ನಾವು ಸದಾ ನಿಮ್ಮೊಂದಿಗಿದ್ದೇವೆ.. 85 ದಿನಗಳ ನಂತರ RCB ಪೋಸ್ಟ್!‌ – ಫ್ಯಾನ್ಸ್‌ಗಾಗಿ  ಮಹತ್ವದ ನಿರ್ಧಾರ!

ನಾವು ಸದಾ ನಿಮ್ಮೊಂದಿಗಿದ್ದೇವೆ.. 85 ದಿನಗಳ ನಂತರ RCB ಪೋಸ್ಟ್!‌ – ಫ್ಯಾನ್ಸ್‌ಗಾಗಿ  ಮಹತ್ವದ ನಿರ್ಧಾರ!

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ 18 ವರ್ಷಗಳ ಬಳಿಕ ಚಾಂಪಿಯನ್‌ ಆಗಿದೆ. ಇದು ಆರ್‌ಸಿಬಿ ಅಭಿಮಾನಿಗಳ ಸಂಭ್ರಮಕ್ಕೆ ಕಾರಣವಾಗಿತ್ತು. ಆದ್ರೆ ಈ ಖುಷಿ ಹೆಚ್ಚು ಸಮಯ ಇರಲಿಲ್ಲ.. ಬೆಂಗಳೂರಿನಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಅಮಾಯಕ 11 ಜನರು ಸಾವನ್ನಪ್ಪಿದ್ದರು. ಆರ್‌ಸಿಬಿ ಸಂಭ್ರಮಾಚರಣೆಯಲ್ಲಿ ನಡೆದ ಕಾಲ್ತುಳಿತದ ಬಳಿಕ ಸಾಲು ಸಾಲು ತನಿಖೆಗಳು ನಡೆದವು. ಈ ಘಟನೆ ಬಳಿಕ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ಈವರೆಗೂ ಸಾಮಾಜಿಕ ಮಾಧ್ಯಮದಲ್ಲಿ ಒಂದೇ ಒಂದು ಸಿಂಗಲ್‌ ಫೋಸ್ಟ್‌ ಸಹ ಮಾಡಿರಲಿಲ್ಲ. ಆದರೆ ಇದೀಗ ಕಾಲ್ತುಳಿತ ದುರಂತ ನಡೆದು ಬರೋಬ್ಬರಿ 85 ದಿನಗಳ ನಂತರ ಮೊದಲ ಬಾರಿಗೆ RCB ಸಾಮಾಜಿಕ ಮಾಧ್ಯಮದಲ್ಲಿ ಭಾವನಾತ್ಮಕ ಸಂದೇಶವನ್ನು ಪೋಸ್ಟ್ ಮಾಡಿದೆ.

ಇದನ್ನೂ ಓದಿ: ಇಂದು ಆ್ಯಂಕರ್ ಅನುಶ್ರೀ ಕಲ್ಯಾಣ – ಮದುವೆ ನೋಡಲು ಬಂದ ಫ್ಯಾನ್ಸ್‌ಗೆ ನೋ ಎಂಟ್ರಿ!

ಆರ್‌ಸಿಬಿ ತಂಡ ಕಾಲ್ತುಳಿತ ದುರಂತದ ಬಳಿಕ ಸೋಶಿಯಲ್‌ ಮೀಡಿಯಾದಲ್ಲಿ ಯಾವುದೇ ಪೋಸ್ಟ್‌ ಹಂಚಿಕೊಳ್ಳುತ್ತಿರಲಿಲ್ಲ. ಇದೀಗ ಆರ್‌ಸಿಬಿ ಬರೋಬ್ಬರಿ 85 ದಿನಗಳ ನಂತರ ಫೋಸ್ಟ್‌ ಮಾಡಿದ್ದು, ಮಹತ್ವದ ಮಾಹಿತಿ ಹಂಚಿಕೊಂಡಿದೆ. ಸಾಮಾಜಿಕ ಜಾಲತಾಣ ಖಾತೆಯಲ್ಲಿ ಪೋಸ್ಟ್ ಮಾಡಿರುವ ಆರ್‌ಸಿಬಿ ತಂಡ ಭಾವನಾತ್ಮಕ ಪೋಸ್ಟ್ ಅನ್ನು ಹಂಚಿಕೊಂಡಿದೆ. ತನ್ನ ಪತ್ರದಲ್ಲಿ ಆರ್‌ಸಿಬಿ, ‘ಆತ್ಮೀಯ 12 ನೇ ಮ್ಯಾನ್ ಆರ್ಮಿ, ಇದು ನಿಮಗೆ ನಮ್ಮ ಹೃದಯಪೂರ್ವಕ ಪತ್ರ!’ ಎಂದು ಶುರು ಮಾಡಿ ಅನೇಕ ವಿಚಾರಗಳನ್ನು ಹಂಚಿಕೊಂಡಿದೆ.

ಆರ್‌ಸಿಬಿ ಪೋಸ್ಟ್‌ನಲ್ಲಿ ಏನಿದೆ?

ʼನಾವು ಪೋಸ್ಟ್ ಮಾಡಿ ಸುಮಾರು ಮೂರು ತಿಂಗಳಕಾಲ ಕಳೆದಿದೆ. ನಮ್ಮ ಮೌನ, ಖಾಲಿತನದಿಂದಷ್ಟೇ ಅಲ್ಲ, ದುಃಖದಿಂದ ತುಂಬಿದ ತೀವ್ರವಾದ ಮೌನ. ಈ ಮಾಧ್ಯಮದ ಮುಖಾಂತರ ನೀವೆಲ್ಲಾ ಸಂತೋಷದಿಂದ ಸಂಭ್ರಮಿಸುವ ವಿಷಯಗಳನ್ನು ಮತ್ತು ಕ್ಷಣಗಳನ್ನು ಹಂಚಿಕೊಳ್ಳುತ್ತಿದ್ದೆವು. ಆದರೆ ಜೂನ್ 4ರ ಘಟನೆ ಎಲ್ಲವನ್ನೂ ಬದಲಾಯಿಸಿತು. ಆ ದಿನ ನಮ್ಮ ಹೃದಯವನ್ನು ಮುರಿಯಿತು.

ನಂತರದ ಮೌನವು ಕೇವಲ ನಿಶ್ಯಬ್ದವಲ್ಲ, ಅದು ಶ್ರದ್ಧೆಯಿಂದ ತುಂಬಿದ ಶಾಂತ ಶ್ರದ್ಧಾಂಜಲಿ. ಈ ಮೌನದೊಳಗೆ ನೋವನ್ನು ಅನುಭವಿಸುತ್ತಾ ನಾವು ಆಳವಾಗಿ ಯೋಚಿಸಿದ್ದೆವು ಮತ್ತು ಅನೇಕ ವಿಷಯಗಳನ್ನು ಕಲಿತೆವು. ನೋವನ್ನೇ ಶ್ರದ್ಧೆಯಾಗಿ, ನಂಬಿಕೆಯಾಗಿ ರೂಪಿಸಬೇಕೆಂದು ತೀರ್ಮಾನಿಸಿದ್ದೆವು. ಅದರ ಫಲವೇ RCB ಕೇರ್ಸ್. ನಮ್ಮ ಅಭಿಮಾನಿಗಳು ಮತ್ತು ಸಮುದಾಯಕ್ಕಾಗಿ ನಿಷ್ಠೆಯಿಂದ ರೂಪಿಸಿದ ಒಂದು ಯೋಜನೆ. ಇಂದು ನಾವು ಮರಳಿದ್ದೇವೆ; ನಿಮ್ಮೊಂದಿಗೆ ನಿಲ್ಲುವ ಭರವಸೆಯನ್ನು ನೀಡುತ್ತ, ಕರ್ನಾಟಕದ ಹೆಮ್ಮೆಯಾಗಿ ಮುಂದೆ ಸಾಗುತ್ತೇವೆ. ಇದು ನಮ್ಮ ಕಾಳಜಿ, ನಮ್ಮ ಪ್ರತಿಜ್ಞೆ. ಆರ್‌ಸಿಬಿ ಕೇರ್ಸ್: ನಾವು ಸದಾ ನಿಮ್ಮೊಂದಿಗಿದ್ದೇವೆʼ ಎಂದು ಬರೆದು ಫೋಸ್ಟ್‌ ಮಾಡಿದೆ.

Shwetha M