ಕೊಲ್ಲೂರು ಮೂಕಾಂಬಿಕೆಗೆ ವಜ್ರದ ಕಿರೀಟ ಕೊಟ್ಟ ಇಳಯರಾಜ! – ಕಿರೀಟದ ಮೌಲ್ಯವೆಷ್ಟು ಗೊತ್ತಾ?

ಕೊಲ್ಲೂರು ಶ್ರೀ ಮೂಕಾಂಬಿಕೆ ಕಲಾಮಾತೆಯೂ ಹೌದು. ಹೀಗಾಗಿ ಸಾವಿರಾರು ಮಂದಿ ಪ್ರತಿವರ್ಷ ಇಲ್ಲಿ ಬಂದು ತಾಯಿಯ ಮುಂದೆ ಕಲಾಪ್ರದರ್ಶನ ನೀಡಿ ಹೋಗುತ್ತಾರೆ. ದೇಶದ ಅನೇಕ ಸೆಲೆಬ್ರಿಟಿ ನಟರು, ರಾಜಕಾರಣಿಗಳು ಮೂಕಾಂಬಿಕೆಯ ಸನ್ನಿಧಾನಕ್ಕೆ ಬಂದು ದೇವಿ ದರ್ಶನ ಪಡೆಯುತ್ತಾರೆ. ಅದರಲ್ಲೂ ಸಂಗೀತ ಲೋಕದ ದಿಗ್ಗಜ, ಸ್ವರ ಮಾಂತ್ರಿಕ ಇಳಯರಾಜ ದೇವಿಯ ಪರಮ ಭಕ್ತ. ಆಗಾಗ ದೇವಿಯ ದರ್ಶನ ಪಡೆಯಲು ಇಲ್ಲಿಗೆ ಆಗಮಿಸುತ್ತಾರೆ. ಇದೀಗ ಇಳಯರಾಜ ದೇವಿಯ ಮೇಲಿನ ತಮ್ಮ ಭಕ್ತಿಯನ್ನು ಮತ್ತೊಮ್ಮೆ ಪ್ರದರ್ಶಿಸಿದ್ದಾರೆ. ತಮ್ಮ ಆರಾಧ್ಯ ದೇವಿಯಾದ ಮೂಕಾಂಬಿಕೆಗೆ ಅವರು ಸುಮಾರು 4 ಕೋಟಿ ರೂಪಾಯಿ ಮೌಲ್ಯದ ವಜ್ರಖಚಿತ ಕಿರೀಟ ಮತ್ತು ವಿವಿಧ ಆಭರಣಗಳನ್ನು ಸಮರ್ಪಿಸಿದ್ದಾರೆ.
ಇದನ್ನೂ ಓದಿ: ಸೊಸೆಗೆ ವರದಕ್ಷಿಣೆ ಕಿರುಕುಳ ಕೊಟ್ರಾ ಎಸ್.ನಾರಾಯಣ್?– ಖ್ಯಾತ ನಿರ್ದೇಶಕ ಎಸ್. ನಾರಾಯಣ್ ವಿರುದ್ಧ FIR
ಹೌದು, ಇಳಯರಾಜ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಹಲವು ಬಾರಿ ಬಂದಿದ್ದರು. ಅಷ್ಟೇ ಅಲ್ಲ ದೇಗುಲಕ್ಕೆ ಹಲವು ಬಗೆಯ ಆಭರಣಗಳನ್ನು ಅರ್ಪಿಸಿ ತಮ್ಮ ಭಕ್ತಿಭಾವವನ್ನು ತೋರಿದ್ದರು. ಈ ಬಾರಿಯೂ ಸ್ವರ ಮಾಂತ್ರಿಕ ಇಳಯರಾಜ ದೇವಿಗೆ ವಜ್ರದ ಕಿರೀಟದ ಜೊತೆಗೆ ಇತರ ಆಭರಣಗಳನ್ನು ಸಮರ್ಪಿಸಿದ್ದಾರೆ. ಇದರ ಜೊತೆಗೆ, ವೀರಭದ್ರ ದೇವರಿಗೆ ರಜತ ಕಿರೀಟ ಮತ್ತು ಖಡ್ಗವನ್ನೂ ಅರ್ಪಿಸಿದ್ದಾರೆ. ಆಭರಣಗಳನ್ನು ದೇಗುಲಕ್ಕೆ ಅರ್ಪಿಸುವ ಮುನ್ನ ದೇವಾಲಯದ ಆಡಳಿತ ಮಂಡಳಿ ಮತ್ತು ಅರ್ಚಕರು ಇಳಯರಾಜ ಅವರೊಂದಿಗೆ ಮೆರವಣಿಗೆಯಲ್ಲಿ ಭಾಗಿಯಾದರು. ಈ ಸಂದರ್ಭದಲ್ಲಿ ಇಳಯರಾಜ ಅವರು ಭಕ್ತಿಪರವಶರಾಗಿ ತಮ್ಮ ಜೀವನದಲ್ಲಿ ದೇವಿಯ ಅನುಗ್ರಹದಿಂದ ನಡೆದ ಪವಾಡಗಳನ್ನು ನೆನಪಿಸಿಕೊಂಡು ಭಾವುಕರಾದರು. ಮೂಕಾಂಬಿಕೆ ದೇವಿಯಿಂದ ತಮ್ಮ ಜೀವನದಲ್ಲಿ ಅಸಾಮಾನ್ಯ ಬೆಳವಣಿಗೆಗಳು ನಡೆದಿವೆ ಎಂದು ಅವರು ಹೇಳಿಕೊಂಡಿದ್ದಾರೆ.
ದೇವಾಲಯಕ್ಕೆ ಈ ಮಹಾನ್ ಕೊಡುಗೆಗಳನ್ನು ನೀಡಿದ ಇಳಯರಾಜ ಅವರಿಗೆ, ದೇಗುಲದ ವತಿಯಿಂದ ಗೌರವಾರ್ಪಣೆ ಮಾಡಿ ಕೃತಜ್ಞತೆ ಸಲ್ಲಿಸಲಾಗಿದೆ. ದೇಶದ ಖ್ಯಾತ ಸಂಗೀತ ನಿರ್ದೇಶಕರಿಂದ ದೇಗುಲಕ್ಕೆ ಇಷ್ಟು ದೊಡ್ಡ ಪ್ರಮಾಣದ ದೇಣಿಗೆ ಬಂದಿರುವುದು ಭಕ್ತರಲ್ಲಿ ಸಂತೋಷ ಮೂಡಿಸಿದೆ. ಈ ಮಹಾನ್ ಕಲಾವಿದ ತಮ್ಮ ಆರಾಧ್ಯ ದೇವಿಯಾಗಿರುವ ಕೊಲ್ಲೂರು ಮೂಕಾಂಬಿಕೆಯ ಕ್ಷೇತ್ರಕ್ಕೆ ಆಗಾಗ ಭೇಟಿ ನೀಡುತ್ತಿರುತ್ತಾರೆ.

ನೋಡಿರಿ

