ಮುಂಬೈ ತಂಡದ ನಾಯಕತ್ವಕ್ಕೆ ರಹಾನೆ ಗುಡ್ ಬೈ – ನಾಯಕ ಸ್ಥಾನ ಬೇಡ ಅಂದಿದ್ಯಾಕೆ ಅಜಿಂಕ್ಯ ರಹಾನೆ?

ಕಳೆದ ಎರಡು ವರ್ಷಗಳಿಂದ ದೇಶೀಯ ಟೂರ್ನಿಗಳಲ್ಲಿ ಮಿಂಚುತ್ತಿದ್ದ ಅಜಿಂಕ್ಯ ರಹಾನೆ ಸುದ್ದಿಯಲ್ಲಿದ್ದಾರೆ. ಮುಂಬೈ ತಂಡದ ನಾಯಕರಾಗಿರುವ ಅಜಿಂಕ್ಯ ರಹಾನೆ ಇದೀಗ ದಿಢೀರ್ ನಾಯಕತ್ವ ಸ್ಥಾನದಿಂದ ಕೆಳಗಿಳಿದಿದ್ದಾರೆ. ರಣಜಿ ಟೂರ್ನಿಗೂ ಮುನ್ನ ಮುಂಬೈ ತಂಡದ ನಾಯಕತ್ವದಿಂದ ಅಜಿಂಕ್ಯ ರಹಾನೆ ಕೆಳಗಿಳಿದಿದ್ದಾರೆ.
ಇದನ್ನೂ ಓದಿ: 3 ವರ್ಷ.. 13 ಜನ್ರಿಗೆ ಗೇಟ್ ಪಾಸ್ – 2022 To 2025.. ಅದೆಷ್ಟು ಬದಲಾವಣೆ?
ಟೀಮ್ ಇಂಡಿಯಾದ ಅನುಭವಿ ಬ್ಯಾಟ್ಸ್‌ಮನ್ ಅಜಿಂಕ್ಯ ರಹಾನೆ ಮುಂಬರುವ ದೇಶೀಯ ಟೂರ್ನಿಗೂ ಮುಂಚಿತವಾಗಿ ಮುಂಬೈ ತಂಡದ ನಾಯಕತ್ವವನ್ನು ತೊರೆದಿದ್ದಾರೆ. 37 ವರ್ಷದ ಅಜಿಂಕ್ಯ ರಹಾನೆ ಕಳೆದ ಕೆಲ ವರ್ಷಗಳಿಂದ ಮುಂಬೈ ತಂಡವನ್ನು ಮುನ್ನಡೆಸುತ್ತಿದ್ದಾರೆ. ಆದರೀಗ ನಿವೃತ್ತಿ ಅಂಚಿನಲ್ಲಿರುವ ಕಾರಣ ಹೊಸ ಆಟಗಾರರಿಗೆ ಜವಾಬ್ದಾರಿ ಒಪ್ಪಿಸಬೇಕಿದೆ. ಹೀಗಾಗಿ ಮುಂಬರುವ ರಣಜಿ ಸೀಸನ್ನಲ್ಲಿ ಮುಂಬೈ ತಂಡವನ್ನು ಮುನ್ನಡೆಸುವುದಿಲ್ಲ ಎಂದು ರಹಾನೆ ತಿಳಿಸಿದ್ದಾರೆ.
ಮುಂಬೈ ತಂಡವನ್ನು ಮುನ್ನಡೆಸುವುದು ಮತ್ತು ಚಾಂಪಿಯನ್‌ಶಿಪ್‌ಗಳನ್ನು ಗೆಲ್ಲುವುದು ನನಗೆ ಸಿಕ್ಕ ಅಪಾರ ಗೌರವವಾಗಿದೆ. ಮುಂಬರುವ ದೇಶೀಯ ಸೀಸನ್ ನೋಡುವಾಗ, ಹೊಸ ನಾಯಕನನ್ನು ಆಯ್ಕೆ ಮಾಡಲು ಇದು ಸರಿಯಾದ ಸಮಯ ಎಂದು ನಾನು ನಂಬುತ್ತೇನೆ. ಆದ್ದರಿಂದ ನಾನು ನಾಯಕತ್ವದಿಂದ ಕೆಳಗಿಳಿಯಲು ನಿರ್ಧರಿಸಿದ್ದೇನೆ. ಒಬ್ಬ ಆಟಗಾರನಾಗಿ ನನ್ನ ಅತ್ಯುತ್ತಮ ಪ್ರದರ್ಶನ ನೀಡಲು ನಾನು ಸಂಪೂರ್ಣವಾಗಿ ಬದ್ಧನಾಗಿದ್ದೇನೆ. ಅಲ್ಲದೆ ಮುಂಬೈ ಕ್ರಿಕೆಟ್ ಅಸೋಸಿಯೇಷನ್‌ನೊಂದಿಗೆ ನನ್ನ ಪ್ರಯಾಣವನ್ನು ಮುಂದುವರಿಸುತ್ತೇನೆ ಎಂದು ಅಜಿಂಕ್ಯ ರಹಾನೆ ಸೋಷಿಯಲ್ ಮೀಡಿಯಾ ಪೋಸ್ಟ್ ಮೂಲಕ ತಿಳಿಸಿದ್ದಾರೆ. ಅಂದರೆ ನಾಯಕತ್ವ ತ್ಯಜಿಸಿದರೂ ದೇಶೀಯ ಅಂಗಳದಲ್ಲಿ ಮುಂಬೈ ಪರ ಆಡುವುದನ್ನು ಮುಂದುವರೆಸುವುದಾಗಿ ಅಜಿಂಕ್ಯ ರಹಾನೆ ತಿಳಿಸಿದ್ದಾರೆ. ಹೀಗಾಗಿ ಮುಂಬರುವ ರಣಜಿ ಸೀಸನ್ನಲ್ಲಿ ಮುಂಬೈ ತಂಡದಲ್ಲಿ ಅನುಭವಿ ಬ್ಯಾಟರ್ ಆಗಿ ರಹಾನೆ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಇನ್ನು ಅಜಿಂಕ್ಯ ರಹಾನೆ ನಾಯಕತ್ವದಲ್ಲಿ, ಮುಂಬೈ ತಂಡವು 2023–24ರ ಸೀಸನ್ನಲ್ಲಿ ರಣಜಿ ಟ್ರೋಫಿಯನ್ನು ಗೆಲ್ಲುವ ಮೂಲಕ ಏಳು ವರ್ಷಗಳ ಕಾಯುವಿಕೆಯನ್ನು ಕೊನೆಗೊಳಿಸಿತ್ತು. ಹಾಗೆಯೇ ರಹಾನೆ ಮುಂದಾಳತ್ವದ ಮುಂಬೈ ತಂಡವು 2024–25ರ ಸೀಸನ್ನಲ್ಲಿ ಇರಾನಿ ಟ್ರೋಫಿಯನ್ನು ಸಹ ಗೆದ್ದಿತು. ಇದೀಗ ಕಳೆದ ಸೀಸನ್ನಲ್ಲಿ ಯಶಸ್ವಿ ನಾಯಕ ಮುಂಬರುವ ಸೀಸನ್ನಲ್ಲಿ ಕೇವಲ ಬ್ಯಾಟರ್ ಆಗಿ ಕಣಕ್ಕಿಳಿಯಲು ನಿರ್ಧರಿಸಿದ್ದಾರೆ. ಮುಂಬೈ ತಂಡವು ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ಯಶಸ್ವಿ ಜೈಸ್ವಾಲ್ ಮತ್ತು ಸರ್ಫರಾಝ್ ಖಾನ್ ಅವರಂತಹ ಅನುಭವಿ ಆಟಗಾರರನ್ನು ಹೊಂದಿದೆ. ಜೈಸ್ವಾಲ್ ಮತ್ತು ಸರ್ಫರಾಜ್ ಹೊರತುಪಡಿಸಿ, ಉಳಿದವರ ನಾಯಕತ್ವವು ಶ್ಲಾಘನೀಯ. ಅದರಲ್ಲೂ ಅಯ್ಯರ್ ಮೂರು ಐಪಿಎಲ್ ಫ್ರಾಂಚೈಸಿಗಳನ್ನು ಮುನ್ನಡೆಸಿದ್ದಾರೆ. ಇದೀಗ ರಹಾನೆ ನಾಯಕತ್ವದಿಂದ ಕೆಳಗಿಳಿದಿದ್ದು, ಮುಂಬೈ ತಂಡದ ನಾಯಕ ಯಾರು ಅನ್ನೋ ಕುತೂಹಲ ಗರಿಗೆದರಿದೆ.

ನೋಡಿರಿ

