ಇಂದು ಅಪರೂಪದ ಚಂದ್ರಗ್ರಹಣ – ಈ ದೇಗುಲಗಳಲ್ಲಿ ದರ್ಶನ, ಪೂಜೆಗಳಲ್ಲಿ ಹಲವು ಬದಲಾವಣೆ!

ಇಂದು ಅಪರೂಪದ ಸಂಪೂರ್ಣ ಚಂದ್ರಗ್ರಹಣ ಸಂಭವಿಸುತ್ತಿದೆ. ಇದನ್ನು ಬ್ಲಡ್ ಮೂನ್ ಎಂದು ಕೂಡ ಕರೆಯಲಾಗಿದೆ. ಸೆಪ್ಟೆಂಬರ್ 7ರಂದು ಆರಂಭಗೊಂಡು ಸೆಪ್ಟೆಂಬರ್ 8ರಂದು ಕೊನೆಯಾಗುತ್ತಿದೆ. ಈ ಚಂದ್ರ ಗ್ರಹಣ ಭಾರತ ಮತ್ತು ಏಷ್ಯಾ, ಆಸ್ಟ್ರೇಲಿಯಾ, ಪೂರ್ವ ಆಫ್ರಿಕಾ ಮತ್ತು ಯುರೋಪಿನ ಹೆಚ್ಚಿನ ಭಾಗಗಳಲ್ಲಿ ಸಂಪೂರ್ಣವಾಗಿ ಗೋಚರಿಸುತ್ತದೆ. ಇಂದು  ನಡೆಯಲಿರುವ ರಕ್ತ ಚಂದ್ರ ಗ್ರಹಣ ಹಿನ್ನೆಲೆ ಬಹುತೇಕ ಎಲ್ಲಾ ದೇಗುಲಗಳಲ್ಲಿ ದೇವರ ದರ್ಶನ ಹಾಗೂ ಪೂಜೆಯಲ್ಲಿ ಬದಲಾವಣೆಯಾಗಲಿದೆ.  ಶೃಂಗೇರಿ ಶಾರದಾಂಭೆ, ಹೊರನಾಡು ಅನ್ನಪೂರ್ಣೆಶ್ವರಿ ದೇವಸ್ಥಾನ ಸೇರಿದಂತೆ ಜಿಲ್ಲೆಯ ಪ್ರಮುಖ ದೇವಾಲಯಗಳಲ್ಲಿ ನಿರಂತರ ಜಲಾಭಿಷೇಕ ನೆರವೇರಲಿದೆ.

ಇದನ್ನೂ ಓದಿ: ಉತ್ತರ ಭಾರತದಲ್ಲಿ ಮಳೆಯ ಆರ್ಭಟ! –  ಪಂಜಾಬ್‌ನಲ್ಲಿ ಭೀಕರ ಪ್ರವಾಹಕ್ಕೆ 45ಕ್ಕೂ ಹೆಚ್ಚು ಮಂದಿ ಸಾವು!

ಶೃಂಗೇರಿ ದೇಗುಲದಲ್ಲಿ ಮಧ್ಯಾಹ್ನ ಊಟ ಇರಲಿದೆ. ರಾತ್ರಿ ವೇಳೆ ಇರುವುದಿಲ್ಲ. ಪೂಜೆಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಗ್ರಹಣ ಆರಂಭವಾದಾಗಿನಿಂದ ಅಂತ್ಯದವರೆಗೂ ನಿರಂತರ ಜಲಾಭಿಷೇಕ ನಡೆಯಲಿದೆ.

ಇನ್ನು ಹೊರನಾಡು ಅನ್ನಪೂರ್ಣೇಶ್ವರಿ ದೇಗುಲದಲ್ಲಿ ಮಧ್ಯಾಹ್ನ ಊಟ ಇರಲಿದೆ. ರಾತ್ರಿ ವೇಳೆ ಇರುವುದಿಲ್ಲ. ಪೂಜೆಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಗ್ರಹಣ ಆರಂಭವಾದಾಗಿನಿಂದ ಅಂತ್ಯದವರೆಗೂ ನಿರಂತರ ಜಲಾಭಿಷೇಕ ನಡೆಯಲಿದೆ.

ಕಿಗ್ಗಾದ ಋಷ್ಯಶೃಂಗೇಶ್ವರ ಹಾಗೂ ಕಳಸದ ಕಳಸೇಶ್ವರ ದೇಗುಲದಲ್ಲೂ ವಿಶೇಷ ಪೂಜೆ ನಡೆಯಲಿದೆ. ಪ್ರಸಾದ ಇರುವುದಿಲ್ಲ. ಗ್ರಹಣದ ವೇಳೆ ಈಶ್ವರನಿಗೆ ನಿರಂತರ ಜಲಾಭಿಷೇಕ ನಡೆಯಲಿದೆ. ನಾಲ್ಕು ಪ್ರಮುಖ ದೇವಾಲಯದಲ್ಲೂ ಗ್ರಹಣ ಆರಂಭದಿಂದ ಅಂತ್ಯದವರೆಗೆ ನಿರಂತರ ಜಲಾಭಿಷೇಕ ನಡೆಯಲಿದೆ.

ಇನ್ನು ಚಂದ್ರಗ್ರಹಣ ಇರುವುದರಿಂದ ಉಡುಪಿ ಶ್ರೀಕೃಷ್ಣ ಮಠದಲ್ಲಿ ಪೂಜೆ ಪುನಸ್ಕಾರ, ಅನ್ನಪ್ರಸಾದ ವಿಚಾರದಲ್ಲಿ ಬದಲಾವಣೆಗಳನ್ನು ಮಾಡಲಾಗಿದೆ. 10:30ಕ್ಕೆ ಕೃಷ್ಣಮಠದಲ್ಲಿ ಭೋಜನ ವ್ಯವಸ್ಥೆ ಆರಂಭವಾಗಲಿದ್ದು, ಊಟ 12 ಗಂಟೆಗೆ ಮುಕ್ತಾಯವಾಗುತ್ತದೆ. ಮಠದಲ್ಲಿ ಗ್ರಹಣ ಶಾಂತಿ ಹೋಮ-ಹವನಗಳ ವ್ಯವಸ್ಥೆ ಇರಲಿದೆ. ಗ್ರಹಣ ಆರಂಭಕ್ಕೂ ಮೊದಲು ನೈರ್ಮಲ್ಯ ವಿಸರ್ಜನ ಪೂಜೆ ನಡೆಯಲಿದೆ.  ಗ್ರಹಣ ಸ್ಪರ್ಶಕಾಲ ಮಧ್ಯಕಾಲ ಮತ್ತು ಮೋಕ್ಷಕಾಲದಲ್ಲಿ ಮಧ್ವ ಸರೋವರದಲ್ಲಿ ಭಕ್ತರಿಗೆ ತೀರ್ಥ ಸ್ನಾನ ಮಾಡುವ ವ್ಯವಸ್ತೆ ಕಲ್ಪಿಸಲಾಗಿದೆ. ಚಂದ್ರಗ್ರಹಣ ಆರಂಭಕ್ಕೂ ಮೊದಲು ರಾತ್ರಿ ಪೂಜೆ ನಡೆದು ಅಲಂಕಾರಗಳನ್ನೆಲ್ಲ ತೆಗೆದು ನೈರ್ಮಲ್ಯ ವಿಸರ್ಜನ ಪೂಜೆ ನಡೆಸಲಾಗುತ್ತದೆ.

Shwetha M