ಹಾಸನ ದುರಂತದಲ್ಲಿ ಮನಕಲಕುವ ಕಥೆ – ವಿಧಿ ನೀ ಇಷ್ಟು ಕ್ರೂರಿ ಯಾಕಾದೆ?

ಗಣೇಶ ಮೂರ್ತಿ ಮೆರವಣಿಗೆ ಭಕ್ತಿಯಿಂದ ಸಾಗುತ್ತಿತ್ತು. ವಿಘ್ನವಿನಾಯಕನ ಆರಾಧನೆ ಮಾಡುವಾಗಲೇ ವಿಘ್ನ ಹುಡುಕಿಕೊಂಡು ಬರುತ್ತದೆ ಅನ್ನೋ ಸಣ್ಣ ಕಲ್ಪನೆಯೂ ಆ ಭಕ್ತರಿಗೆ ಇರಲಿಲ್ಲ. ಅಲ್ಲೊಂದು ಸಂಭ್ರಮವಿತ್ತು.. ಸ್ನೇಹಿತರ ಸಮ್ಮಿಲನವಿತ್ತು.. ಗಣಪನ ಮೆರವಣಿಗೆಯ ಖುಷಿಯಿತ್ತು.. ಆದರೆ, ಸಾವು.. ಈ ಸಾವಿಗೆ ಯಾವುದೂ ಇರಲಿಲ್ಲ. ಎಲ್ಲೋ ಇದ್ದವರನ್ನೂ ಹುಡುಕಿಕೊಂಡು ಬಂದಿತ್ತು ಸಾವು.. ಹಾಸನದಲ್ಲಿ ಮೃತಪಟ್ಟ 9 ಜನರಲ್ಲಿ ಮೂವರು ವಿದ್ಯಾರ್ಥಿಗಳು ಸೇರಿದ್ದಾರೆ. ಇಲ್ಲಿ ಒಬ್ಬೊಬ್ಬರದ್ದು ಒಂದೊಂದು ಕಣ್ಣೀರ ಕಥೆ.. ಪುತ್ರಶೋಕದ ಕಥೆ ನಿಜಕ್ಕೂ ಮನಕಲಕುವಂತಿದೆ.
ಇದನ್ನೂ ಓದಿ:ಹಾಸನ ಗಣೇಶ ಮೆರವಣಿಗೆ ದುರಂತಕ್ಕೆ 9 ಬಲಿ – ಮೋದಿ ಸಂತಾಪ , 2 ಲಕ್ಷ ಪರಿಹಾರ
17, 19, 23, 25 ವರ್ಷ ಸಾಯೋ ವಯಸ್ಸಂತು ಅಲ್ವೇ ಅಲ್ಲ. ಎದೆಯುದ್ದ ಬೆಳೆದು ನಿಂತಿದ್ದ ಮಕ್ಕಳು ಮನೆಗೆ ಆಧಾರವಾಗಬೇಕಿದ್ದರು. ಆದರೆ ಶುಕ್ರವಾರ ರಾತ್ರಿ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಮೂಸಳೆ ಹೊಸಳ್ಳಿ ಬಳಿ ಸಂಭವಿಸಿದ ದುರಂತ ಈ ಯುವಕರ ಬದುಕನ್ನು ಮಾತ್ರ ಅಲ್ಲ.. ಇವರ ಮನೆಯವರ ಜೀವನವನ್ನೇ ನೋವಿನ ದಳ್ಳುರಿಗೆ ತಳ್ಳಿದೆ. ಗಣೇಶನ ಮೆರವಣಿಗೆ ವೇಳೆ ಯಮದೂತನಂತೆ ಬಂದ ಟ್ರಕ್ 9 ಜನರನ್ನು ಬಲಿ ತೆಗೆದುಕೊಂಡಿತ್ತು. ಇದರಲ್ಲಿ ಮೂವರು ವಿದ್ಯಾರ್ಥಿಗಳು ಇದ್ದರು ಅನ್ನೋದು ಮತ್ತೊಂದು ವಿಪರ್ಯಾಸ. ಈ ದುರಂತ ಕರುಳು ಹಿಂಡುವಂತೆ ಮಾಡಿದೆ. ಗಣೇಶ ಮೆರವಣಿಗೆಯಲ್ಲಿ ಹಲವು ಹಾಸ್ಟೆಲ್ ಹುಡುಗರು ಭಾಗಿಯಾಗಿದ್ದರು ಎನ್ನಲಾಗ್ತಿದೆ. ಇವರಲ್ಲೊಬ್ಬ ಅಂತಿಮ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿ ಮಿಥುನ್. ಶುಕ್ರವಾರ ಹಾಸ್ಟೆಲ್ನಲ್ಲಿ ಸ್ನೇಹಿತರ ಜೊತೆ ಹುಟ್ಟಹಬ್ಬ ಆಚರಿಸಿದ್ದ ಮಿಥುನ್, ಗಣೇಶ ಮೆರವಣಿಗೆಯಲ್ಲಿ ಭಾಗಿಯಾಗಿದ್ದ. ಡಿಜೆ ಸದ್ದಿಗೆ ಡ್ಯಾನ್ಸ್ ಮಾಡ್ತಾ ಸ್ನೇಹಿತರ ಜೊತೆ ಸಂಭ್ರಮಿಸುತ್ತಿದ್ದ. ಈ ವೇಳೆ ಯಮನಂತೆ ಬಂದ ಟ್ರಕ್ ಮೆರವಣಿಗೆಯಲ್ಲಿ ಭಾಗಿಯಾದವರ ಮೇಲೆ ಹರಿದಿದೆ. ಈ ವೇಳೆ ಮಿಥುನ್ ಕೂಡ ಸಾವನ್ನಪ್ಪಿದ್ದಾನೆ.
ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ನಿವಾಸಿಯಾದ ಮಿಥುನ್ ಇನ್ನೇನು ಕೆಲವೇ ತಿಂಗಳಲ್ಲಿ ತನ್ನ ಇಂಜಿನಿಯರಿಂಗ್ ಪದವಿಯನ್ನು ಮುಗಿಸಿ, ಮನೆಗೆ ತೆರಳಬೇಕಿತ್ತು. ಆದರೆ, ವಿಧಿ.. ಮಿಥುನ್ ಆಸೆಯನ್ನು, ಮನೆಯವರ ಕನಸನ್ನು ನಾಶ ಮಾಡಿದೆ. ಇದೀಗ ಮಿಥುನ್ ಮೃತದೇಹ ಮನೆ ತಲುಪಿದ್ದು, ಹೆತ್ತವರ ಆಕ್ರಂದನ ಮನಕಲಕುವಂತಿತ್ತು.
ಮಿಥುನ್‌ದು ಒಂದು ಕಥೆಯಾದರೆ, 17 ವರ್ಷದ ಈಶ್ವರ ಅನ್ನೋ ಹುಡುಗನದ್ದು ಮತ್ತೊಂದು ಕಥೆ. ಹೊಳೆನರಸೀಪುರದ ಢಣಾಯಕನಹಳ್ಳಿ ಗ್ರಾಮದ ಈತ ಹಾಸನದ ಪ್ರೈವೇಟ್ ಕಾಲೇಜಿನಲ್ಲಿ ಡಿಪ್ಲೊಮಾ ವ್ಯಾಸಂಗ ಮಾಡುತ್ತಿದ್ದ. ಶುಕ್ರವಾರ ಊರಲ್ಲಿ ಹಬ್ಬ ಇತ್ತು. ಮಗನಿಗೆ ಫೋನ್ ಮಾಡಿದ್ದ ಅಪ್ಪ ಹಬ್ಬಕ್ಕೆ ಮನೆಗೆ ಬಾ ಅಂತಾ ಕರೆದಿದ್ದರು. ಆದರೆ ಆರ್ಕೆಸ್ಟ್ರಾ ಇದೆ. ಗಣೇಶ ಮೆರವಣಿಗೆ ನೋಡ್ಕೊಂಡು ಬರ್ತೀನಿ ಅಂತೇಳಿದ್ದ. ವಿಧಿಯಾಟಕ್ಕೆ ಈತನೂ ಟ್ರಕ್ ಹರಿದು ಬಲಿಯಾಗಿದ್ದಾನೆ. ಮನೆಗೆ ಬರ್ತೀನಿ ಅಂದಿದ್ದ ಮಗ ಈಗ ಬದುಕಿಲ್ಲ ಅಂತಾ ತಂದೆ ರವಿ ಅವರು ಗೋಳಾಡಿದ್ದಾರೆ. ಮೃತರಲ್ಲಿ 6 ಜನ ಸ್ಥಳೀಯರು, ಮೂವರು ವಿದ್ಯಾರ್ಥಿಗಳಾಗಿದ್ದಾರೆ.

ನೋಡಿರಿ

