ಪ್ರಧಾನಿ ಮೋದಿ ಅವರ ಸಹೋದರ ಪ್ರಹ್ಲಾದ್ ಮೋದಿ ಪ್ರಯಾಣಿಸುತ್ತಿದ್ದ ಕಾರು ಅಪಘಾತ
ಮೋದಿ ಕುಟುಂಬ ಸದಸ್ಯರಿಗೆ ಸಣ್ಣಪುಟ್ಟ ಗಾಯ- ಅಪಾಯದಿಂದ ಪಾರು
ಮೈಸೂರು: ಪ್ರಧಾನಿ ನರೇಂದ್ರ ಮೋದಿ ಅವರ ಸಹೋದರ ಪ್ರಹ್ಲಾದ್ ಮೋದಿ ಅವರು ಪ್ರಯಾಣ ಮಾಡುತ್ತಿದ್ದ ಕಾರು ಅಪಘಾತಕ್ಕೀಡಾಗಿದ್ದು, ಸಣ್ಣಪುಟ್ಟ ಗಾಯಗಳಿಂದ ಪ್ರಾಣಾಪಾಯದಿಂದ ಇಡೀ ಕುಟುಂಬ ಪಾರಾಗಿದೆ. ಬೆಂಗಳೂರಿನಿಂದ ಬಂಡೀಪುರಕ್ಕೆ ತೆರಳುತ್ತಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ಸಹೋದರ ಪ್ರಹ್ಲಾದ್ ಮೋದಿ ಅವರಿದ್ದ ಕಾರು ಮೈಸೂರು ತಾಲೂಕಿನ ಕಡಕೊಳ ಬಳಿ ಅಪಘಾತಕ್ಕೀಡಾಗಿತ್ತು.
ಇದನ್ನೂ ಓದಿ: ಚಾಮುಂಡೇಶ್ವರಿ ಸನ್ನಿಧಿಯಲ್ಲಿ ವಸ್ತ್ರಸಂಹಿತೆ ನೀತಿ ಜಾರಿ ಮಾಡಿ – ಅಭಿಯಾನಕ್ಕೆ ಪ್ರತಾಪ್ ಸಿಂಹ ಬೆಂಬಲ
ಮರ್ಸಿಡಿಸ್ ಬೆಂಜ್ ಕಾರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಸಹೋದರ ಪ್ರಹ್ಲಾದ್ ದಾಮೋದರ್ ಮೋದಿ (70), ಪ್ರಹ್ಲಾದ್ ಮೋದಿ ಪುತ್ರ ಮೆಹೂಲ್ ಪ್ರಹ್ಲಾದ್ ಮೋದಿ (40), ಸೊಸೆ ಜಿಂದಾಲ್ ಮೋದಿ (35) ಮೊಮ್ಮಗ ಮಾಸ್ಟರ್ ಮೆಹತ್ ಮೆಹೋಲ್ ಮೋದಿ (06) ಹಾಗೂ ಕಾರು ಚಾಲಕ ಸತ್ಯನಾರಾಯಣ (46) ಬಂಡೀಪುರಕ್ಕೆ ತೆರಳುತ್ತಿದ್ದರು. ಈ ವೇಳೆ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಮೋದಿ ಸಹೋದರನ ಮೊಮ್ಮಗನ ಕಾಲಿಗೆ ಹಾಗೂ ಪ್ರಹ್ಲಾದ್ ಮೋದಿ ಮುಖದ ಬಳಿ ಗಾಯವಾಗಿದೆ. ಉಳಿದ ಯಾರಿಗೂ ದೊಡ್ಡ ಪ್ರಮಾಣದಲ್ಲಿ ಗಾಯಗಳಾಗಿಲ್ಲ. ಎಲ್ಲರೂ ಸುರಕ್ಷಿತವಾಗಿದ್ದಾರೆ. ಆತಂಕಪಡುವ ಅವಶ್ಯಕತೆಯಿಲ್ಲ ಎಂದು ಜೆಎಸ್ಎಸ್ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ. ಸಿಎಂ ಕಚೇರಿಗೆ ಈ ಬಗ್ಗೆ ಮಾಹಿತಿ ನೀಡಿದ್ದು, ವೈದ್ಯರಿಂದ ಚಿಕಿತ್ಸೆ ನಡೆಯುತ್ತಿದೆ.