ಕಳಪೆ ಬ್ಯಾಟ್, ಕಳಪೆ ಕ್ರಿಕೆಟ್ ಕಿಟ್ – ಪಾಕ್ ಕ್ರಿಕೆಟ್ ಮಂಡಳಿ ವಿರುದ್ಧ ಭ್ರಷ್ಟಚಾರ ಆರೋಪ

ಪ್ರಸ್ತುತ ನಡೆಯುತ್ತಿರುವ ಏಷ್ಯಾ ಕಪ್ ಟೂರ್ನಿಯಲ್ಲಿ ಹ್ಯಾಂಡ್ಶೇಕ್ ವಿವಾದದಿಂದ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಭಾರಿ ಮುಜುಗರ ಅನುಭವಿಸಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ಇದೀಗ ಮತ್ತೊಂದು ಹಿನ್ನಡೆಯಾಗಿದೆ. ಪಾಕಿಸ್ತಾನ ತಂಡದ ಆಟಗಾರರಿಗೆ ನೀಡಿರುವ ಕ್ರಿಕೆಟ್ ಕಿಟ್ ಕಳಪೆಯಿಂದ ಕೂಡಿದೆ ಎಂದು ಮಾಜಿ ಕ್ರಿಕೆಟಿಗ ಅತಿಕ್ ಉಝ್ ಝಮಾನ್ ಗಂಭೀರ ಆರೋಪ ಮಾಡಿದ್ದಾರೆ. ಅಲ್ಲದೆ ಪಾಕಿಸ್ತಾನ ತಂಡದ ಕಿಟ್ ಟೆಂಡರ್ ಅನ್ನು ಸ್ನೇಹಿತರೊಬ್ಬರಿಗೆ ನೀಡಲಾಗಿದೆ ಎಂದು ಕೂಡ ಅವರು ಟೀಕಿಸಿದ್ದಾರೆ. ಪಾಕ್ ಆಟಗಾರರು ಧರಿಸಿರುವ ಜೆರ್ಸಿ ಉತ್ತಮ ಗುಣಮಟ್ಟವನ್ನು ಹೊಂದಿಲ್ಲ ಎಂದು ದೂರಿದ್ದಾರೆ.
ಇದನ್ನೂ ಓದಿ: ನಡು ರಸ್ತೆಯಲ್ಲೇ ಮಲಗಿದ ಭೂಪ! – ಅಕ್ಕ ಪಕ್ಕ ವಾಹನ ಓಡಾಡಿದ್ರೂ ಡೋಂಟ್ ಕೇರ್!
ಬುಧವಾರ ಯುಎಇ ವಿರುದ್ದದ ಪಂದ್ಯದ ಗೆಲುವಿನ ಬಳಿಕ ಪಾಕಿಸ್ತಾನ ತಂಡ ಏಷ್ಯಾ ಕಪ್ ಟೂರ್ನಿಯ ಸೂಪರ್ 4 ರ ಹಂತಕ್ಕೆ ಅರ್ಹತೆ ಪಡೆದಿದೆ. ಅಂದ ಹಾಗೆ ಯುಎಇ ವಿರುದ್ಧದ ಪಂದ್ಯದ ವೇಳೆ ಪಾಕಿಸ್ತಾನ ತಂಡದ ಆಟಗಾರರು ಬೆವರುತ್ತಿದ್ದರು ಹಾಗೂ ಜೆರ್ಸಿ ಒದ್ದೆಯಾಗುತ್ತಿತ್ತು ಮತ್ತು ಬೇಗ ಒಣಗುತ್ತಿರಲಿಲ್ಲ. ಆದರೆ, ಎದುರಾಳಿ ಆಟಗಾರರ ಜೆರ್ಸಿ ಬೆವರು ಬಹುಬೇಗ ಒಣಗುತ್ತಿತ್ತು. ಅಂದ ಹಾಗೆ ಪಾಕಿಸ್ತಾನ ತಂಡದ ಕಿಟ್ ತಯಾರು ಮಾಡುವ ಟಿಂಡರ್ ಅನ್ನು ವೃತ್ತಿಪರ ಸಂಸ್ಥೆಗೆ ನೀಡದೆ, ಸ್ನೇಹಿತರೊಬ್ಬರಿಗೆ ನೀಡಲಾಗಿದೆ ಎಂದು ತಮ್ಮ ಎಕ್ಸ್ ಖಾತೆಯಲ್ಲಿ ಅತಿಕ್ ಉಝ್ ಝಮಾನ್ ಆರೋಪ ಮಾಡಿದ್ದಾರೆ.
ಕಳಪೆ ಗುಣಮಟ್ಟ ಕಿಟ್ನಿಂದಾಗಿ ಪಾಕಿಸ್ತಾನ ಆಟಗಾರರು ಬೆವರುತ್ತಿದ್ದರು ಆದರೆ, ಎದುರಾಳಿ ತಂಡಗಳ ಆಟಗಾರರು ಉತ್ತಮ ಗುಣಮಟ್ಟದ ಜೆರ್ಸಿಗಳನ್ನು ಧರಿಸಿದ್ದರು ಹಾಗೂ ಇದು ಬಹುಬೇಗ ಒಣಗುತ್ತದೆ. ವೃತ್ತಿಪರ ಕಿಟ್ ತಯಾರು ಮಾಡುವವರಿಗೆ ನೀಡದೆ, ಸ್ನೇಹಿತರಿಗೆ ಟೆಂಡರ್ ನೀಡದರೆ ಈ ರೀತಿಯ ಸಮಸ್ಯೆಗಳು ಎದುರಾಗುತ್ತವೆ. ಬೆವರಿಗಿಂತ ಭ್ರಷ್ಟಾಚಾರವೇ ಹೆಚ್ಚು ತೊಟ್ಟಿಕ್ಕುತ್ತಿದೆ,” ಎಂದು ಝಮಾನ್ ಎಕ್ಸ್ ಖಾತೆಯಲ್ಲಿ ಗಂಭೀರ ಆರೋಪ ಮಾಡಿದ್ದಾರೆ.
ಝಮಾನ್ ಅವರ ಟ್ವೀಟ್ಗೆ ಅನೇಕ ಅಭಿಮಾನಿಗಳು ಕೂಡ ಪ್ರತಿಕ್ರಿಯೆ ನೀಡಿದ್ದಾರೆ ಹಾಗೂ ಅಭಿಮಾನಿಗಳು ಕೂಡ ಇದೇ ರೀತಿ ದೂರಿದ್ದಾರೆ. ರಾಷ್ಟ್ರೀಯ ತಂಡಕ್ಕೆ ಕಿಟ್ ಪ್ರಾಯೋಜಕರು ಯಾರೆಂದು ಪಿಸಿಬಿ ವೆಬ್ಸೈಟ್ನಲ್ಲಿ ಉಲ್ಲೇಖ ಮಾಡಿಲ್ಲ. ಆದರೆ, ಇನ್ನುಳಿದ ಪ್ರಾಯೋಜಕರಾದ ಪೆಪ್ಸಿ, ಟಿಸಿಎಲ್ ಹಾಗೂ ಪಾರ್ಕ್ವ್ಯೂವ್ ಸಿಟಿಯನ್ನು ಉಲ್ಲೇಖಿಸಲಾಗಿದೆ. ಭಾರತ ಕ್ರಿಕೆಟ್ ತಂಡಕ್ಕೆ ಜರ್ಮನ್ ದೈತ್ಯ ಸಂಸ್ಥೆಯಾದ ಅಡಿಡಾಸ್ ಪ್ರಾಯೋಜಕತ್ವವನ್ನು ಹೊಂದಿದೆ.

ನೋಡಿರಿ

