ಟ್ರಂಪ್ರಿಂದ ಭಾರತದ ಮೇಲೆ 50 ರಷ್ಟು ಸುಂಕ- ಪ್ರಧಾನಿ ಕಚೇರಿಯಲ್ಲಿ ಇಂದು ಮಹತ್ವದ ಸಭೆ

ಭಾರತೀಯ ಸರಕುಗಳಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿಧಿಸಿರುವ ಶೇ. 50ರಷ್ಟು ಸುಂಕಗಳು ಜಾರಿಯಾದ ಬೆನ್ನಲ್ಲೇ ಇಂದು ಪ್ರಧಾನಿ ನರೇಂದ್ರ ಮೋದಿ ಅವರ ಕಚೇರಿಯಲ್ಲಿ ಸಭೆ ಕರೆಯಲಾಗಿದೆ. ಭಾರತೀಯ ರಫ್ತುದಾರರಿಗೆ ಎದುರಾಗಬಹುದಾದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಈ ಸಭೆಯನ್ನು ಕರೆಯಲಾಗಿದೆ. ಈ ಸಭೆಯು ಪ್ರಧಾನ ಮಂತ್ರಿ ಅವರ ಪ್ರಧಾನ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ನಡೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಾಷಿಂಗ್ಟನ್ ಭಾರತೀಯ ಸರಕುಗಳಿಗೆ ಸುಂಕಗಳನ್ನು ದ್ವಿಗುಣಗೊಳಿಸಿದ ಅನಂತರ ಭಾರತೀಯ ರಫ್ತುದಾರರ ಮೇಲೆ ಇದು ಹೆಚ್ಚಿನ ಒತ್ತಡ ಉಂಟು ಮಾಡಲಿದೆ. ಅಮೆರಿಕ ಮಾರುಕಟ್ಟೆಗೆ ಪ್ರವೇಶಿಸುವ ಭಾರತೀಯ ಸರಕುಗಳು ಇನ್ನು ಮುಂದೆ ಶೇ. 50ರಷ್ಟು ಸುಂಕಕ್ಕೆ ಒಳಪಡುತ್ತವೆ. ಅಮೆರಿಕದಲ್ಲಿ ಹೆಚ್ಚಿನ ಸುಂಕಗಳ ಪರಿಣಾಮವನ್ನು ಎದುರಿಸಲು ಭಾರತೀಯ ರಫ್ತುದಾರರಿಗೆ ಸೂಕ್ತ ಕ್ರಮಗಳನ್ನು ನಿರ್ದೇಶಿಸಲು ನಡೆಯುವ ಉನ್ನತ ಮಟ್ಟದ ಈ ಸಭೆ ಪ್ರಧಾನ ಮಂತ್ರಿಯ ಪ್ರಧಾನ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಈಗಾಗಲೇ ಅಸ್ತಿತ್ವದಲ್ಲಿರುವ ಶೇ. 25ರಷ್ಟು ತೆರಿಗೆಯನ್ನು ಅರ್ಥ ಮಾಡಿಕೊಳ್ಳಲು ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯವು ರಫ್ತುದಾರರು ಮತ್ತು ರಫ್ತು ಉತ್ತೇಜನಾ ಮಂಡಳಿಗಳೊಂದಿಗೆ ಸಮಾಲೋಚನೆ ನಡೆಸುತ್ತಿದೆ.
ಈಗಾಗಲೇ ಇದು ಲಾಭಾಂಶದ ಜತೆಗೆ ಸ್ಪರ್ಧೆಯನ್ನು ಕಡಿಮೆ ಮಾಡಿದೆ. ನೀತಿ ಆಯ್ಕೆಗಳಲ್ಲಿ ವಿಶಾಲವಾದ, ಆರ್ಥಿಕ- ವ್ಯಾಪಿ ಕ್ರಮಗಳಿಗಿಂತ ನಿರ್ದಿಷ್ಟ ಕೈಗಾರಿಕೆಗಳಿಗೆ ಉದ್ದೇಶಿತ ಬೆಂಬಲ ಸೇರಿವೆ ಎಂದು ಹಲವು ಸಂಸ್ಥೆಗಳು ತಿಳಿಸಿವೆ. ರಫ್ತುಆಧಾರಿತ ಘಟಕಗಳು ಮತ್ತು ಸಣ್ಣ ಮತ್ತು ಮಧ್ಯಮ ಉದ್ಯಮಗಳನ್ನು ರಕ್ಷಿಸುವುದು ಸರ್ಕಾರದ ಆದ್ಯತೆ. ಯಾಕೆಂದರೆ ಇವುಗಳು ಹೆಚ್ಚಾಗಿ ಬಾಹ್ಯ ಘರ್ಷಣೆಗಳಿಗೆ ಗುರಿಯಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಫ್ತುದಾರರು ಸುಂಕ ಹೆಚ್ಚಳಕ್ಕೆ ಸಿದ್ಧರಾಗುತ್ತಿದ್ದಂತೆ ಭಾರತ ಯಾವ ರೀತಿ ಇದಕ್ಕೆ ಪ್ರತಿಕ್ರಿಯಿಸಬೇಕು ಎನ್ನುವ ಅಂಶಗಳನ್ನು ಇಂದಿನ ಸಭೆಯಲ್ಲಿ ಅಂತಿಮಗೊಳಿಸುವ ನಿರೀಕ್ಷೆಯಿದೆ ಎನ್ನಲಾಗುತ್ತಿದೆ.

ನೋಡಿರಿ

