ಪ್ರಸಿದ್ಧ್ ಕೃಷ್ಣ ಆಟಕ್ಕುಂಟು ಲೆಕ್ಕಕ್ಕಿಲ್ಲ – ಏಷ್ಯಾಕಪ್ ನಲ್ಲಿ ಕನ್ನಡಿಗರಿಗೆ ಸಿಗಲಿಲ್ಲ ಚಾನ್ಸ್!

ಭಾರತದ ಟಿ20 ಅಂತಾರಾಷ್ಟ್ರೀಯ ತಂಡದಲ್ಲಿ ಒಂದು ಕಾಲದಲ್ಲಿ ಕೆಎಲ್ ರಾಹುಲ್ ಮೊದಲ ಆಯ್ಕೆಯ ಆಟಗಾರ. ಟೀಂ ಇಂಡಿಯಾ ಪಾಲಿಗಂತೂ ಆಲ್ ಫಾರ್ಮೆಟ್ ಪ್ಲೇಯರ್. ಆದ್ರೆ ಟಿ20 ತಂಡದಿಂದ ದೂರವಾಗಿ ವರ್ಷಗಳೇ ಉರುಳುತ್ತಿವೆ. ಏಷ್ಯಾಕಪ್ ಮೂಲಕ ಕಮ್ ಬ್ಯಾಕ್ ಮಾಡೋ ಕನಸು ಕಾಣ್ತಿದ್ರು. ಬಟ್ ಬಿಸಿಸಿಐ ಕೊನೆಗೂ ಚಾನ್ಸ್ ಕೊಡ್ಲೇ ಇಲ್ಲ. 2022 ನವೆಂಬರ್ 10. ಅಡಿಲೇಡ್ನಲ್ಲಿ ಇಂಗ್ಲೆಂಡ್ ಎದುರಿನ ಟಿ20 ವಿಶ್ವಕಪ್ ಸೆಮಿಫೈನಲ್ ಪಂದ್ಯವಾಡಿದ್ದೇ ಕೊನೆ. 5 ಎಸೆತಗಳಲ್ಲಿ 5 ರನ್ ಗಳಿಸಿ ಔಟಾಗಿದ್ರು. ಈ ಬಳಿಕ ಟಿ20ಯಿಂದಲೇ ಹೊರಬಿದ್ದ ರಾಹುಲ್ಗೆ ಮತ್ತೆ ಟೀಮ್ ಇಂಡಿಯಾ ಟಿ20 ತಂಡದ ಡೋರ್ ಓಪನ್ ಆಗ್ಲೇ ಇಲ್ಲ. ಹಾಗಂತ ರಾಹುಲ್ ಟಿ-20 ಪಂದ್ಯಗಳಲ್ಲಿ ಡಲ್ ಆಗಿದ್ದಾರಾ ಅಂದ್ರೆ ಖಂಡಿತಾ ಇಲ್ಲ. ಐಪಿಎಲ್ ನಲ್ಲಿ ಅದ್ಭುತ ಪ್ರದರ್ಶನವನ್ನೇ ನೀಡ್ತಿದ್ದಾರೆ.
ಇದನ್ನೂ ಓದಿ : ಭಾರತ ಮತ್ತು ಚೀನಾ ಮತ್ತೆ ದೋಸ್ತಿ – ಚೀನಾ ವಿದೇಶಾಂಗ ಸಚಿವ ವಾಂಗ್ ಯಿ ಭಾರತಕ್ಕೆ ಭೇಟಿ
2025ರ ಐಪಿಎಲ್ ಗೂ ಮುನ್ನ ಡೆಲ್ಲಿ ಕ್ಯಾಪಿಟಲ್ಸ್ ತಂಡ ರಾಹುಲ್ ಅವ್ರನ್ನ 14 ಕೋಟಿ ರೂಪಾಯಿಗೆ ಖರೀದಿ ಮಾಡಿತ್ತು. ಡೆಲ್ಲಿ ಪರ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದ್ದ ರಾಹುಲ್ 539 ರನ್ ಗಳಿಸಿದರು. ಇಲ್ಲಿಯವರೆಗಿನ ಐಪಿಎಲ್ ವೃತ್ತಿಜೀವನದಲ್ಲಿ, ರಾಹುಲ್ 145 ಪಂದ್ಯಗಳನ್ನು ಆಡಿದ್ದಾರೆ, 46.21 ಸರಾಸರಿ ಮತ್ತು 136.02 ಸ್ಟ್ರೈಕ್ ರೇಟ್ನಲ್ಲಿ 5,222 ರನ್ ಗಳಿಸಿದ್ದಾರೆ. 452 ಬೌಂಡರಿಗಳು ಮತ್ತು 208 ಸಿಕ್ಸರ್ಗಳು ಸೇರಿವೆ. 40 ಅರ್ಧಶತಕಗಳು ಮತ್ತು 5 ಶತಕಗಳನ್ನು ದಾಖಲಿಸಿದ್ದಾರೆ. ಈ ಪೈಕಿ 132 ರನ್ ಗಳಿಸಿ ನಾಟೌಟ್ ಆಗಿ ಉಳಿದಿರೋದೇ ಅತ್ಯದಿಕ ಸ್ಕೋರ್ ಆಗಿದೆ. ಅಲ್ದೇ ಕೇವಲ 14 ಎಸೆತಗಳಲ್ಲಿ ಜಂಟಿ-ಎರಡನೇ ವೇಗದ ಐಪಿಎಲ್ ಅರ್ಧಶತಕದ ದಾಖಲೆಯೂ ಇವ್ರ ಹೆಸರಲ್ಲೇ ಇದೆ. ಹೀಗಿದ್ರೂ ಟಿ-20 ಮಾದರಿಯಲ್ಲಿ ಟಾಪ್ ಆರ್ಡರ್ ಬ್ಯಾಟರ್ಸ್ ಆಪ್ಶನ್ಸ್ ಜಾಸ್ತಿ ಇರೋದ್ರಿಂದ ರಾಹುಲ್ರನ್ನ ತಂಡದಿಂದ ಕೈಬಿಡಲಾಗ್ತಿದೆ. ಇನ್ನು ಭಾರತದ ಪರ 72 ಟಿ20ಐ ಪಂದ್ಯಗಳನ್ನ ಆಡಿದ್ದು 2,265 ರನ್ ಕಲೆ ಹಾಕಿದ್ದಾರೆ. 22 ಅರ್ಧಶತಕಗಳು, 2 ಶತಕಗಳು ಸೇರಿದ್ರೆ ಅತ್ಯಧಿಕ ಸ್ಕೋರ್ 110 ರನ್ ಗಳಿಸಿ ಅಜೇಯರಾಗಿ ಉಳಿದಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಕರ್ನಾಟಕದಿಂದ ಮೂವರು ಪ್ಲೇಯರ್ಸ್ ಸೆಲೆಕ್ಟ್ ಆಗಿದ್ರು. ಕರುಣ್ ನಾಯರ್, ಕೆಎಲ್ ರಾಹುಲ್ ಹಾಗೇ ಪ್ರಸಿದ್ಧ್ ಕೃಷ್ಣ ಪ್ಲೇಯಿಂಗ್ 11ನಲ್ಲೂ ಕಣಕ್ಕಿಳಿದಿದ್ರು. ಆದ್ರೆ ಏಷ್ಯಾಕಪ್ ಟೂರ್ನಿಗೆ ಬಿಸಿಸಿಐ ಅನೌನ್ಸ್ ಮಾಡಿರೋ ಅಧಿಕೃತ ತಂಡದಲ್ಲಿ ಯಾರೊಬ್ರೂ ಚಾನ್ಸ್ ಪಡೆದಿಲ್ಲ. ರಿಸರ್ವ್ ಪ್ಲೇಯರ್ಸ್ ಲಿಸ್ಟ್ ನಲ್ಲಿ ಪ್ರಸಿದ್ಧ್ ಕೃಷ್ಣ ಸೆಲೆಕ್ಟ್ ಆಗಿದ್ದಾರೆ ಅಂದ್ರೂ ಕೂಡ ಅವ್ರು ಪ್ಲೇಯಿಂಗ್ 11 ನಲ್ಲಿ ಆಡೋದು ಕಷ್ಟ. ಯಾಕಂದ್ರೆ ಇವ್ರೊಂಥರಾ ಬ್ಯಾಕಪ್ ಪ್ಲೇಯರ್ ಅಷ್ಟೇ. ತಂಡಕ್ಕೆ ಸೆಲೆಕ್ಟ್ ಆಗಿರುವ ಅಧಿಕೃತ 15 ಆಟಗಾರರ ಪೈಕಿ ಪೇಸ್ ಬೌಲಿಂಗ್ ವಿಭಾಗದಲ್ಲಿ ಯಾರಾದ್ರೂ ಇಂಜುರಿ ಆದ್ರೆ ತಂಡವನ್ನ ಸೇರಬಹುದು. ಹಂಗಂತ ಪ್ಲೇಯಿಂಗ್ 11ನಲ್ಲಿ ಆಡೋಕೆ ಚಾನ್ಸ್ ಸಿಗೋದು ಕಷ್ಟ. ಯಾಕಂದ್ರೆ ಜಸ್ಪ್ರೀತ್ ಬುಮ್ರಾ, ಹರ್ಷಿತ್ ರಾಣಾ ಮತ್ತು ಅರ್ಷದೀಪ್ ಸಿಂಗ್ ಈ ಮೂವರು ವೇಗಿಗಳು ಇರೋದ್ರಿಂದ ಇವ್ರಲ್ಲೇ ಯಾರಿಗಾದ್ರೂ ಅವಕಾಶ ಸಿಗುತ್ತೆ. ಪ್ರಸಿದ್ಧ್ ಒಂಥರಾ ಆಟಕ್ಕುಂಟು ಲೆಕ್ಕಕ್ಕಿಲ್ಲ ಅನ್ನೋ ಹಾಗೇ ಅಷ್ಟೇ.
ಇನ್ನು ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಯಲ್ಲಿ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದ ಕರುಣ್ ನಾಯರ್ ಗೂ ಚಾನ್ಸ್ ಸಿಕ್ಕಿಲ್ಲ. ಹಾಗೇ ಆರ್ಸಿಬಿ ಪರ ಆರಂಭದ ಪಂದ್ಯಗಳಲ್ಲಿ ಸ್ಥಿರ ಪ್ರದರ್ಶನ ನೀಡಿದ್ದ ದೇವದತ್ ಪಡಿಕ್ಕಲ್ ಕೂಡ ಟಿ-20 ತಂಡಕ್ಕೆ ಕಮ್ ಬ್ಯಾಕ್ ಮಾಡೋ ಕನಸಿನಲ್ಲಿದ್ರು. ಬಟ್ ಅದು ಕೂಡ ನಿಜವಾಗ್ಲಿಲ್ಲ. ಒಟ್ನಲ್ಲಿ ಕಳೆದ ಸರಣಿಯಲ್ಲಿ ಕನ್ನಡದ ಮೂವರು ಆಟಗಾರರನ್ನ ಒಟ್ಟೊಟ್ಟಿಗೆ ನೋಡಿದ್ದ ಕನ್ನಡಿಗರು ಈ ಸಲ ನಿರಾಸೆಗೊಂಡಿದ್ದಾರೆ.

ನೋಡಿರಿ

