ಶ್ರೀಕೃಷ್ಣ ಜನ್ಮಾಷ್ಟಮಿ ಪೂಜೆ ಮಾಡುವುದು ಹೇಗೆ.? – ಶುಭ ಮುಹೂರ್ತ ಯಾವುದು ಗೊತ್ತಾ?

ಇಂದು ಎಲ್ಲೆಡೆ ಕೃಷ್ಣ ಜನ್ಮಾಷ್ಟಮಿ ಸಂಭ್ರಮ ಮನೆ ಮಾಡಿದೆ. ಕೃಷ್ಣ ಜನ್ಮಾಷ್ಟಮಿ ದಿನವಾದ ಇಂದು ಕೃಷ್ಣನ ಬಾಲ ರೂಪವನ್ನು ಪೂಜಿಸುವ ಸಂಪ್ರದಾಯವಿದೆ. ಶ್ರೀಕೃಷ್ಣನು ವಿಷ್ಣು ದೇವನ 8ನೇ ಅವತಾರವಾಗಿದ್ದು, ವಿಷ್ಣು ದೇವನು ಈ ಕೃಷ್ಣನ ಅವತಾರದಲ್ಲಿ ಶ್ರಾವಣ ಮಾಸದ ಕೃಷ್ಣ ಪಕ್ಷದ ಅಷ್ಟಮಿ ತಿಥಿಯಂದು ಭೂಮಿಯಲ್ಲಿ ಜನಿಸಿದರು ಎಂದು ಹೇಳಲಾಗುತ್ತದೆ. ಈ ದಿನವನ್ನೇ ನಾವು ಶ್ರೀಕೃಷ್ಣ ಜನ್ಮಾಷ್ಟಮಿ ಎಂದು ಆಚರಿಸುತ್ತೇವೆ. ಶ್ರೀಕೃಷ್ಣ ಜನ್ಮಾಷ್ಟಮಿ ದಿನದಂದು ಕೃಷ್ಣನನ್ನು ಪೂಜಿಸುವುದರ ಜೊತೆಗೆ ಆತನ ಭಜನೆಗಳನ್ನು, ಮಂತ್ರಗಳನ್ನು ಪಠಿಸುವ ಸಂಪ್ರದಾಯವಿದೆ. ಅದರಲ್ಲೂ ಕೃಷ್ಣ ಜನ್ಮಾಷ್ಟಮಿ ದಿನದಂದು ಮಧ್ಯಾರಾತ್ರಿ ಸಮಯದಲ್ಲಿ ಮಾಡುವ ಪೂಜೆಯು ಹೆಚ್ಚು ಶ್ರೇಷ್ಠವೆನಿಸಿಕೊಂಡಿದೆ.
ಕೃಷ್ಣ ಜನ್ಮಾಷ್ಟಮಿಯು ತನ್ನ ದುಷ್ಟತನದ ಪ್ರತೀಕವಾದ ಚಿಕ್ಕಪ್ಪ ಕಂಸನ ಆಳ್ವಿಕೆಯನ್ನು ಕೊನೆಗೊಳಿಸಲು ಮತ್ತು ಜಗತ್ತಿನಲ್ಲಿ ಧರ್ಮದ ಸಮತೋಲನವನ್ನು ಪುನಃಸ್ಥಾಪಿಸಲು ಜನಿಸಿದ ಶ್ರೀಕೃಷ್ಣನ ದೈವಿಕ ಜನನದ ದಿನವನ್ನು ಸಂಕೇತಿಸುತ್ತದೆ. ಈ ದಿನವನ್ನು ಕೆಡುಕಿನ ಮೇಲೆ ಒಳಿತನ ವಿಜಯವೆಂದು, ಬ್ರಹ್ಮಾಂಡದಲ್ಲಿ ದುಷ್ಟತನವನ್ನು ನಾಶ ಮಾಡಿ ಒಳಿತನ್ನು ಪುನಃ ಸ್ಥಾಪಿಸುವ ದಿನವಾಗಿದೆ. ಈ ಶುಭ ದಿನದಂದು ಕೃಷ್ಣನನ್ನು ದೈವಿಕ ಸಂತೋಷ ಮತ್ತು ಪ್ರೀತಿಯ ಸಂಕೇತವೆಂದು ಪೂಜಿಸಲಾಗುತ್ತದೆ. ರಾಧೆಯೊಂದಿಗಿನ ಅವನ ಸಂಬಂಧವು ಭಕ್ತ ಮತ್ತು ದೇವರ ಆಧ್ಯಾತ್ಮಿಕ ಒಕ್ಕೂಟವನ್ನು ಸಂಕೇತಿಸುತ್ತದೆ. ಈ ಹಬ್ಬವು ಆಧ್ಯಾತ್ಮಿಕ ಪ್ರಯೋಜನವನ್ನು ಸಹ ಹೊಂದಿದೆ, ಏಕೆಂದರೆ ಈ ದಿನ ನಾವು ಮಾಡುವ ಪೂಜೆಯು ಮೋಕ್ಷವನ್ನು ನೀಡುತ್ತದೆ. ಜನ್ಮ ಜನ್ಮಗಳ ಪಾಪವನ್ನು ಶುದ್ಧೀಕರಿಸುತ್ತದೆ. ಭಕ್ತರಿಗೆ ಸಮೃದ್ಧಿ ಮತ್ತು ಶಾಂತಿಯನ್ನು ತರುತ್ತದೆ ಎನ್ನುವ ನಂಬಿಕೆಯಿದೆ. ಶ್ರೀಕೃಷ್ಣ ಜನ್ಮಾಷ್ಟಮಿ ದಿನದ ಪೂಜೆಯು ಮನೆಗೆ ಶಾಂತಿಯನ್ನು, ಸಮೃದ್ಧಿಯನ್ನು, ಸಂತಾನ ಭಾಗ್ಯವನ್ನು ಮತ್ತು ಉತ್ತಮ ಆರೋಗ್ಯವನ್ನು ತರುತ್ತದೆ ಎನ್ನುವ ನಂಬಿಕೆಯಿದೆ.
– ಕೃಷ್ಣನ ಭಕ್ತರು ಈ ಶುಭ ದಿನದಂದು ಅಚಲ ಭಕ್ತಿಯಿಂದ ಶ್ರೀಕೃಷ್ಣನನ್ನು ಪೂಜಿಸುತ್ತಾರೆ. ದಿನವಿಡೀ ಉಪವಾಸ ವ್ರತವನ್ನು ಕೂಡ ಆಚರಿಸುತ್ತಾರೆ.
– ಶ್ರೀಕೃಷ್ಣ ಜನ್ಮಾಷ್ಟಮಿ ದಿನದಂದು ಮುಂಜಾನೆ ಬೇಗ ಎದ್ದು ಶುದ್ಧರಾಗಿ ಶುದ್ಧವಾದ ಅಥವಾ ಹೊಸ ಬಟ್ಟೆಯನ್ನು ಧರಿಸಿ, ಮನೆಯನ್ನು ಹಾಗೂ ಪೂಜೆ ಮಾಡುವ ಸ್ಥಳವನ್ನು ಶುದ್ಧೀಕರಿಸಿ.
– ಶ್ರೀಕೃಷ್ಣನನ್ನು ಕೂರಿಸಿ ಪೂಜೆ ಮಾಡುವ ಸ್ಥಳವನ್ನು ಹೂವುಗಳು, ರಂಗೋಲಿಯಿಂದ ಅಲಂಕರಿಸಿ.
– ಬಾಲ ಕೃಷ್ಣನನ್ನು ಪೂಜಿಸುವುದಕ್ಕಾಗಿ ಸರ್ವಾಲಂಕಾರದಿಂದ ತೊಟ್ಟಿಲನ್ನು ಸಿದ್ಧಗೊಳಿಸಿ.
– ಪೂಜೆ ಮಾಡುವ ಸ್ಥಳದಲ್ಲಿ ಬಾಲ ಗೋಪಾಲನ ವಿಗ್ರಹ ಅಥವಾ ಫೋಟೋವನ್ನು ಪ್ರತಿಷ್ಠಾಪನೆ ಮಾಡಿ, ಅದಕ್ಕೆ ಹಾಲು, ಮೊಸರು, ತುಪ್ಪ, ಜೇನುತುಪ್ಪ ಮತ್ತು ಸಕ್ಕರೆಯನ್ನು ಬೆರೆಸಿ ತಯಾರಿಸಿದ ಪಂಚಾಮೃತದಿಂದ ಕೃಷ್ಣನಿಗೆ ಅಭಿಷೇಕವನ್ನು ಮಾಡಬೇಕು. ಕೃಷ್ಣನ ಫೋಟೋಗೆ ಪೂಜೆಯನ್ನು ಮಾಡುತ್ತಿದ್ದರೆ ಪಂಚಾಮೃತವನ್ನು ಫೋಟೋದ ಮೇಲೆ ಸಂಪಡಿಸಿ ಸಾಕು.
– ಈ ದಿನ ಹಿತ್ತಾಳೆಯ ಕೃಷ್ಣನ ವಿಗ್ರಹವನ್ನು ಪೂಜಿಸುವುದು ಒಳ್ಳೆಯದು.
– ಈ ದಿನ ಕೃಷ್ಣನ ವಿಗ್ರಹಕ್ಕೆ ಹಳದಿ, ಕೆಂಪು ಅಥವಾ ಗುಲಾಬಿ ಬಣ್ಣದ ಬಟ್ಟೆಯನ್ನು ತೊಡಿಸಿ, ಆಭರಣ ಮತ್ತು ಹೂವುಗಳಿಂದ ಅಲಂಕಾರ ಮಾಡಬೇಕು.
– ಶ್ರೀಕೃಷ್ಣ ಜನ್ಮಾಷ್ಟಮಿಯ ದಿನದಂದು ಕೃಷ್ಣನಿಗೆ ತುಳಸಿ ಎಲೆಗಳನ್ನು, ಬೆಣ್ಣೆಯನ್ನು, ಹಣ್ಣುಗಳನ್ನು, ಪಂಜಿರಿಯನ್ನು, ಲಡ್ಡುಗಳನ್ನು ಸೇರಿದಂತೆ ಇನ್ನಿತರ ಖಾದ್ಯವನ್ನು ನೈವೇದ್ಯವಾಗಿ ಅರ್ಪಿಸಬೇಕು.
– ಕೃಷ್ಣನಿಗೆ ನೈವೇದ್ಯವನ್ನು ಅರ್ಪಿಸಿದ ನಂತರ ಧೂಪ – ದೀಪವನ್ನು ಬೆಳಗಿಸಿ.
ಕೃಷ್ಣ ಜನ್ಮಾಷ್ಟಮಿ ದಿನದಂದು ಮಧ್ಯರಾತ್ರಿ ಸಮಯದಲ್ಲಿ ಕೃಷ್ಣನನ್ನು ಪೂಜಿಸಿ, ಕೃಷ್ಣನ ಭಜನೆಗಳನ್ನು, ಕೀರ್ತನೆಗಳನ್ನು ಹಾಡಬೇಕು.
– ಸರ್ವಾಲಂಕಾರ ಮಾಡಿದ ಕೃಷ್ಣನ ವಿಗ್ರಹವನ್ನು ಅಲಂಕರಿಸಿದ ತೊಟ್ಟಿಲಿನಲ್ಲಿ ಇಟ್ಟು ಮೆಲ್ಲಗೆ ತೂಗಬೇಕು.

ನೋಡಿರಿ

