ಅಂದು ನರಹಂತಕ, ಇಂದು ಎಲ್ಲರ ಪ್ರೀತಿಯ ಸುಗ್ರೀವ – ಗಜಪಡೆಯ ಬಲಿಷ್ಠ ಆನೆ ಸುಗ್ರೀವನ ಕಥೆಯೇ ರೋಚಕ

ಅಂದು ನರಹಂತಕ, ಇಂದು ಎಲ್ಲರ ಪ್ರೀತಿಯ ಸುಗ್ರೀವ – ಗಜಪಡೆಯ ಬಲಿಷ್ಠ ಆನೆ ಸುಗ್ರೀವನ ಕಥೆಯೇ ರೋಚಕ

ಕೊಡಗು ಜಿಲ್ಲೆಯಲ್ಲಿ ನರಹಂತಕ ಪಟ್ಟ ಪಡೆದ ಪುಂಡಾನೆ ಇಂದು ದಸರಾ ಗಜಪಡೆಯಲ್ಲಿ ಪ್ರಮುಖ ಆಕರ್ಷಣೆಯ ಆನೆಯಾಗಿದ್ದಾನೆ. ಗಜಪಡೆಯಲ್ಲಿ ಬಲಿಷ್ಠ ಮತ್ತು ವಿಧೇಯ ಆನೆಯಾಗಿ ಕಾಣಿಸಿಕೊಂಡಿದ್ದಾನೆ. ಮೈಸೂರಿನಲ್ಲಿ ಈಗ ಸುಗ್ರೀವನದ್ದೇ ಹವಾ.

ಇದನ್ನೂ ಓದಿ: ಸರ್ಕಸ್‌ನಲ್ಲಿ ಸಿಕ್ಕವಳಿಗೆ ಅರಮನೆಯಲ್ಲಿ ವೈಭೋಗ – ಎಲ್ಲರಿಗೂ ಅಚ್ಚು ಮೆಚ್ಚು ಬಳ್ಳೆ ಲಕ್ಷ್ಮಿ..!

ಪರಿವರ್ತನೆ ಅನ್ನೋದು ಪ್ರಾಣಿ ಪ್ರಪಂಚದಲ್ಲೂ ಇದೆ, ಸುಗ್ರೀವ ಆನೆ ಬದಲಾವಣೆ ಜಗದ ನಿಯಮ ಅನ್ನೋದಕ್ಕೆ ಪ್ರತ್ಯಕ್ಷ ಸಾಕ್ಷಿ. ಸುಗ್ರೀವನ ಹಿಂದಿನ ಕಥೆಯೇ ರೋಚಕ. ಕೆಲ ವರ್ಷಗಳ ಹಿಂದೆ ಸುಗ್ರೀವ ಅಂದರೆ ಪುಂಡಾನೆ.. ನರಹಂತಕ.. ಜನರ ಪಾಲಿನ ವಿಲನ್ ಆಗಿದ್ದ. ಕೊಡಗಿನಲ್ಲಿ ಈತ ಕೊಟ್ಟ ತೊಂದರೆ ಒಂದಾ, ಎರಡಾ. ಕಾಫಿ ಬೆಳೆಗಾರರ ಪಾಲಿಗೆ ಸುಗ್ರೀವನೇ ವಿಲನ್. ಒಬ್ಬರನ್ನ ಸಾಯಿಸಿರುವ ಸುಗ್ರೀವನನ್ನು ಕಂಡರೆ ಪ್ರೀತಿಗಿಂತ ಭಯವೇ ಜಾಸ್ತಿಯಿತ್ತು. ಈತನ ಉಪಟಳ ತಾಳಲಾರದೇ 2016 ರಲ್ಲಿ ಕೊಡಗು ಜಿಲ್ಲೆಯ ಕುಶಾಲನಗರ ಅರಣ್ಯ ವಲಯದಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿ ಸೆರೆ ಹಿಡಿಯಿತು. ಸೆರೆ ಹಿಡಿದ ನಂತರ ಆ ಆನೆಯನ್ನು ದುಬಾರೆ ಆನೆ ಶಿಬಿರಕ್ಕೆ ಕರೆತರಲಾಯಿತು, ನಂತರ ಆ ಆನೆಗೆ ಸುಗ್ರೀವ ಎಂಬ ಹೆಸರು ಇಟ್ಟರು. ನಂತರ ಆನೆಯನ್ನು ಮಾವುತ ಹಾಗೂ ಕಾವಾಡಿಗಳು  ಯಶಸ್ವಿಯಾಗಿ ಪಳಗಿಸಿ ಶಾಂತ ರೀತಿಯ ಆನೆಯಾಗಿ ಮಾರ್ಪಾಡು ಮಾಡಿ, ಕೊನೆಗೂ ದಸರಾಕ್ಕೆ ಕರೆತಂದಿದ್ದಾರೆ.

ಅದೇ ಸುಗ್ರೀವನಿಗೆ ದಸರಾ ಗಜಪಡೆಯ ವಿಧೇಯ ಆನೆಯಾಗಿ ಗುರುತಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ, ದಸರಾ ಟೀಮ್ ಆನೆಗಳಲ್ಲೇ ಬಲಿಷ್ಠನಾಗಿರುವುದು ಇದೇ ಸುಗ್ರೀವ.

ದಸರಾ ಆನೆಗಳಲ್ಲೇ ಮಹಾನ್‌ ಬಲಶಾಲಿ ಸುಗ್ರೀವನಿಗೆ ಈಗ 43 ವರ್ಷ. ಎರಡನೇ ಹಂತದ ಆನೆಯಾಗಿ ಅರಮನೆ ನಗರಿಗೆ ಕಾಲಿಟ್ಟ ಸುಗ್ರೀವನನ್ನು ನೋಡೋದೇ ಚೆಂದ. ಕಳೆದ ಎರಡು ವರ್ಷಗಳಿಂದ ದಸರಾ ಪ್ರಯುಕ್ತ ಮೈಸೂರಿಗೆ ಬರುವ ಸುಗ್ರೀವ, ಹಿಂದೊಮ್ಮೆ ಮನುಷ್ಯನನ್ನು ಕೊಂದ ಆನೆ ಇದೇ ಅಂದರೆ ನಂಬೋದೇ ಕಷ್ಟ. ಯಾಕೆಂದರೆ ವಿನಯವಂತ, ಗುಣವಂತ, ವಿಧೇಯ ಈ ಸುಗ್ರೀವ. ಹಿಂದೊಮ್ಮೆ ಮದ್ದಾನೆ, ಈಗ ಮಾವುತರ ಮಾತು ಕೇಳುವ ಮುದ್ದಾನೆಯಾಗಿದ್ದಾನೆ ಸುಗ್ರೀವ. ಮಾವುತ ಶಂಕರ್ ಹಾಗೂ ಕಾವಾಡಿ ರಾಜು ಹೇಳಿದ ಆಜ್ಞೆಗಳನ್ನು ಚಾಚೂ ತಪ್ಪದೆ ಪಾಲಿಸುತ್ತಾನೆ. ಎಷ್ಟೇ ಜನ ಸಂದಣಿ ಇದ್ದರೂ ಯಾವುದೇ ಗೊಂದಲ ಮಾಡಿಕೊಳ್ಳದೇ ಶಾಂತವಾಗಿ ನಡೆಯುತ್ತಾನೆ.

ದಸರಾ ಸಮಯದಲ್ಲಿ ಅರಮನೆಯಲ್ಲಿ ರಾಜನಂತೆ ಮೆರೆಯುವ ಸುಗ್ರೀವ, ಕಾಡಾನೆ ಕಾರ್ಯಚರಣೆಯಲ್ಲೂ ಭಾಗವಹಿಸುತ್ತಾನೆ. ಒಂದು ಕಾಲದ ಪುಂಡಾನೆಯಾದ ಸುಗ್ರೀವ, ಇಂದು ಪುಂಡಾನೆಗಳನ್ನೇ ಸರಿ ದಾರಿಗೆ ತರುವ ಕೆಲಸ ಮಾಡುತ್ತಿದ್ದಾನೆ.

Sulekha