ಏಷ್ಯಾಕಪ್ ನಲ್ಲೂ Boycott ಟ್ರೆಂಡ್ – IND Vs PAK ಪ್ರೋಮೋ ಕಿಚ್ಚು
ಸೂರ್ಯ.. ಶಾಹೀನ್.. ಸೆಹ್ವಾಗ್.. ಏನಾಯ್ತು?

ಏಷ್ಯಾಕಪ್ ನಲ್ಲೂ Boycott ಟ್ರೆಂಡ್ – IND Vs PAK ಪ್ರೋಮೋ ಕಿಚ್ಚುಸೂರ್ಯ.. ಶಾಹೀನ್.. ಸೆಹ್ವಾಗ್.. ಏನಾಯ್ತು?

ಏಷ್ಯಾಕಪ್ ಟೂರ್ನಿಗೆ ಕೆಲ ದಿನಗಳಷ್ಟೇ ಬಾಕಿ ಇದೆ. ಏಷ್ಯಾಕಪ್ ಟೂರ್ನಿಯ ಅಧಿಕೃತ ಪ್ರಸಾರಕ ಸೋನಿ ಸ್ಪೋರ್ಟ್ಸ್, ಪಂದ್ಯಾವಳಿಯ ಅತಿದೊಡ್ಡ ಫೈಟ್ ಇರುವಂಥ ಭಾರತ vs ಪಾಕಿಸ್ತಾನ ನಡುವಿನ ಮ್ಯಾಚ್  ಹೈಲೈಟ್ ಮಾಡಲು ಹೈ-ಆಕ್ಟೇನ್ ಪ್ರೋಮೋವನ್ನು ಬಿಡುಗಡೆ ಮಾಡಿದೆ. ಈ ಜಾಹೀರಾತಿನಲ್ಲಿ ಭಾರತದ ಟಿ20ಐ ನಾಯಕ ಸೂರ್ಯಕುಮಾರ್ ಯಾದವ್, ಪಾಕಿಸ್ತಾನದ ವೇಗಿ ಶಾಹೀನ್ ಅಫ್ರಿದಿ ಮತ್ತು ಭಾರತದ ಮಾಜಿ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್ ಕಾಣಿಸಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಪ್ರೋಮೋ ಸಖತ್ ಸದ್ದು ಮಾಡ್ತಿದೆ. ವಿಷ್ಯ ಅಂದ್ರೆ ಇದೇ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ಇದನ್ನೂ ಓದಿ : 8 ತಿಂಗಳು..  ಕ್ರಿಕೆಟ್ ನಿಂದ 18 ದಿಗ್ಗಜರ ನಿವೃತ್ತಿ – 2025ರ ವಿದಾಯ ಲಿಸ್ಟ್ ನಲ್ಲಿ ಯಾರೆಲ್ಲಾ?

ವಿಡಿಯೋದ ಆರಂಭದಲ್ಲಿ ಒಂದಷ್ಟು ಜನ ಕುಳಿತು ಮ್ಯಾಚ್ ನೋಡ್ತಾ ಇರ್ತಾರೆ. ಎಲ್ರೂ ಫುಲ್ ಟೆನ್ಷನ್​ನಲ್ಲಿ ಇರ್ತಾರೆ. ಕೈ ಕೈ ಹಿಡ್ಕೊಂಡು ಮ್ಯಾಚ್ ಯಾರ ಕಡೆ ಆಗುತ್ತೆ ಅನ್ನೋ ಕ್ಯೂರಿಯಸ್​ನಲ್ಲಿ ಇರ್ತಾರೆ. ಪುಟ್ಟ ಪುಟ್ಟ ಮಕ್ಕಳು ಕೂಡ ಇದಕ್ಕೆ ಹೊರತಲ್ಲ. ಈ ವೇಳೆ ಸ್ಕೀನ್​ನಲ್ಲಿ ಪಾಕಿಸ್ತಾನದ ಸ್ಟಾರ್ ವೇಗದ ಬೌಲರ್ ಶಾಹೀನ್ ಆಫ್ರಿದಿ ಅವರ ಬೌಲಿಂಗ್‌ ಮಾಡುವ ವಿಡಿಯೋ ಕಾಣುತ್ತೆ.  ಮತ್ತೊಂದೆಡೆ ಬ್ಯಾಕ್ ಗ್ರೌಂಡಲ್ಲಿ ರವಿ ಶಾಸ್ತ್ರಿ ಅವರ ಕಾಮೆಂಟ್ರಿ ವಾಯ್ಸ್ ಕೇಳುತ್ತಿರುತ್ತೆ,. ಇನ್ನು ಕ್ರೀಸ್​ನಲ್ಲಿ ಮಿಸ್ಟರ್‌ 360 ಡಿಗ್ರಿ ಖ್ಯಾತಿಯ ಸೂರ್ಯಕುಮಾರ್ ಯಾದವ್ ಬ್ಯಾಟಿಂಗ್‌ ಮಾಡುವುದನ್ನು ತೋರಿಸಲಾಗಿದೆ. ಕೊನೆಯ ಎಸೆತದಲ್ಲಿ ಮೂರು ರನ್‌ಗಳ ಅವಶ್ಯಕತೆ ಇತ್ತು. ಆಗ ಸೂರ್ಯ ಆಗಸೆದೆತ್ತರಕ್ಕೆ ಚೆಂಡನ್ನು ಬಾರಿಸ್ತಾರೆ. ಟಿವಿಯಲ್ಲಿ ಈ ದೃಶ್ಯ ನೋಡ್ತಾ ಇದ್ದ ಅಭಿಮಾನಿಗಳ ಹೃದಯ ಬಡಿತ ಹೆಚ್ಚಾಗುತ್ತಲೇ ಇತ್ತು. ಆಗ ರವಿ ಶಾಸ್ತ್ರಿ ಇದು ಸಿಕ್ಸರ್‌ ಆಗುತ್ತದೋ ಕ್ಯಾಚ್‌ ಆಗುತ್ತದೋ ಅಂತಾ ಹೇಳಿ ಟೆನ್ಷನ್ ಹೆಚ್ಚಿಸ್ತಾರೆ. ಬಳಿಕ ಸಿಕ್ಸರ್ ಹೋಗುತ್ತಿದನ್ನು ಕನ್ಪರ್ಮ್ ಮಾಡಿದ್ದು ಫ್ಯಾನ್ಸ್ ಮ್ಯಾಚ್ ಗೆದ್ದ ಖುಷಿಯಲ್ಲಿ ಸಂಭ್ರಮಿಸ್ತಾರೆ.. ಟಿವಿಯನ್ನು ನೋಡ್ತಾ ಇದ್ದ ಪುಟ್ಟ ಬಾಲಕಿ ಹೋಗಿ ತನ್ನ ತಾತಾನನ್ನು ತಬ್ಬಿಕೊಳ್ತಾಳೆ. ಆಗಲೇ ವೀರೇಂದ್ರ ಸೆಹ್ವಾಗ್‌ ಅವರ ಎಂಟ್ರಿಯೂ ಆಗುತ್ತದೆ. ವೀರೂ ತಾತನ ಹೆಗಲ ಮೇಲೆ ಕೈ ಹಾಕುತ್ತಾ ಮಾತನಾಡಲು ಆರಂಭಿಸುತ್ತಾರೆ. ಇತ್ತೀಚಿಗೆ ನಾವು ವಿಶ್ವ ಚಾಂಪಿಯನ್‌ ಪಟ್ಟವನ್ನು ಅಲಂಕರಿಸಿದ್ದೇವೆ. ಮತ್ತೆ ಸೂರ್ಯಕುಮಾರ್ ಯಾದವ್ ಅವರ ನಾಯಕತ್ವದಲ್ಲಿ ಏಷ್ಯಾ ಕಪ್​ನೂ ಗೆಲ್ಲುತ್ತೇವೆ ಎಂದು ನನಗೆ ವಿಶ್ವಾಸ ಇದೆ ಎನ್ನುತ್ತಾರೆ. ಏಷ್ಯಾ ಕಪ್‌ನ ಅಧಿಕೃತ ಪ್ರಸಾರಕ ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್‌ನ ಪ್ರೋಮೋದಲ್ಲಿ ಇದಿಷ್ಟು ಸೆರೆಯಾಗಿದೆ. ಆದ್ರೀಗ ಇದೇ ಪ್ರೋಮೋ ಜನಾಕ್ರೋಶಕ್ಕೆ ಕಾರಣವಾಗಿದೆ.

ಏಷ್ಯಾಕಪ್ ಬಹಿಷ್ಕಾರಕ್ಕೆ ಕರೆಕೊಟ್ಟ ಫ್ಯಾನ್ಸ್!

ಅಭಿಮಾನಿಗಳಲ್ಲಿ ಕ್ರೇಜ್ ಹೆಚ್ಚಿಸೋಕೆ ಪ್ರೋಮೋ ಬಿಟ್ರೂ ಕೂಡ ಇದು ತಿರುಗುಬಾಣವಾದಂತಾಗಿದೆ. ಯಾಕಂದ್ರೆ ಕಳೆದ ಏಪ್ರಿಲ್ 23 ರಂದು ಪಹಲ್ಗಾಮ್‌ನಲ್ಲಿ ನಡೆದ ದಾಳಿಯಲ್ಲಿ 26 ನಾಗರಿಕರು ಸಾವನ್ನಪ್ಪಿದ್ರು. ದಾಳಿ ಹಿಂದೆ ಇರೋದೇ ಪಾಕಿಸ್ತಾನ ಅಂತಾ ಭಾರತೀಯರು ಕೆರಳಿ ಕೆಂಡವಾಗಿದ್ರು. ಹೀಗಾಗಿ ಉಭಯ ರಾಷ್ಟ್ರಗಳು ಇನ್ಮುಂದೆ ಏಷ್ಯಾಕಪ್​ನಂತ ಟೂರ್ನಿಗಳಲ್ಲೂ ಆಡ್ಬಾರ್ದು ಅಂತಾ ಆಗ್ರಹಿಸಿದ್ರು. ಹೀಗಿದ್ರೂ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯದ ಬಗ್ಗೆ ಪ್ರೋಮೋ ಬಿಟ್ಟಿರೋದು ಸಿಟ್ಟಿಗೆ ಕಾರಣ ಆಗಿದೆ. ಇಟ್ಸ್ ಇನ್ ಸೆನ್ಸಿಟಿವ್ ಅಂದಿದ್ದಾರೆ. ವೀರೇಂದ್ರ ಸೆಹ್ವಾಗ್ ರಾಷ್ಟ್ರೀಯ ಭಾವನೆಗಳನ್ನು ನಿರ್ಲಕ್ಷಿಸಿದ್ದಾರೆ. ಹಾಗೇ ಪ್ರಚಾರಗಳು ಪ್ರಾರಂಭವಾಗುವ ಸ್ಥಳದಲ್ಲಿ ದೇಶಭಕ್ತಿ ಕೊನೆಗೊಳ್ಳುತ್ತದೆ ಅಂತಾ ಪೋಸ್ಟ್​ಗಳನ್ನ ಹಾಕಿದ್ದಾರೆ. ಹಾಗೇ ಸೋನಿ ಸ್ಪೋರ್ಟ್ಸ್, ಏಷ್ಯಾ ಕಪ್ ಮತ್ತು ಬಿಸಿಸಿಐ ಬಹಿಷ್ಕಾರ ಮಾಡುವಂತೆ ಕರೆ ಕೊಟ್ಟಿದ್ದಾರೆ.

ಇನ್ನು ಏಷ್ಯಾಕಪ್​ನಲ್ಲಿ ಭಾರತ ತಂಡವು ಯುಎಇ, ಪಾಕಿಸ್ತಾನ ಮತ್ತು ಒಮಾನ್ ಜೊತೆಗೆ ಗ್ರೂಪ್ ಎ ನಲ್ಲಿ ಸ್ಥಾನ ಪಡೆದಿದೆ. ಗ್ರೂಪ್ ಬಿಯಲ್ಲಿ ಅಫ್ಘಾನಿಸ್ತಾನ, ಬಾಂಗ್ಲಾದೇಶ, ಹಾಂಗ್ ಕಾಂಗ್ ಮತ್ತು ಶ್ರೀಲಂಕಾ ಸೇರಿವೆ. ಭಾರತವು ಸೆಪ್ಟೆಂಬರ್ 10 ರಂದು ಯುಎಇ ವಿರುದ್ಧ ತನ್ನ ಮೊದಲ ಪಂದ್ಯವನ್ನ ಆಡಲಿದೆ. ಸೆಪ್ಟೆಂಬರ್ 14 ರಂದು, ಭಾರತವು ತನ್ನ ಬದ್ಧ ವೈರಿಯಾಗಿರುವ ಪಾಕಿಸ್ತಾನವನ್ನು ಎದುರಿಸಲಿದೆ ಮತ್ತು ಸೆಪ್ಟೆಂಬರ್ 19 ರಂದು ಅಬುಧಾಬಿಯಲ್ಲಿ ಒಮಾನ್ ವಿರುದ್ಧ ಮೂರನೇ ಪಂದ್ಯ ಆಡಲಿದ್ದು ಈ ಮೂಲಕ ಗುಂಪು ಹಂತದ ಅಭಿಯಾನವನ್ನು ಕೊನೆಗೊಳಿಸಲಿದೆ. ಅದ್ರಲ್ಲೂ ಏಷ್ಯಾಕಪ್​ನಲ್ಲಿ ಸೂರ್ಯಕುಮಾರ್ ಯಾದವ್ ನಾಯಕನಾಗಿ ಇದೇ ಮೊದಲ ಬಾರಿಗೆ ಮುನ್ನಡೆಸ್ತಾ ಇದ್ದಾರೆ.

Shantha Kumari