ಅಮೆರಿಕದಲ್ಲಿ ಮಾರಣಾಂತಿಕ ಶೀತಗಾಳಿ – ಸಾವಿನ ಸಂಖ್ಯೆ 34ಕ್ಕೆ ಏರಿಕೆ
ನ್ಯೂಯಾರ್ಕ್: ಅಮೆರಿಕದಲ್ಲಿ ಬೀಸುತ್ತಿರುವ ಮಾರಣಾಂತಿಕ ಶೀತಗಾಳಿ ‘ಬಾಂಬ್ ಸೈಕ್ಲೋನ್’ನಿಂದ ಸುಮಾರು 34 ಮಂದಿ ಮೃತಪಟ್ಟಿದ್ದಾರೆ. ಕೆಲವು ಪ್ರದೇಶಗಳಲ್ಲಿ ಭಾರಿ ಹಿಮಪಾತವಾಗುತ್ತಿದ್ದು, ಲಕ್ಷಾಂತರ ಮನೆಗಳಿಗೆ ವಿದ್ಯುತ್ ಸಂಪರ್ಕ ಇಲ್ಲದಂತಾಗಿದೆ.
ಹಿಮಪಾತದಿಂದ ನ್ಯೂಯಾರ್ಕ್ನಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಬಂದ್ ಮಾಡಲಾಗಿದೆ. ಜನ ಸಂಪರ್ಕ ಕಡಿತ, ವಿದ್ಯುತ್ ಅಭಾವ ಮತ್ತು ತಾಪಮಾನ ಕುಸಿತದಿಂದ ಅಮೆರಿಕದ ಜನರು ಕಂಗಾಲಾಗಿದ್ದಾರೆ. ಅಮೆರಿಕದಾದ್ಯಂತ ಅಪಘಾತ, ಮರಗಳು ಧರೆಗುರುಳಿ, ಚಂಡಮಾರುತದಿಂದಾಗಿ 34 ಜನರು ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ: ‘ಯುದ್ದ ನಿಲ್ಲಿಸಲು ಉಕ್ರೇನ್ನೊಂದಿಗೆ ಮಾತುಕತೆಗೆ ಸಿದ್ಧ’ – ಪುಟಿನ್
ಈ ಪರಿಸ್ಥಿತಿ ಬಗ್ಗೆ ನ್ಯೂಯಾರ್ಕ್ ಗವರ್ನರ್ ಕ್ಯಾಥಿ ಹೊಚುಲ್ ಮಾತನಾಡಿ, ಬಫಲೋ ನಯಾಗರಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಮಂಗಳವಾರವರೆಗೆ ಮುಚ್ಚಲಾಗುವುದು ಎಂದು ಹೇಳಿದ್ದಾರೆ.
6 ನ್ಯೂ ಇಂಗ್ಲೆಂಡ್ ರಾಜ್ಯಗಳಾದ್ಯಂತ 2,73,000ಕ್ಕೂ ಹೆಚ್ಚು ಗ್ರಾಹಕರು ವಿದ್ಯುತ್ ಇಲ್ಲದೆ ಪರದಾಡಿದ್ದಾರೆ. ಹಲವಾರು ಪೂರ್ವ ರಾಜ್ಯಗಳಾದ್ಯಂತ 2,00,000ಕ್ಕೂ ಹೆಚ್ಚು ಜನರು ಕ್ರಿಸ್ಮಸ್ ದಿನ ವಿದ್ಯುತ್ ಇಲ್ಲದೆ ಪರದಾಡುವಂತಾಯಿತು ಎಂದು ತಿಳಿಸಿದ್ದಾರೆ.
ನಗರದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಮಂಗಳವಾರದವರೆಗೆ ಮುಚ್ಚಲ್ಪಟ್ಟಿದೆ. ದೇಶದ ರಸ್ತೆಗಳು ಹಾಗೂ ರಸ್ತೆ ಪಕ್ಕ ನಿಲ್ಲಿಸಿರುವ ವಾಹನಗಳು ಮಂಜಿನಲ್ಲಿ ಮುಚ್ಚಿಹೋಗಿವೆ. ವಾಷಿಂಗ್ಟನ್ನಿಂದ ಫ್ಲೋರಿಡಾದವರೆಗೆ ಹಲವು ರಾಜ್ಯಗಳಿಗೆ ತೀವ್ರ ಚಳಿ ಚಂಡಮಾರುತ, ಹಿಮಪಾತ, ಹಾಗೂ ಚಳಿಗಾಲದ ಹವಾಮಾನಕ್ಕೆ ಸಂಬಂಧಿಸಿದ ಇತರೆ ಎಚ್ಚರಿಕೆ ನೀಡಲಾಗಿದೆ.