ಭುಗಿಲೆದ್ದ ಜನರ ಆಕ್ರೋಶ – ನೇಪಾಳ ಪ್ರಧಾನಿ ಕೆ.ಪಿ. ಶರ್ಮಾ ಓಲಿ ರಾಜೀನಾಮೆ

ನೇಪಾಳದಲ್ಲಿ ಸಾಮಾಜಿಕ ಮಾಧ್ಯಮಗಳ ಮೇಲೆ ಸರ್ಕಾರ ನಿಷೇಧ ಹೇರಿರುವುದನ್ನು ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆ ತೀವ್ರ ಸ್ವರೂಪ ಪಡೆಯುತ್ತಿದ್ದು, ಈ ಪ್ರತಿಭಟನೆಯಲ್ಲಿ ಸುಮಾರು 19 ಮಂದಿ ಉಸಿರುಚೆಲ್ಲಿದ್ದು, 300ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ. ಈ ಪ್ರಕ್ಷುಬ್ಧ ವಾತಾವರಣದ ನಡುವೆ ಪ್ರಧಾನಮಂತ್ರಿ ಕೆ.ಪಿ. ಶರ್ಮಾ ಓಲಿ ರಾಜೀನಾಮೆ ನೀಡಿದ್ದಾರೆ. ದೇಶಾದ್ಯಂತ ವಿದ್ಯಾರ್ಥಿಗಳ ನೇತೃತ್ವದಲ್ಲಿ ಸರ್ಕಾರದ ವಿರುದ್ಧ ಪ್ರತಿಭಟನೆಗಳು ತೀವ್ರಗೊಳ್ಳುತ್ತಿರುವ ಮಧ್ಯೆ, ನೇಪಾಳದ ರಾಜಕೀಯ ಪರಿಸ್ಥಿತಿ ವೇಗವಾಗಿ ಹದಗೆಡುತ್ತಿರುವ ನಡುವೆಯೇ ನೇಪಾಳ ಪ್ರಧಾನಿ ಕೆ.ಪಿ. ಶರ್ಮಾ ಓಲಿ ರಾಜೀನಾಮೆ ನಿರ್ಧಾರ ಹೊರಬಿದ್ದಿದೆ.
ಹೌದು, ಕಳೆದ ಕೆಲ ದಿನಗಳಿಂದ ನೇಪಾಳದಲ್ಲಿ ಭಾರೀ ಸದ್ದು ಮಾಡುತ್ತಿರುವ ಸಾಮಾಜಿಕ ಮಾಧ್ಯಮಗಳ ಮೇಲಿನ ನಿಷೇಧ ಇದೀಗ ಭೀಕರ ಸ್ವರೂಪ ಪಡೆದುಕೊಂಡಿದ್ದು ಸಾಮಾಜಿಕ ಮಾಧ್ಯಮಗಳ ಮೇಲಿನ ಸರ್ಕಾರದ ನಿಷೇಧವನ್ನು ವಿರೋಧಿಸಿ ನೂರಾರು ಪ್ರತಿಭಟನಾಕಾರರು ಪ್ರಧಾನಿ ಕಛೇರಿಯನ್ನು ಗುರಿಯಾಗಿಸಿ ದಾಳಿ ಮಾಡಿದ್ದಾರೆ. ಹಲವಾರು ರಾಜಕೀಯ ನಾಯಕರ ನಿವಾಸಗಳನ್ನು ಧ್ವಂಸಗೊಳಿಸಿರುವ ಬಗ್ಗೆಯೂ ವರದಿಯಾಗಿದೆ. ಜನರಲ್ ಝಡ್ ಬ್ಯಾನರ್ ಅಡಿಯಲ್ಲಿ, ರಾಜಧಾನಿಯ ಹಲವು ಭಾಗಗಳಲ್ಲಿ ” ಕೆಪಿ ಚೋರ್, ದೇಶ್ ಛೋಡ್ ” (ಕೆಪಿ ಕಳ್ಳ, ದೇಶ ಬಿಟ್ಟು ತೊಲಗಿ) ಮತ್ತು “ಭ್ರಷ್ಟ ನಾಯಕರ ವಿರುದ್ಧ ಕ್ರಮ ಕೈಗೊಳ್ಳಿ” ಮುಂತಾದ ಘೋಷಣೆಗಳನ್ನು ಕೂಗಿರುವುದಾಗಿ ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.
ಗಮನಾರ್ಹವಾಗಿ, ನೇಪಾಳ ಪ್ರಧಾನಿ ಕೆ.ಪಿ. ಶರ್ಮಾ ಓಲಿ ರಾಜೀನಾಮೆ ನೀಡುವ ಕೆಲವೇ ಗಂಟೆಗಳ ಮೊದಲು, ಪ್ರತಿಭಟನಾಕಾರರು ಶಾಂತಿ ಕಾಯ್ದುಕೊಳ್ಳುವಂತೆ ಮತ್ತು ಸಂಯಮದಿಂದ ವರ್ತಿಸುವಂತೆ ಮನವಿ ಮಾಡಿದ್ದರು. ಸಂವಾದದ ಮೂಲಕ ಪರಿಹಾರಗಳನ್ನು ಕಂಡುಕೊಳ್ಳುವಂತೆ ಕರೆ ನೀಡಿದ್ದರು. ಬಿಕ್ಕಟ್ಟನ್ನು ಪರಿಹರಿಸಲು ಸಂಜೆ 6 ಗಂಟೆಗೆ ಸರ್ವಪಕ್ಷ ಸಭೆಯನ್ನು ಸಹ ಅವರು ಘೋಷಿಸಿದ್ದರು. “ಯಾವುದೇ ರೀತಿಯ ಹಿಂಸಾಚಾರವು ರಾಷ್ಟ್ರೀಯ ಹಿತಾಸಕ್ತಿಯಲ್ಲಿಲ್ಲ. ನಾವು ಶಾಂತಿಯುತ ಸಂವಾದ ಮತ್ತು ಚರ್ಚೆಯನ್ನು ಅಳವಡಿಸಿಕೊಳ್ಳಬೇಕು” ಎಂದು ಓಲಿ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದರು. ಓಲಿ ಬಲ್ವತಾರ್ನಲ್ಲಿರುವ ಪ್ರಧಾನಿ ನಿವಾಸದ ಮೇಲೆ ದಂಗೆದ್ದ ಪ್ರತಿಭಟನಾಕಾರರು ಭಕ್ತಪುರದಲ್ಲಿರುವ ಅವರ ನಿವಾಸಕ್ಕೆ ಬೆಂಕಿ ಇಟ್ಟಿದ್ದಾರೆ. ಇದಲ್ಲದೆ, ಸೋಮವಾರವೇ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದ ಮಾಜಿ ಗೃಹ ಸಚಿವ ರಮೇಶ್ ಲೇಖಕ್ ಅವರ ಕಠ್ಮಂಡುವಿನ ನಾಯ್ಕಪ್ನಲ್ಲಿರುವ ನಿವಾಸಕ್ಕೂ ಪ್ರತಿಭಟನಾಕಾರರು ಬೆಂಕಿ ಹಚ್ಚಿರುವ ಘಟನೆ ನಡೆದಿದೆ.

ನೋಡಿರಿ

