ವಿದೇಶದಿಂದ ಮಾರ್ಕೆಟ್‌ಗೆ ಬಂದಿವೆ ಬಂಗುಡೆ, ಬೂತಾಯಿ – ಮಂಗಳೂರಲ್ಲಿ ಓಮನ್ ದೇಶದ ಮೀನುಗಳಿಗೆ ಡಿಮ್ಯಾಂಡ್

ಇತ್ತೀಚಿನ ದಿನಗಳಲ್ಲಿ ಕರಾವಳಿಯಲ್ಲಿ ಮೀನು ಸಿಗುತ್ತಿಲ್ಲ.. ಮತ್ಸ್ಯಕ್ಷಾಮ ಎದುರಾಗುತ್ತಿದೆ ಎಂಬ ಆತಂಕ ಶುರುವಾಗಿತ್ತು. ಇದೇ ಸಮಯದಲ್ಲಿ ಮೀನು ಪ್ರಿಯರಿಗೆ ಸಂತಸದ ಸುದ್ದಿ ಸಿಕ್ಕಿದೆ. ಓಮನ್ ದೇಶದ ಬಂಗುಡೆ ಮತ್ತು ಬೂತಾಯಿ ಮೀನುಗಳು ಕರಾವಳಿಯ ಮಾರುಕಟ್ಟೆಗೆ ಲಗ್ಗೆಯಿಟ್ಟಿವೆ.
ಇದನ್ನೂ ಓದಿ: ಸೆಪ್ಟೆಂಬರ್ 22ರಿಂದ ನೂತನ ಜಿಎಸ್ಟಿ ಜಾರಿ! – ಯಾವ ವಸ್ತುಗಳ ಬೆಲೆ ಏರಿಕೆ?
ಮೀನು ಪ್ರಿಯರಿಗೆ ಫಸ್ಟ್ ಫೆವರೇಟ್ ಫಿಶ್ ಅಂದರೆ ಬಂಗುಡೆ ಮತ್ತು ಬೂತಾಯಿ. ಮೀನ್ ಗಸಿ ಇದ್ದರೆ ಸಾಕು ಒಂದು ತುತ್ತು ಅನ್ನ ಜಾಸ್ತಿಯೇ ಸೇರುತ್ತೆ. ಮೀನೂಟ ಇಲ್ಲ ಅಂದರೆ ಕರಾವಳಿಯ ಮೀನು ಪ್ರಿಯರಿಗೆ ಊಟವೇ ರುಚಿಸುವುದಿಲ್ಲ. ಇದೀಗ ಕೆಲವೊಮ್ಮೆ ಮೀನುಗಳು ಸರಿಯಾಗಿ ಸಿಗುವುದಿಲ್ಲ. ಮತ್ಸ್ಯ ಕ್ಷಾಮಾ ಮಾರಾಯ್ರೆ.. ಇನ್ನು ಇನ್ನು ಮೀನು ಸಿಗೋದೇ ಕಷ್ಟ ಅನ್ನೋ ಮಾತುಗಳು ಕೂಡಾ ಕೇಳಿಬಂದಿತ್ತು. ಇನ್ನು ಮೀನು ಪ್ರಿಯರೇ ಈ ಚಿಂತೆಯನ್ನು ಕೂಡಾ ಬಿಟ್ಟಾಕಿ ಮಾರಾಯ್ರೇ. ನಿಮಗಾಗಿ ವಿದೇಶದಿಂದ ಮೀನುಗಳು ಕರಾವಳಿ ಮಾರ್ಕೆಟ್‌ಗೆ ಬಂದಿವೆ. ಓಮನ್ ದೇಶದಿಂದ ಬಂಗುಡೆ ಮತ್ತು ಬೂತಾಯಿ ಮೀನು ಕರಾವಳಿ ಮಾರ್ಕೆಟ್‌ಗೆ ಬಂದಿಳಿದಿವೆ.
ಈ ಮೀನುಗಳ ರುಚಿ ನೋಡಲು ಜನ ಮೀನು ಮಾರುಕಟ್ಟೆಗೆ ಭೇಟಿ ನೀಡಲಾರಂಭಿಸಿದ್ದಾರೆ. ಓಮೆಗಾ-3 ಯ ಕಣಜ ಬೂತಾಯಿ ಮೀನಿಗೆ ಕರಾವಳಿ ಭಾಗದಲ್ಲಿ ಹೆಚ್ಚಿನ ಡಿಮ್ಯಾಂಡ್ ಇದೆ. ಇಲ್ಲಿನ ಹೆಚ್ಚಿನ ಮಾಂಸಾಹಾರ ತಿನ್ನುವ ಕುಟುಂಬಗಳು ಹೆಚ್ಚಾಗಿ ಇಷ್ಟಪಡೋದು ಬಂಗುಡೆ ಮತ್ತು ಬೂತಾಯಿ ಮೀನುಗಳನ್ನ. ಇತರೆ ಮೀನುಗಳಿಗೆ ಹೋಲಿಸಿದಲ್ಲಿ ಈ ಮೀನುಗಳು ಕಡಿಮೆ ರೇಟ್‌ನಲ್ಲಿ ಸಿಗುತ್ತವೆ. ಜೊತೆಗೆ ರುಚಿಯೂ ಜಾಸ್ತಿ. ಮಾಮೂಲಿಗಿಂತ ಜಾಸ್ತಿ ರುಚಿ ಈ ಮೀನುಗಳೇ.
ಇದೀಗ ಕೆಲವು ದಿನಗಳಿಂದ ಮಾರುಕಟ್ಟೆಯಲ್ಲಿ ಓಮನ್ ದೇಶದ ದೊಡ್ಡ ಗಾತ್ರದ ಬಂಗುಡೆ ಮತ್ತು ಬೂತಾಯಿ ಮೀನುಗಳು ಕಾಣಿಸತೊಡಗಿವೆ. ಸ್ಥಳೀಯವಾಗಿ ಮೀನುಗಾರರು ಹಿಡಿದು ತರುವ ಬಂಗುಡೆ ಮತ್ತು ಬೂತಾಯಿ ಮೀನುಗಳಿಗಿಂತ ಗಾತ್ರದಲ್ಲಿ ಇವುಗಳೇ ದೊಡ್ಡದಾಗಿವೆ. ಗಾತ್ರ ಮಾತ್ರವಲ್ಲದೆ ಇದರ ದರವೂ ಸ್ಥಳೀಯವಾಗಿ ಸಿಗುವ ಮೀನುಗಳ ದರಕ್ಕಿಂತ ಹೆಚ್ಚಾಗಿದೆ. ಹೋಟೆಲ್ ಗಳಿಂದ ಈ ಮೀನುಗಳು ಹೆಚ್ಚಾಗಿ ಹೋಗುತ್ತಿದ್ದು, ಕಿಲೋವೊಂದಕ್ಕೆ 400 ರಿಂದ 450 ರೂಪಾಯಿ ದರವಿದೆ. ಒಂದು ಕಿಲೋದಲ್ಲಿ ಮೂರು ಬಂಗುಡೆ ತೂಗಿದರೆ, ಬೂತಾಯಿ ಕಿಲೋವೊಂದಕ್ಕೆ 12 ತೂಗುತ್ತವೆ. ಅದೇ ರೀತಿ ಸ್ಥಳೀಯವಾಗಿ ಸಿಗುವ ಬಂಗುಡೆಗೆ ಕಿಲೋವೊಂದಕ್ಕೆ 150 ರಿಂದ 200 ರೂಪಾಯಿ ದರವಿದ್ದು, ಒಂದು ಕಿಲೋದಲ್ಲಿ 6 ರಿಂದ 7 ಬಂಗುಡೆಗಳು ತೂಗುತ್ತದೆ. ಅದೇ ರೀತಿ ಬೂತಾಯಿಗೆ ಕಿಲೋವೊಂದಕ್ಕೆ ಸದ್ಯ ಮಾರುಕಟ್ಟೆಯಲ್ಲಿ 400 ರೂಪಾಯಿ ದರವಿದ್ದು, ಕಿಲೋದಲ್ಲಿ 12 ಬೂತಾಯಿಗಳು ತೂಗುತ್ತವೆ.
ಓಮನ್ ದೇಶದಿಂದ ಈ ಮೀನುಗಳು ಮೊದಲು ಗುಜರಾತ್ ಗೆ ಆಗಮಿಸಿ ಬಳಿಕ ಅಲ್ಲಿಂದ ದೇಶದ ವಿವಿಧ ಮಾರುಕಟ್ಟೆಗೆ ತಲುಪುತ್ತವೆ. ಓಮನ್ ನಿಂದ ವಿಮಾನದ ಮೂಲಕ ಬರುವ ಈ ಮೀನುಗಳು ಬಳಿಕ ಗುಜರಾತ್ ನಿಂದ ವಿಮಾನ, ರೈಲು ಮತ್ತು ರಸ್ತೆಯ ಮೂಲಕ ಮೀನು ಮಾರುಕಟ್ಟೆಗಳಿಗೆ ವಿತರಣೆಯಾಗುತ್ತವೆ. ಭಾರಿ ಮಳೆ ಹಾಗು ಹವಾಮಾನ ವೈಪರಿತ್ಯದಿಂದ ಸ್ಥಳೀಯ ಮೀನುಗಾರರಿಗೆ ಮೀನಿನ ಅಭಾವವಿದ್ದು, ಈ ಅಭಾವವನ್ನು ವಿದೇಶಿ ಮೀನುಗಳು ನೀಗಿಸುತ್ತಿರುವುದು ಕೂಡಾ ಅಷ್ಟೇ ಸತ್ಯ.

ನೋಡಿರಿ

