ದಲಿತ ಮಹಿಳೆಯರ ವಿರುದ್ಧ ಅವಹೇಳನಕಾರಿ ಹೇಳಿಕೆ ಆರೋಪ – ಶಾಸಕ ಬಸನಗೌಡ ಯತ್ನಾಳ್ ವಿರುದ್ಧ ಪ್ರಕರಣ ದಾಖಲು

ದಲಿತ ಮಹಿಳೆಯರ ವಿರುದ್ಧ ಅವಹೇಳನಕಾರಿ ಹೇಳಿಕೆ ಆರೋಪ – ಶಾಸಕ ಬಸನಗೌಡ ಯತ್ನಾಳ್ ವಿರುದ್ಧ ಪ್ರಕರಣ ದಾಖಲು

ಬಿಜೆಪಿ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸದಾ ಒಂದಲ್ಲ ಒಂದು ವಿವಾದಾತ್ಮಕ ಹೇಳಿಕೆ ನೀಡಿ ಸುದ್ದಿಯಲ್ಲಿರ್ತಾರೆ. ಇದೀಗ ದಲಿತ ಮಹಿಳೆಯ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂಬ ಆರೋಪದ ಮೇಲೆ ಯತ್ನಾಳ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಇದನ್ನೂ ಓದಿ: ರಾಜ್‌ ಬಿ ಹೊಸ ಪ್ರಾಜೆಕ್ಟ್‌ನಲ್ಲಿ ಸು ಫ್ರಮ್‌ ಸೋ ಭಾನು! – ಮುಂದಿನ ಚಿತ್ರದಲ್ಲೂ ನಟಿ ಸಂಧ್ಯಾ ನಾಯಕಿ!

ಮೈಸೂರು ದಸರಾ ಉದ್ಘಾಟನಾ ವಿಚಾರವಾಗಿ, ಸನಾತನ ಧರ್ಮದವರು ಮಾತ್ರ ಚಾಮುಂಡಿಗೆ ಹೂ ಮುಡಿಸಬೇಕು, ಸಾಮಾನ್ಯ ದಲಿತ ಮಹಿಳೆಗೂ ಅವಕಾಶ ಇಲ್ಲಎಂದಿದ್ದ ವಿಚಾರವಾಗಿ ಕೊಪ್ಪಳದಲ್ಲಿ ಎಫ್​ಐಆರ್ ದಾಖಲಾಗಿದೆ. ಈ ಕುರಿತು ಕೊಪ್ಪಳ ನಗರದ ದಲಿತ ಸಂಘಟನೆಯ ಯುವ ಮುಖಂಡ ಮಲ್ಲಿಕಾರ್ಜುನ ಪೂಜಾರ ಅವರು ದೂರು ದಾಖಲಿಸಿದ್ದು, ಯತ್ನಾಳ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿಕೊಂಡಿದ್ದಾರೆ. ದೂರಿನನ್ವಯ ಕೊಪ್ಪಳ ನಗರ ಠಾಣೆಯಲ್ಲಿ SC/ST ಕಾಯ್ದೆಯಡಿ ಜಾತಿನಿಂದನೆ ಪ್ರಕರಣ ದಾಖಲಾಗಿದೆ.

ದೂರಿನಲ್ಲಿ ಏನಿದೆ?

ಕಳೆದ ಎರಡು ದಿನಗಳ ಹಿಂದೆ ಯತ್ನಾಳ್ ಅವರು ಮಾಧ್ಯಮಗಳೊಂದಿಗೆ ಮಾತನಾಡುವ ಸಂದರ್ಭದಲ್ಲಿ, ಹಿಂದೂಗಳ ನಾಡಹಬ್ಬ ಮೈಸೂರು ದಸರಾ ಉದ್ಘಾಟನೆ ಮಾಡಲಿರುವ ಬಾನು ಮುಷ್ತಾಕ್ ವಿರುದ್ಧ ಮಾತನಾಡುವ ಭರಾಟೆಯಲ್ಲಿ ಸನಾತನ ಧರ್ಮದವರು ಮಾತ್ರ ತಾಯಿ ಚಾಮುಂಡಿಗೆ ಹೂ ಮುಡಿಸಬೇಕು ಹೊರತು ಒಬ್ಬ ದಲಿತ ಮಹಿಳೆಗೂ ಅವಕಾಶ ಕೊಡಲ್ಲ ಎಂದು ಹೇಳಿಕೆ ನೀಡಿ ದಲಿತ ಮಹಿಳೆಯರಿಗೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ದಲಿತ ಹೆಣ್ಣುಮಕ್ಕಳ ಬಗ್ಗೆ ಕೀಳು ಮಟ್ಟದಲ್ಲಿ ಮಾತನಾಡಿರುವುದು ದಲಿತ ಸಮುದಾಯಕ್ಕೆ ನೋವಾಗಿದೆ. ಅವರು ಮಾತನಾಡಿರುವ ವಿಡಿಯೋ ಆಧಾರದಲ್ಲಿ ಅವರ ವಿರುದ್ಧ SC/ST ಜಾತಿನಿಂದನೆ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು ಮತ್ತು ಯತ್ನಾಳ್ ಅವರು ರಾಜ್ಯದ ಹಲವು ಜಿಲ್ಲೆಗಳಿಗೆ ತೆರಳಿ ಕೋಮು ಸಂಘರ್ಷ ಸೃಷ್ಟಿಸುವಂತಹ ಹೇಳಿಕೆ ನೀಡುತ್ತಿರುವುದಕ್ಕೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದ್ದಾರೆ.

 

Shwetha M