ಶಾಲೆಯಲ್ಲಿ ಹೋಮ್ವರ್ಕ್ ಕೊಟ್ಟಿದ್ದಕ್ಕೆ ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ!

ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಕರು ಪಾಠದ ಜೊತೆಗೆ ಒಂದಿಷ್ಟು ಹೋಮ್ವರ್ಕ್ ಕೊಡ್ತಾರೆ. ವಿದ್ಯಾರ್ಥಿಗಳು ಹೋಮ್ವರ್ಕ್ ಕಂಪ್ಲೀಟ್ ಮಾಡಿಲ್ಲ ಅಂದ್ರೆ ಶಿಕ್ಷೆ ಕೊಡೋದು ಕಾಮನ್. ಆದ್ರೀಗ ಇಲ್ಲೊಬ್ಬಳು ವಿದ್ಯಾರ್ಥಿನಿ ಸ್ಕೂಲ್ನಲ್ಲಿ ಹೋಮ್ವರ್ಕ್ ಕೊಟ್ಟಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಗಣೇಶ ಚತುರ್ಥಿಗೆ ಸಕಲ ಸಿದ್ಧತೆ- 75 ಏಕಗವಾಕ್ಷಿ ಕೇಂದ್ರಗಳನ್ನು ಸ್ಥಾಪಿಸಿದ ಬಿಬಿಎಂಪಿ
ಈ ಘಟನೆ ಬೆಂಗಳೂರು ಉತ್ತರ ತಾಲೂಕಿನ ದಾಸನಪುರ ಗ್ರಾಮದಲ್ಲಿ ನಡೆದಿದೆ. ರಾಮು ಮತ್ತು ಶೋಭ ದಂಪತಿಯ ಮಗಳು ಕುಸುಮ (15) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ. ಮಾಕಳಿಯ ಸೃಷ್ಟಿ ಪ್ರೌಢಶಾಲೆಯಲ್ಲಿ ಕುಸುಮ ಹತ್ತನೇ ತರಗತಿ ಓದುತ್ತಿದ್ದಳು. ಶಾಲೆಯಲ್ಲಿ ಶಿಕ್ಷಕರು ಕೊಟ್ಟ ಹೋಮ್ ವರ್ಕ್ ಮಾಡದೇ ಹಾಗೇ ಇಟ್ಟುಕೊಂಡಿದ್ದಳು. ಶಿಕ್ಷಕರು ಹೋಮ್ ವರ್ಕ್ ಕೇಳುತ್ತಾರೆ ಅನ್ನೋ ಭಯದಿಂದ ಮೊನ್ನೆ ಶಾಲೆ ಬಿಟ್ಟು ಮನೆಯಲ್ಲಿ ಉಳಿದಿದ್ದಳು. ಹೋಮ್ ವರ್ಕ್ ಮಾಡಿಲ್ಲ ಅಂದರೆ ಟೀಚರ್ ಹೊಡೆಯುತ್ತಾರೆ ಎನ್ನುವ ಭಯ, ಶಾಲೆಗೆ ರಜೆ ಹಾಕಿದರೆ ಪೋಷಕರು ಬೈಯ್ಯುತ್ತಾರೆ ಎನ್ನುವ ಮನಸ್ಥಿತಿಯಲ್ಲಿ ಕುಸುಮ ಮನನೊಂದಿದ್ದಳು. ಹೀಗಾಗಿ ಮನೆಯಲ್ಲಿ ಯಾರು ಇಲ್ಲದ ವೇಳೆ ಬಾಲಕಿ ನೇಣಿನ ಕುಣಿಕೆಗೆ ಕೊರಳೊಡ್ಡಿದ್ದಾಳೆ.
ಸದ್ಯ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನೆಲಮಂಗಲ ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಮೃತ ದೇಹ ಹಸ್ತಾಂತರ ಮಾಡಲಾಗಿದೆ. ಈ ಸಂಬಂಧ ಶಾಲಾ ಆಡಳಿತ ಮಂಡಳಿ ಸ್ಪಷ್ಟನೆ ನೀಡಿದ್ದು, ಎಲ್ಲಾ ಮಕ್ಕಳಿಗೂ ಒಂದೇ ರೀತಿ ಹೋಮ್ ವರ್ಕ್ ನೀಡಲಾಗಿದೆ. ಅವರ ಸಾವಿಗೆ ಬೇರೆ ಕಾರಣವೂ ಇರಬಹುದು. ಪೊಲೀಸರ ತನಿಖೆ ಬಳಿಕ ಸತ್ಯ ಹೊರ ಬರುತ್ತದೆ ಎಂದು ಘಟನೆ ಕುರಿತಂತೆ ಶಾಲೆಯ ಮುಖ್ಯ ಶಿಕ್ಷಕ ಅಶೋಕ್ ಅವರು ಹೇಳಿದ್ದಾರೆ.

ನೋಡಿರಿ

