ರೋಹಿತ್ & ಕೊಹ್ಲಿ ವಿದಾಯ ಪಂದ್ಯಕ್ಕೆ ಬಿಸಿಸಿಐ ಗರಂ – ಐಪಿಎಲ್ ನಿವೃತ್ತಿ ಬಗ್ಗೆ ವಿರಾಟ್ ಹಿಂಟ್!

2024ರಲ್ಲಿ ಟಿ-20 ವಿಶ್ವಕಪ್ ಗೆದ್ದ ಬಳಿಕ ರೋಹಿತ್ ಮತ್ತು ವಿರಾಟ್ ಟಿ-20ಐ ಕ್ರಿಕೆಟ್ಗೆ ಗುಡ್ ಬೈ ಹೇಳಿದ್ರು. ಕಳೆದ ಮೇ ತಿಂಗಳಲ್ಲಿ ಟೆಸ್ಟ್ ಫಾರ್ಮೆಟ್ನಿಂದಲೂ ನಿವೃತ್ತಿ ಘೋಷಿಸಿದ್ರು. ಸದ್ಯ ಐಪಿಎಲ್ ಬಳಿಕ ಇಬ್ಬರೂ ಕೂಡ ಫ್ಯಾಮಿಲಿ ಜೊತೆ ಟೈಂ ಸ್ಪೆಂಡ್ ಮಾಡ್ತಿದ್ದಾರೆ. ಅಕ್ಟೋಬರ್ ತಿಂಗಳಿನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿ ಮೂಲಕ ಮೈದಾನಕ್ಕೆ ಮರಳೋಕೆ ಸಿದ್ಧತೆ ನಡೆಸಿದ್ದಾರೆ. ಅಷ್ಟಕ್ಕೂ ಈ ಸ್ಟಾರ್ ಜೋಡಿಯ ಟಾರ್ಗೆಟ್ ಇರೋದು 2027ರ ಏಕದಿನ ವಿಶ್ವಕಪ್ ಮೇಲೆ.
ಇದನ್ನೂ ಓದಿ : ಏಷ್ಯಾಕಪ್ TO ವಿಶ್ವಕಪ್.. ಫುಲ್ ಬ್ಯುಸಿ – 6 ತಿಂಗಳಲ್ಲಿ INDಗೆ ಇಷ್ಟೊಂದು ಪಂದ್ಯ
ಐಸಿಸಿಯ ಪ್ರತಿಷ್ಠಿತ ಟೂರ್ನಮೆಂಟ್ ಆಗಿರುವ ಏಕದಿನ ವಿಶ್ವಕಪ್ ಮುಂದಿನ ಆವೃತ್ತಿಯ 2027ರಲ್ಲಿ ನಡೆಯಲಿದೆ. 10 ತಂಡಗಳ ಐಸಿಸಿ ಟೂರ್ನಮೆಂಟ್ಗೆ ಎರಡು ವರ್ಷಗಳಿಗಿಂತ ಜಾಸ್ತಿ ಟೈಂ ಇದೆ. ಈ ವೇಳೆಗೆ ರೋಹಿತ್‌ಗೆ 41 ಮತ್ತು ಕೊಹ್ಲಿಗೆ 39 ವರ್ಷ ವಯಸ್ಸಾಗಿರುತ್ತದೆ. ಹೀಗಾಗಿ ಭಾರತೀಯ ಕ್ರಿಕೆಟ್‌ನ ಇಬ್ಬರು ಅನುಭವಿ ಆಟಗಾರರಿಗೆ ಪಂದ್ಯದ ಫಿಟ್‌ನೆಸ್ ಮತ್ತು ಫಾರ್ಮ್ ಅನ್ನು ಕಾಯ್ದುಕೊಳ್ಳುವುದು ಕಷ್ಟವಾಗಬಹುದು. 2027 ರ ವಿಶ್ವಕಪ್ ತಮ್ಮ ಮುಂದಿನ ಗುರಿ ಎಂದು ವಿರಾಟ್ ಕೊಹ್ಲಿ ಐಪಿಎಲ್ ಟೈಮಲ್ಲಿ ಹೇಳಿಕೊಂಡಿದ್ರು. ಇತ್ತ ರೋಹಿತ್ ಕೂಡ ತಮ್ಮ ಕೈಗೆ ಇನ್ನೂ ಸಿಗದ ಏಕೈಕ ವೈಟ್-ಬಾಲ್ ಐಸಿಸಿ ಟ್ರೋಫಿಗೆ ತಮ್ಮನ್ನು ತಾವು ಸಿದ್ಧಪಡಿಸಿಕೊಳ್ಳಲು ಮುಂದಾಗಿದ್ದಾರೆ.
ಸದ್ಯಕ್ಕಿರೋ ಚರ್ಚೆ ಪ್ರಕಾರ ರೋಹಿತ್ ಮತ್ತು ಕೊಹ್ಲಿಗೆ ಅಕ್ಟೋಬರ್ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯೇ ಕೊನೆ ಎನ್ನಲಾಗಿದೆ. ಹೀಗಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ಉಪಾಧ್ಯಕ್ಷ ರಾಜೀವ್ ಶುಕ್ಲಾ ಬಳಿ ಪ್ರಸ್ತಾಪ ಮಾಡಲಾಗಿದೆ. ಹಾಗೇ ವಿದಾಯ ಸರಣಿ ಬಗ್ಗೆ ಪ್ರಸ್ತಾಪ ಮಾಡಲಾಗಿದೆ. ಆದ್ರೆ ಇಬ್ಬರು ಆಟಗಾರರಿಗೆ ವಿದಾಯ ಸರಣಿಯನ್ನು ಆಯೋಜಿಸುವ ಯಾವುದೇ ಯೋಜನೆ ಇಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ. ರೋಹಿತ್ ಮತ್ತು ಕೊಹ್ಲಿ ಯಾವಾಗ ನಿವೃತ್ತಿಯಾಗಿದ್ದಾರೆ. ಇಬ್ಬರೂ ಏಕದಿನ ಪಂದ್ಯಗಳನ್ನು ಆಡ್ತಿದ್ದಾರೆ. ನೀವು ವಿದಾಯ ಸರಣಿಯ ಬಗ್ಗೆ ಏಕೆ ಚಿಂತೆ ಮಾಡುತ್ತಿದ್ದೀರಿ? ಅವರು ಹಂತ ಹಂತವಾಗಿ ಎರಡು ಸ್ವರೂಪಗಳಿಂದ ನಿವೃತ್ತರಾಗಿದ್ದಾರೆ, ಆದರೆ ಅವರು ಏಕದಿನ ಪಂದ್ಯಗಳಲ್ಲಿ ಆಡುತ್ತಿದ್ದಾರೆ ಅಲ್ವೇ. ಹೀಗಾಗಿ ವಿದಾಯದ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ ಎಂದಿದ್ದಾರೆ. ಬಿಸಿಸಿಐನಲ್ಲಿ ನಮ್ಮ ನೀತಿ ತುಂಬಾ ಸ್ಪಷ್ಟವಾಗಿದೆ. ನಾವು ಯಾವುದೇ ಆಟಗಾರನನ್ನು ನಿವೃತ್ತಿ ಹೊಂದುವಂತೆ ಹೇಳುವುದಿಲ್ಲ. ಆಟಗಾರ ಸ್ವತಃ ಆ ನಿರ್ಧಾರ ತೆಗೆದುಕೊಳ್ಳುತ್ತಾನೆ. ಅವರೇ ನಿರ್ಧರಿಸಬೇಕು, ಮತ್ತು ನಾವು ಅದನ್ನು ಗೌರವಿಸುತ್ತೇವೆ. ವಿರಾಟ್ ಕೊಹ್ಲಿ ತುಂಬಾ ಫಿಟ್ ಆಗಿದ್ದಾರೆ ಮತ್ತು ರೋಹಿತ್ ಶರ್ಮಾ ತುಂಬಾ ಚೆನ್ನಾಗಿ ಆಡುತ್ತಿದ್ದಾರೆ ಎಂದಿದ್ದಾರೆ.
ಮತ್ತೊಂದೆಡೆ ವಿರಾಟ್ ಕೊಹ್ಲಿ ಐಪಿಎಲ್ ನಿವೃತ್ತಿ ಬಗ್ಗೆ ಸ್ವಸ್ತಿಕ್ ಚಿಕಾರ ಅಚ್ಚರಿಯ ಮಾಹಿತಿಯೊಂದನ್ನ ಬಹಿರಂಗ ಪಡಿಸಿದ್ದಾರೆ. ಉತ್ತರ ಪ್ರದೇಶದ ಬಲಗೈ ಬ್ಯಾಟ್ಸ್‌ಮನ್ ಚಿಕಾರ ರೆವ್‌ಸ್ಪೋರ್ಟ್ಜ್ ಜೊತೆ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ. ನಾನು ಸಂಪೂರ್ಣ ಫಿಟ್ ಆಗಿರುವವರೆಗೂ ನಾನು ಕ್ರಿಕೆಟ್ ಆಡುತ್ತೇನೆ. ಪೂರ್ಣ 20 ಓವರ್‌ಗಳನ್ನ ಫೀಲ್ಡಿಂಗ್ ಮಾಡಿ ನಂತರ ಬ್ಯಾಟಿಂಗ್ ಮಾಡುತ್ತೇನೆ. ನಾನು ಇಂಪ್ಯಾಕ್ಟ್ ಆಟಗಾರನಾಗಿ ಆಡಬೇಕಾದ ದಿನ ಬಂದ್ರೆ ನಾನು ಕ್ರಿಕೆಟ್ ತ್ಯಜಿಸುತ್ತೇನೆ ಎಂದಿರೋದಾಗಿ ಚಿಕಾರ ಹೇಳಿದ್ದಾರೆ. ಹಾಗೇ ನೋಡಿದ್ರೆ ವಿರಾಟ್ ಕೊಹ್ಲಿ ಕಂಪ್ಲೀಟ್ ಫಿಟ್ ಆಗಿದ್ದಾರೆ. ಐಪಿಎಲ್ 2026 ರ ವೇಳೆಗೆ ಅವರಿಗೆ 37 ವರ್ಷ ತುಂಬಲಿದೆ. ಕಳೆದ ಸೀಸನ್ನಲ್ಲೂ ಅದ್ಭುತ ಫಾರ್ಮ್ನಲ್ಲಿದ್ರು. 15 ಪಂದ್ಯಗಳಿಂದ 657 ರನ್ ಹಾಕಿದ್ರು.

ನೋಡಿರಿ

