಮ ಸ್ವಾಭಿಮಾನಕ್ಕೆ ಧಕ್ಕೆಯಾಗುತ್ತದೆ. 1.4 ಶತಕೋಟಿ ದೇಶವಾಸಿಗಳ ಭವಿಷ್ಯವನ್ನು ನಾವು ಇತರರಿಗೆ ಬಿಡಲು ಸಾಧ್ಯವಿಲ್ಲ ಎಂದು ಪ್ರಧಾನಿ ಹೇಳಿದರು.

ಮೋದಿ ಚಿತ್ರಬಿಡಿಸಿ ಕೊಟ್ಟ ಬಾಲಕ 

ಇನ್ನು ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದಾಗ ದೂರದಲ್ಲಿ ಒಬ್ಬ ಬಾಲಕ ಬಹಳ ಹೊತ್ತಿನಿಂದ ತಾನೇ ಬಿಡಿಸಿದ್ದ ಪ್ರಧಾನಿ ಮೋದಿಯ ಚಿತ್ರವನ್ನು ತೋರಿಸುತ್ತಾ ಕೈಬೀಸುತ್ತಿದ್ದ. ಇದನ್ನು ಗಮನಿಸಿದ ಮೋದಿ ತಮ್ಮ ಭಾಷಣವನ್ನು ಅರ್ಧಕ್ಕೆ ನಿಲ್ಲಿಸಿ ತಮ್ಮ ಸಿಬ್ಬಂದಿಯ ಬಳಿ ಆ ಚಿತ್ರವನ್ನು ತೆಗೆದುಕೊಂಡು ಬರಲು ಸೂಚಿಸಿದರು. “ಒಬ್ಬ ಪುಟ್ಟ ಹುಡುಗ ನನ್ನ ಚಿತ್ರ ಬಿಡಿಸಿದ್ದಾನೆ. ಇಷ್ಟು ಹೊತ್ತು ಅಲ್ಲಿ ನಿಂತು ಆ ಚಿತ್ರವನ್ನು ತೋರಿಸುತ್ತಿರುವುದರಿಂದ ಅವನ ಕೈಗಳು ನೋಯುತ್ತಿರಬಹುದು. ಯಾರಾದರೂ ದಯವಿಟ್ಟು ಅದನ್ನು ತೆಗೆದುಕೊಂಡು ಬನ್ನಿ. ಚೆನ್ನಾಗಿ ಚಿತ್ರ ಬಿಡಿಸಿದ್ದ ಮಗುವೇ  ಎಂದು ಪ್ರಧಾನಿ ಮೋದಿ ಹೇಳಿದರು. ಆಗ ಅಲ್ಲಿದ್ದ ಸಿಬ್ಬಂದಿ ಆ ಬಾಲಕನ ಬಳಿ ಹೋಗಿ ಪ್ರಧಾನಿ ಮೋದಿಯ ಚಿತ್ರವನ್ನು ತೆಗದುಕೊಂಡು ಮೋದಿಗೆ ನೀಡಿದರು. ತಾನು ಬಿಡಿಸಿದ ಚಿತ್ರ ಮೋದಿಯನ್ನು ತಲುಪಿದ ಕೂಡಲೆ ಭಾವುಕನಾದ ಆ ಪುಟ್ಟ ಬಾಲಕ ಅಳತೊಡಗಿದನು. ಅದನ್ನು ನೋಡಿ ಪ್ರಧಾನಿ ಮೋದಿ ಆತನಿಗೆ ಸಾಂತ್ವನ ಹೇಳಿದ್ದಾರೆ.  ನೀನು ಬಿಡಿಸಿದ ಚಿತ್ರ ನನಗೆ ಸಿಕ್ಕಿತು, ಇನ್ನು ಅಳುವ ಅಗತ್ಯವಿಲ್ಲ. ಅದರ ಮೇಲೆ ನಿನ್ನ ವಿಳಾಸವಿದ್ದರೆ ನಾನು ಖಂಡಿತ ನಿನಗೆ ಪತ್ರ ಬರೆಯುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಇದಾದ ನಂತರ ಆ ಬಾಲಕ ನೀರು ಕುಡಿದು ಅಳು ನಿಲ್ಲಿಸಿದನು. ಮೋದಿಯವರ ಸಿಬ್ಬಂದಿ ಆ ಬಾಲಕನಿಂದ ಆತನ ವಿಳಾಸವನ್ನು ತೆಗೆದುಕೊಂಡರು.

Kishor KV