ಕೆಡಿ ಅಖಾಡಕ್ಕೆ ಎಂಟ್ರಿ ಕೊಟ್ಟ ಕಿಚ್ಚ! –  ಅತಿಥಿ ಪಾತ್ರದಲ್ಲಿ ಸುದೀಪ್?

ಕೆಡಿ ಅಖಾಡಕ್ಕೆ ಎಂಟ್ರಿ ಕೊಟ್ಟ ಕಿಚ್ಚ! –  ಅತಿಥಿ ಪಾತ್ರದಲ್ಲಿ ಸುದೀಪ್?

ಈ ವರ್ಷದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಪ್ರೇಮ್‌ ನಿರ್ದೇಶನದ, ಧ್ರುವ ಸರ್ಜಾ ನಟನೆಯ ಕೆಡಿ ಸಿನಿಮಾ ಕೂಡ ಒಂದು. ಇದೇ ಅಕ್ಟೋಬರ್‌ನಲ್ಲಿ ಸಿನಿಮಾ ತೆರೆಗೆ ಬರಲು ಸಜ್ಜಾಗಿದೆ. ಕಳೆದ ಕೆಲ ದಿನಗಳಿಂದ ಈ ಸಿನಿಮಾದಲ್ಲಿ ಸುದೀಪ್‌ ನಟಿಸಲಿದ್ದಾರೆ ಎಂಬ ಮಾತು ಕೇಳಿ ಬಂದಿತ್ತು. ಇದೀಗ ಈ ಮಾತು ನಿಜವಾಯ್ತಾ ಅನ್ನೋ ಅನುಮಾನ ಕಾಡ್ತಿದೆ. ಕೆಡಿ ಸಿನಿಮಾ ಶೂಟಿಂಗ್‌ ಸೆಟ್‌ ನಲ್ಲಿ ಕಿಚ್ಚ ಸುದೀಪ್‌ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ: ಹೂವಿನ ಬಾಣದ ಗಾಯಕಿ ಸೆಲೆಬ್ರಿಟಿ.. ವೈರಲ್‌ ಹುಡ್ಗಿ ಸಾಂಗ್‌ಗೆ ಸ್ಟಾರ್ಸ್‌ ರೀಲ್ಸ್‌ – ಎಲ್ಲೆಲ್ಲೂ ಮಂಡ್ಯ ಹುಡುಗಿ ಹವಾ!

ಕೆಡಿ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗೆ ಬರುತ್ತಿದೆ. ಈಗಾಗಲೇ  ಸಿನಿಮಾ  ಶೂಟಿಂಗ್ ಭರದಿಂದ ಸಾಗಿದೆ. ಧ್ರುವ ಸರ್ಜಾ ನಟಿಸುತ್ತಿರುವ ಕೆಡಿ ಸಿನಿಮಾದ ಚಿತ್ರೀಕರಣ ಹೈದರಾಬಾದ್​​ನ ರಾಮೋಜಿ ಫಿಲಂ ಸಿಟಿ ಸ್ಟುಡಿಯೋನಲ್ಲಿ ನಡೆಯುತ್ತಿದೆ. ಸಿನಿಮಾ ಚಿತ್ರೀಕರಣಕ್ಕಾಗಿ ದೊಡ್ಡ ರೈಲಿನ ಸೆಟ್ ಹಾಕಿ ಆಕ್ಷನ್ ದೃಶ್ಯದ ಚಿತ್ರೀಕರಣವನ್ನು ಮಾಡಲಾಗುತ್ತಿದೆ. ಈಗಾಗಲೇ ಧ್ರುವ ಸರ್ಜಾ ನಾಯಕರಾಗಿರುವ ಈ ಸಿನಿಮಾದಲ್ಲಿ ಹಲವು ದೊಡ್ಡ ಸ್ಟಾರ್​​ಗಳನ್ನು ಅತಿಥಿ ಪಾತ್ರಗಳಿಗೆ ಹಾಕಿಕೊಂಡಿದ್ದಾರೆ. ಇದೀಗ ಸ್ಯಾಂಡಲ್‌ವುಡ್‌ ಬಾದ್‌ಷಾ ಕಿಚ್ಚ ಸುದೀಪ್ ಕೆಡಿ ಸಿನಿಮಾಗೆ ಕೈಜೋಡಿಸಿದ್ರಾ ಅನ್ನೋ ಅನುಮಾನ ಮೂಡಿದೆ. ಸಿನಿಮಾ ಸೆಟ್​​ಗೆ ಕಿಚ್ಚ ಸುದೀಪ್ ಭೇಟಿ ನೀಡಿದ್ದು, ಸಿನಿಮಾದ ಅತಿಥಿ ಪಾತ್ರದಲ್ಲಿ ಕಿಚ್ಚ ನಟಿಸಲಿದ್ದಾರೆಯೇ ಎಂಬ ಅನುಮಾನ ವ್ಯಕ್ತವಾಗಿದೆ.

ಸುದೀಪ್ ಅವರು ಈ ಹಿಂದೆ ಪ್ರೇಮ್ ನಿರ್ದೇಶನದ ದಿ ವಿಲನ್ ಸಿನಿಮಾನಲ್ಲಿ ನಟಿಸಿದ್ದಾರೆ. ಆದರೆ ಆ ಸಿನಿಮಾ ನಿರೀಕ್ಷಿತ ಮಟ್ಟದಲ್ಲಿ ಪ್ರೇಕ್ಷಕರನ್ನು ತಲುಪಿರಲಿಲ್ಲ. ಇದೀಗ ಹಲವು ಸ್ಟಾರ್ ನಟ-ನಟಿಯರನ್ನು ಗುಡ್ಡೆ ಹಾಕಿಕೊಂಡು ಪ್ರೇಮ್ ಅವರು ಕೆಡಿ ಸಿನಿಮಾ ಮಾಡುತ್ತಿದ್ದು, ಧ್ರುವ ಸರ್ಜಾ ಪಾಲಿಗೆ ಇದು ಮಹತ್ವದ ಸಿನಿಮಾ ಆಗಿದೆ. ಧ್ರುವ ಸರ್ಜಾ, ಸುದೀಪ್ ಅವರ ಆಪ್ತ ನಟ ಆಗಿರುವ ಕಾರಣ, ಇದೀಗ ಸುದೀಪ್  ಕೆಡಿ  ಸಿನಿಮಾನಲ್ಲಿ ಮಹತ್ವದ ಅತಿಥಿ ಪಾತ್ರದಲ್ಲಿ ನಟಿಸಲು ಒಪ್ಪಿಕೊಂಡಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಇನ್ನಷ್ಟೆ ಚಿತ್ರತಂಡದಿಂದ ಹೊರಬೀಳಬೇಕಿದೆ.

ಕೆಡಿ ಸಿನಿಮಾ 80ರ ದಶಕದ ರೌಡಿಸಂ ಕತೆಯನ್ನು ಒಳಗೊಂಡಿದ್ದು, ಸಿನಿಮಾನಲ್ಲಿ ಬಾಲಿವುಡ್ ಸ್ಟಾರ್ ನಟ, ‘ಕೆಜಿಎಫ್’ ಅಧೀರ ಖ್ಯಾತಿಯ ಸಂಜಯ್ ದತ್ ವಿಲನ್ ಪಾತ್ರದಲ್ಲಿ ನಟಿಸಿದ್ದಾರೆ. ಇನ್ನು ಸಿನಿಮಾನಲ್ಲಿ ಬಾಲಿವುಡ್ ಬೆಡಗಿ, ಕನ್ನಡ ಚಿತ್ರರಂಗಕ್ಕೆ ಚಿರಪರಿಚಿತರಾಗಿರುವ ಶಿಲ್ಪಾ ಶೆಟ್ಟಿ ಸಹ ನಟಿಸುತ್ತಿದ್ದಾರೆ. ರೇಷ್ಮಾ ನಾಣಯ್ಯ ಸಿನಿಮಾದ ನಾಯಕಿ. ರವಿಚಂದ್ರನ್, ರಮೇಶ್ ಅರವಿಂದ್ ಹಾಗೂ ಅಭಿಜಿತ್ ಅವರುಗಳು ಹಿಂದೆಂದೂ ಕಾಣದಿದ್ದ ರೀತಿಯ ರಫ್ ಪಾತ್ರದಲ್ಲಿ ಈ ಸಿನಿಮಾನಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾನಲ್ಲಿ ಮೋಹನ್​​ಲಾಲ್ ಸಹ ಇದ್ದಾರೆ ಎನ್ನಲಾಗುತ್ತಿದೆ. ಸಿನಿಮಾದ ಐಟಂ ಹಾಡಿಗೆ ನೋರಾ ಫತೇಹಿ ಸೊಂಟ ಕುಣಿಸಿದ್ದಾರೆ. ಸಿನಿಮಾ ಕೆಲವೇ ತಿಂಗಳಲ್ಲಿ ಬಿಡುಗಡೆ ಆಗಲಿದೆ.

Shwetha M