ಅನರ್ಹ ಬಿಪಿಎಲ್ ಕಾರ್ಡ್ಗಳನ್ನು ಕ್ಯಾನ್ಸಲ್ ಮಾಡಿ – ಸಿಎಂ ಸಿದ್ದರಾಮಯ್ಯ ಖಡಕ್ ಸೂಚನೆ

ರಾಜ್ಯದಲ್ಲಿ ಅನರ್ಹ ಬಿಪಿಎಲ್ ಕಾರ್ಡ್ಗಳನ್ನು ರದ್ದುಪಡಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಆದರೆ ಅರ್ಹ ಬಿಪಿಎಲ್ ಕಾರ್ಡುದಾರರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಅರ್ಹರು ಯಾರಾದರೂ ಬಿಟ್ಟು ಹೋಗಿದ್ದರೆ ಅವರಿಗೆ ಬಿಪಿಎಲ್ ಕಾರ್ಡ್ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದರು. ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಬುಧವಾರ ನಡೆದ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಿಎಂ ಈ ಬಗ್ಗೆ ಮಾಹಿತಿ ನೀಡಿದ್ರು.
ಈಗಾಗಲೇ ಗುರುತಿಸಲಾಗಿರುವ ಅನರ್ಹ ಬಿಪಿಎಲ್ ಪಡಿತರ ಚೀಟಿದಾರರ ಪೈಕಿ 3,65,614 ಪಡಿತರ ಚೀಟಿಗಳನ್ನು ರದ್ದು/ವರ್ಗ ಬದಲಾವಣೆ ಮಾಡಲಾಗಿದೆ. ಅನ್ನಭಾಗ್ಯ ಯೋಜನೆಯಡಿ ಅಕ್ಕಿಯ ಜತೆಗೆ ಪೌಷ್ಟಿಕ ಧಾನ್ಯ, ಅಗತ್ಯ ಆಹಾರ ಸಾಮಾಗ್ರಿಗಳನ್ನು ಒಳಗೊಂಡ ಕಿಟ್ ಒದಗಿಸುವ ಕುರಿತು ಪರಿಶೀಲನೆ ಮಾಡಲಾಗುತ್ತದೆ. ಈ ಕುರಿತು ಪ್ರಸ್ತಾವನೆ ಸಲ್ಲಿಸಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ಪರಿಶಿಷ್ಟ ಜಾತಿ ಮತ್ತು ಪಂಗಡದ ಸಮುದಾಯದವರಿಗೆ ಹೊಸ ನ್ಯಾಯ ಬೆಲೆ ಅಂಗಡಿಗಳನ್ನು ಆದ್ಯತೆ ಮೇಲೆ ನೀಡಲು ಕ್ರಮ ಕೈಗೊಳ್ಳಬೇಕು. ಆಹಾರ ಧಾನ್ಯಗಳನ್ನು ಸರಬರಾಜು ಮಾಡುತ್ತಿರುವ ವಾಹನಗಳಿಗೆ ಜಿಪಿಎಸ್ ಟ್ರ್ಯಾಕರ್ಗಳನ್ನು ಅಳವಡಿಸಬೇಕು. ರಾಜ್ಯದಲ್ಲಿರುವ ಎಲ್ಲಾ ಗೋದಾಮುಗಳಲ್ಲಿ ಸಿಸಿಟಿವಿ ಅಳವಡಿಸಲು ಕ್ರಮ ಕೈಗೊಳ್ಳಬೇಕು.
ಕನಿಷ್ಠ ಬೆಂಬಲ ಯೋಜನೆಯಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಹಾಗೂ ಸ್ವಸಹಾಯ ಸಂಘಗಳ ಸಹಯೋಗದೊಂದಿಗೆ ಆಹಾರಧಾನ್ಯಗಳ ಖರೀದಿ ಪ್ರಕ್ರಿಯೆ ನಡೆಸಬೇಕು. ಇದೇ ಪ್ರಥಮ ಬಾರಿಗೆ 0.29 ಲಕ್ಷ ಮೆಟ್ರಿಕ್ ಟನ್ ಕಿರು ಸಿರಿಧಾನ್ಯಗಳನ್ನು ಖರೀದಿಸಲಾಗುತ್ತಿದೆ. ಆಹಾರ ಮತ್ತು ನಾಗರಿಕ ಸರಬರಾಜು ನಿಗಮದಲ್ಲಿ ಖಾಲಿಯಿರುವ ಅಗತ್ಯ ಸಿಬ್ಬಂದಿಗಳ ನೇಮಕಾತಿಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ತಿಳಿಸಿದರು.
ಒಟ್ಟು 47,848 ಮನೆಗಳನ್ನು ಮಂಜೂರು ಮಾಡಲಾಗಿದೆ
ಪ್ರಧಾನಮಂತ್ರಿ ಆವಾಸ್ ಯೋಜನೆ ಅಡಿ ಹಿಂದಿನ ಬಾರಿ ನಮ್ಮ ಸರ್ಕಾರವಿದ್ದಾಗ 43,874 ಮನೆಗಳು ಸೇರಿದಂತೆ ಒಟ್ಟು 47,848 ಮನೆಗಳನ್ನು ಮಂಜೂರು ಮಾಡಲಾಗಿದೆ. ಇದರಲ್ಲಿ 13,303 ಮನೆಗಳು ಬಹುತೇಕ ಪೂರ್ಣಗೊಂಡಿದ್ದು, ಒಟ್ಟು 25,815 ಮನೆಗಳು ನಿರ್ಮಾಣ ಹಂತದಲ್ಲಿವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಬುಧವಾರ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ವಸತಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು. ಫಲಾನುಭವಿಗಳ ವಂತಿಕೆ ಒಟ್ಟು ರೂ. 134 ಕೋಟಿ ಸಂಗ್ರಹಿಸಲಾಗಿದೆ. ಮೊದಲ ಹಂತದಲ್ಲಿ 7900 ಮನೆಗಳು ಬಹುತೇಕ ಪೂರ್ಣಗೊಂಡಿದ್ದು, ಫಲಾನುಭವಿಗಳ ವಂತಿಕೆ ಮೊತ್ತ ರೂ. 216 ಕೋಟಿ ಬಾಕಿಯಿದೆ. ಮನೆ ಹಂಚಿಕೆ ಮಾಡಲು ಸಾಧ್ಯವಾಗುವಂತೆ ಈ ಬಾಕಿ ಮೊತ್ತದ ಪಾವತಿ ಬಗ್ಗೆ ಹುಡ್ಕೋದಿಂದ ಸಾಲ ಪಡೆಯುವುದು ಸೇರಿದಂತೆ ಸೂಕ್ತ ಪ್ರಸ್ತಾವನೆ ಸಿದ್ಧಪಡಿಸಲು ಸೂಚನೆ ನೀಡಿದರು.

ನೋಡಿರಿ

