27 ವರ್ಷಗಳ ಬಳಿಕ ಇತಿಹಾಸ ಸೃಷ್ಟಿಸಿದ ಸೌತ್ ಆಫ್ರಿಕಾ – ಹರಿಣಗಳ ಅಬ್ಬರಕ್ಕೆ ಮಕಾಡೆ ಮಲಗಿದ ಆಂಗ್ಲರು

27 ವರ್ಷಗಳ ಬಳಿಕ ಇತಿಹಾಸ ಸೃಷ್ಟಿಸಿದ ಸೌತ್ ಆಫ್ರಿಕಾ – ಹರಿಣಗಳ ಅಬ್ಬರಕ್ಕೆ ಮಕಾಡೆ ಮಲಗಿದ ಆಂಗ್ಲರು

ಕುಬ್ಜ ದೇಹ, ಕಪ್ಪು ವರ್ಣ, ಬಾಡಿ ಶೇಮಿಂಗ್ ಹೀಗೆ ಸಾಲು ಸಾಲು ಟೀಕೆಗಳಿಗೆ ಸವಾಲೊಡ್ಡಿ ಸೌತ್ ಆಫ್ರಿಕಾ ತಂಡದ ಪರ ಇತಿಹಾಸವನ್ನೇ ಸೃಷ್ಟಿಸುತ್ತಿರೋ ಪ್ರಚಂಡ ಕುಳ್ಳ ಟೆಂಬಾ ಬವುಮಾ. ಬವುಬಾ ಕ್ಯಾಪ್ಟನ್ಸಿ ವಹಿಸಿಕೊಂಡ್ಮೇಲೆ ಒಂದೇ ಒಂದು ಟೆಸ್ಟ್ ಪಂದ್ಯಗಳನ್ನೂ ಸೋಲದೆ ವಿಶ್ವಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪ್ರವೇಶ ಪಡೆದಿತ್ತು. 2023-25ನೇ ಸೈಕಲ್​ನಲ್ಲಿ ಆಸ್ಟ್ರೇಲಿಯಾವನ್ನ ಮಣಿಸಿ ಚಾಂಪಿಯನ್ ಪಟ್ಟಕ್ಕೇರಿದೆ.  ಇದೀಗ ಟೆಂಬಾ ನಾಯಕ್ತವದಲ್ಲೇ ಇಂಗ್ಲೆಂಡ್‌ನಲ್ಲಿ ಐತಿಹಾಸಿಕ ಏಕದಿನ ಸರಣಿಯನ್ನ ಹರಿಣಗಣ ಪಡೆ ಗೆದ್ದು ಬೀಗಿದೆ. 27 ವರ್ಷಗಳ ಬಳಿಕ ಇತಿಹಾಸ ಸೃಷ್ಟಿಸಿದೆ.

ಇದನ್ನೂ ಓದಿ : ಭಾರತಕ್ಕಿಲ್ಲ ಭುವಿ.. RCBಗಷ್ಟೇ ಬೌಲರ್ – ಸಾಲಿಡ್ ಫಾರ್ಮ್ ಇದ್ರೂ ಚಾನ್ಸ್ ಏಕಿಲ್ಲ?

1998ರ ಬಳಿಕ ಮೊದಲ ಬಾರಿಗೆ ಇಂಗ್ಲೆಂಡ್ ವಿರುದ್ಧ ಗೆಲುವು!

ಕ್ರಿಕೆಟ್ ಜನಕರ ನಾಡಿನಲ್ಲಿ ಸೌತ್ ಆಫ್ರಿಕಾ ಪಡೆ ಸಿಕ್ಕಾಪಟ್ಟೆ ಸೌಂಡ್ ಮಾಡ್ತಿದೆ. 1998ರ ಬಳಿಕ ಇದೇ ಮೊದಲ ಬಾರಿಗೆ ಗೆಲುವು ಸಾಧಿಸಿದೆ. ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಇನ್ನೂ ಒಂದು ಪಂದ್ಯ ಬಾಕಿ ಇರುವಂತೆಯೇ ಗೆದ್ದು ಬೀಗಿದ್ದಾರೆ. ಇತ್ತೀಚೆಗಷ್ಟೇ ಆಸ್ಟ್ರೇಲಿಯಾ ವಿರುದ್ಧ 2-1 ಅಂತರದ ಸರಣಿ ಗೆಲುವಿನೊಂದಿಗೆ ದಕ್ಷಿಣ ಆಫ್ರಿಕಾ ತಂಡ ಇಂಗ್ಲೆಂಡ್ ಸರಣಿಗೆ ಕಾಲಿಟ್ಟಿತ್ತು. 50 ಓವರ್‌ಗಳ ಸ್ವರೂಪದಲ್ಲಿ ಹಾಲಿ ವಿಶ್ವ ಚಾಂಪಿಯನ್‌ಗಳ ವಿರುದ್ಧ ಇದು ಹರಿಣಗಳ ಸತತ ಎರಡನೇ ODI ಸರಣಿ ಗೆಲುವು. ಇಂಟ್ರೆಸ್ಟಿಂಗ್ ಅಂದ್ರೆ ಎರಡೂ ಸಂದರ್ಭಗಳಲ್ಲಿ ಟೆಂಬಾ ಬವುಮಾ ತಂಡದ ನಾಯಕರಾಗಿದ್ದರು. ಇದೀಗಇಂಗ್ಲೆಂಡ್ ಸರಣಿ ಗೆಲುವಿನ ಬಳಿಕ ಬವುಮಾ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ಎರಡರಲ್ಲೂ ದಕ್ಷಿಣ ಆಫ್ರಿಕಾ ಏಕದಿನ ಸರಣಿ ಗೆಲುವುಗಳಿಗೆ ಕಾರಣವಾದ ಮೊದಲ ನಾಯಕರಾದರು. ಹೀಗೆ ಟೆಂಬಾ ಒಂದ್ಕಡೆ ಸದ್ದು ಮಾಡ್ತಿದ್ರೆ ಅತ್ತ ದಕ್ಷಿಣ ಆಫ್ರಿಕಾದ ಆಟಗಾರ ಮ್ಯಾಥ್ಯೂ ಬ್ರೀಟ್ಜ್ಕೆ ಕೂಡ ಸದ್ದು ಮಾಡಿದ್ದಾರೆ. 50 ಓವರ್‌ಗಳ ಸ್ವರೂಪದ ಇತಿಹಾಸದಲ್ಲಿ ತಮ್ಮ ಮೊದಲ ಐದು ಏಕದಿನ ಪಂದ್ಯಗಳಲ್ಲಿ ಐದು ಅರ್ಧಶತಕಗಳನ್ನು ಗಳಿಸಿದ ಮೊದಲ ಬ್ಯಾಟ್ಸ್‌ಮನ್ ಎನಿಸಿಕೊಂಡರು. ಹೀಗೆ ಸೌತ್ ಆಫ್ರಿಕನ್ಸ್ ರೆಕಾರ್ಡ್ಸ್ ಮಾಡ್ತಿದ್ರೆ ಅತ್ತ ಇಂಗ್ಲೆಂಡ್ ಟೀಂ ಮಾತ್ರ ಸೊರಗುತ್ತಲೇ ಇದೆ.

50 ಓವರ್‌ಗಳ ಸ್ವರೂಪದಲ್ಲಿ ಇಂಗ್ಲೆಂಡ್‌ನ ನೀರಸ ಪ್ರದರ್ಶನ ಮುಂದುವರೆದಿದೆ. 2023ರ ಏಕದಿನ ವಿಶ್ವಕಪ್ ಬಳಿಕ ಕಳಪೆ ಪ್ರದರ್ಶನ ನೀಡ್ತಿದ್ದಾರೆ. ಅಷ್ಟೇ ಅಲ್ಲದೆ ಇಂಗ್ಲೆಂಡ್ ತಂಡವು ದಕ್ಷಿಣ ಆಫ್ರಿಕಾ ವಿರುದ್ಧದ ಕೊನೆಯ ನಾಲ್ಕು ಏಕದಿನ ಪಂದ್ಯಗಳಲ್ಲೂ ಸೋಲನ್ನ ಕಂಡಿದೆ. 2023 ರ ಏಕದಿನ ವಿಶ್ವಕಪ್ ನಂತರ ಆರು ಏಕದಿನ ಸರಣಿಗಳನ್ನ ಆಡಿದ್ದು ಕೇವಲ ಒಂದನ್ನು ಮಾತ್ರ ಗೆಲ್ಲುವಲ್ಲಿ ಯಶಸ್ವಿಯಾಗಿದೆ. 2023 ರ ವಿಶ್ವಕಪ್ ನಂತರ ಆ ತಂಡವು 31.8 ರ ಗೆಲುವಿನ ಶೇಕಡಾವಾರು ಪ್ರಮಾಣವನ್ನು ಹೊಂದಿದೆ. ಇನ್ನೂ ಒಂದು ಪಂದ್ಯ ಬಾಕಿ ಇರುವಂತೆಯೇ ಸೌತ್ ಆಫ್ರಿಕಾ ವಿರುದ್ಧದ ಸರಣಿ ಕಳ್ಕೊಂಡಿರೋ ಇಂಗ್ಲೆಂಡ್ ಸದ್ಯ ಕೊನೇ ಪಂದ್ಯದಲ್ಲಾದ್ರೂ ಗೆದ್ದು ಮರ್ಯಾದೆ ಉಳಿಸಿಕೊಳ್ಬೇಕಿದೆ. ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೂರನೇ ಮತ್ತು ಅಂತಿಮ ಏಕದಿನ ಪಂದ್ಯವು ಸೆಪ್ಟೆಂಬರ್ 7 ರ ಭಾನುವಾರದಂದು ಸೌತಾಂಪ್ಟನ್‌ನಲ್ಲಿ ನಡೆಯಲಿದೆ.

Shantha Kumari