ಜಮ್ಮು ಮತ್ತು ಕಾಶ್ಮೀರದ ಭೀಕರ ಮೇಘಸ್ಫೋಟಕ್ಕೆ 60 ಸಾ*ವು, ನೂರಾರು ಜನ ಮಿಸ್ಸಿಂಗ್ – ನಾಪತ್ತೆಯಾದವರಿಗೆ ಸರ್ಚಿಂಗ್

ಜಮ್ಮು ಮತ್ತು ಕಾಶ್ಮೀರದ ಭೀಕರ ಮೇಘಸ್ಫೋಟಕ್ಕೆ 60 ಸಾ*ವು, ನೂರಾರು ಜನ ಮಿಸ್ಸಿಂಗ್ – ನಾಪತ್ತೆಯಾದವರಿಗೆ ಸರ್ಚಿಂಗ್

 

ಜಮ್ಮು ಮತ್ತು ಕಾಶ್ಮೀರದ  ಕಿಶ್ತ್ವಾರ್ ಜಿಲ್ಲೆಯ ಚೋಸಿತಿ ಗ್ರಾಮದಲ್ಲಿ ಸಂಭವಿಸಿದ ಭಾರಿ ಮೇಘಸ್ಫೋಟ ಭೀಕರ ದುರಂತಕ್ಕೆ ಕಾರಣವಾಗಿದೆ. ಈ ಘಟನೆಯಲ್ಲಿ ಕನಿಷ್ಠ 60 ಜನರು ಸಾವನ್ನಪ್ಪಿದ್ದಾರೆ ಎಂದು ದೃಢಪಟ್ಟಿದ್ದು, ಇನ್ನೂ 69ಕ್ಕೂ ಹೆಚ್ಚು ಮಂದಿ ಕಾಣೆಯಾಗಿದ್ದಾರೆ ಎಂದು ವರದಿಯಾಗಿದೆ. ಸ್ಥಳದಲ್ಲಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆತೀವ್ರಗೊಂಡಿದ್ದು, ಗಾಯಗೊಂಡವರ ರಕ್ಷಣೆ ಕಾರ್ಯ ಮತ್ತು ಅವಶೇಷಗಳಡಿ ಸಿಲುಕಿರುವವರನ್ನು, ನಾಪತ್ತೆಯಾದವರ ಹುಡುಕಾಟದ ಕಾರ್ಯ ಮುಂದುವರೆದಿದೆ.

ವೈಟ್ ನೈಟ್ ಕಾರ್ಪ್ಸ್ 300 ಕ್ಕೂ ಹೆಚ್ಚು ಸೈನಿಕರನ್ನು ಪರಿಹಾರ ಮಳಿಗೆಗಳು ಮತ್ತು ವೈದ್ಯಕೀಯ ತಂಡಗಳೊಂದಿಗೆ ನಿಯೋಜಿಸಿದೆ. ಸ್ಥಳೀಯ ಆಡಳಿತವು ತಕ್ಷಣವೇ ಕಾರ್ಯಪ್ರವೃತ್ತವಾಗಿದ್ದು, ಗಾಯಗೊಂಡವರಿಗೆ ವೈದ್ಯಕೀಯ ನೆರವು, ಸ್ಥಳಾಂತರ, ಮತ್ತು ಸಾಮಾನ್ಯ ಸ್ಥಿತಿಯನ್ನು ಪುನಃಸ್ಥಾಪಿಸುವ ಕಾರ್ಯದಲ್ಲಿ ತೊಡಗಿದೆ.

ಈ ಮೇಘಸ್ಫೋಟವು ಕಿಶ್ತ್ವಾರ್ ಪಟ್ಟಣದಿಂದ ಸುಮಾರು 90 ಕಿಮೀ ದೂರದಲ್ಲಿರುವ ಚೋಸಿತಿಯಲ್ಲಿ ಸಂಭವಿಸಿದ್ದು, ಈ ಸಂದರ್ಭದಲ್ಲಿ ವಾರ್ಷಿಕ ಮಚೈಲ್ ಮಾತಾ ಯಾತ್ರೆಗೆ ಜಮಾಯಿಸಿದ್ದ ಭಕ್ತರ ಸಂಖ್ಯೆ ಹೆಚ್ಚಿತ್ತು. ಯಾತ್ರಿಕರಿಗಾಗಿ ಸ್ಥಾಪಿಸಲಾಗಿದ್ದ ಸಮುದಾಯ ಅಡುಗೆಮನೆ (ಲಂಗರ್), ಅಂಗಡಿಗಳು, ಭದ್ರತಾ ಪೋಸ್ಟ್‌ಗಳು ಮತ್ತು ವಾಹನಗಳು ಹಠಾತ್ ಪ್ರವಾಹಕ್ಕೆ ಕೊಚ್ಚಿಹೋಗಿವೆ. ಹಿಮಾಲಯದ ಮಚೈಲ್ ಮಾತಾ ದೇವಸ್ಥಾನಕ್ಕೆ ಪಾದಯಾತ್ರೆಯ ಆರಂಭಿಕ ಹಂತವಾದ ಬಸ್ ನಿಲ್ದಾಣದಲ್ಲಿ ಅನೇಕ ವಾಹನಗಳು ಪ್ರವಾಹದ ನೀರು ಮತ್ತು ಮಣ್ಣಿನಿಂದ ತೀವ್ರವಾಗಿ ಹಾನಿಗೊಳಗಾಗಿವೆ. ಈ ಮೇಘಸ್ಫೋಟದಿಂದ ಕನಿಷ್ಠ 16 ಮನೆಗಳು, ಮೂರು ದೇವಾಲಯಗಳು, ನಾಲ್ಕು ನೀರಿನ ಗಿರಣಿಗಳು, 30 ಮೀಟರ್ ಸೇತುವೆ, ಮತ್ತು ಒಂದು ಡಜನ್‌ಗೂ ಹೆಚ್ಚು ವಾಹನಗಳು ಈ ದುರಂತದಲ್ಲಿ ಹಾನಿಗೊಳಗಾಗಿವೆ.

ಜಿಲ್ಲಾಡಳಿತವು ತಕ್ಷಣವೇ ರಕ್ಷಣಾ ಕಾರ್ಯಾಚರಣೆಗೆ ಆದೇಶಿಸಿತು. ದೈತ್ಯ ಬಂಡೆಗಳು, ಬೇರುಸಹಿತ ಉರುಳಿದ ಮರಗಳು, ಮತ್ತು ವಿದ್ಯುತ್ ಕಂಬಗಳನ್ನು ತೆರವುಗೊಳಿಸಲು ಮಣ್ಣು ತೆಗೆಯುವ ಯಂತ್ರಗಳನ್ನು ನಿಯೋಜಿಸಲಾಗಿದೆ. ಗಾಯಗೊಂಡ 167 ಜನರನ್ನು ರಕ್ಷಿಸಲಾಗಿದ್ದು, ಕಾಣೆಯಾದ 69 ಜನರಿಗಾಗಿ ಶೋಧ ಕಾರ್ಯ ಮುಂದುವರೆದಿದೆ. ಜಮ್ಮು ಮತ್ತು ಕಾಶ್ಮೀರ ಆಡಳಿತವು ಸಂಕಷ್ಟದಲ್ಲಿರುವ ಜನರಿಗೆ ಸಹಾಯ ಮಾಡಲು ನಿಯಂತ್ರಣ ಕೊಠಡಿ-ಕಮ್-ಸಹಾಯ ಕೇಂದ್ರವನ್ನು ಸ್ಥಾಪಿಸಿದ್ದು, ನೂರಾರು ಕರೆಗಳು ಈ ಕೇಂದ್ರಕ್ಕೆ ಬಂದಿವೆ.

ಪೊಲೀಸ್ ವರದಿಗಳ ಪ್ರಕಾರ, ಮೇಘಸ್ಫೋಟದ ಸ್ಥಳದಿಂದ ಹೊರತೆಗೆಯಲಾದ 60 ಶವಗಳಲ್ಲಿ 21 ಶವಗಳನ್ನು ಗುರುತಿಸಲಾಗಿದೆ. ಸಂತ್ರಸ್ತರ ಕುಟುಂಬಗಳೊಂದಿಗೆ ವಾಟ್ಸಾಪ್ ಗುಂಪಿನ ಮೂಲಕ ಮೃತರ ಚಿತ್ರಗಳನ್ನು ಹಂಚಿಕೊಂಡು ಗುರುತಿಸುವ ಪ್ರಕ್ರಿಯೆ ನಡೆಯುತ್ತಿದೆ. ಉಳಿದ ಶವಗಳ ಗುರುತು ಪತ್ತೆಗೆ ಶ್ರಮಿಸಲಾಗುತ್ತಿದೆ. ಪಿಜಿಐ ಚಂಡೀಗಢದ ತಜ್ಞ ವೈದ್ಯರ ತಂಡವು ಜಮ್ಮುವಿನ ಸರ್ಕಾರಿ ವೈದ್ಯಕೀಯ ಕಾಲೇಜಿಗೆ ತಲುಪಿ, ವೈದ್ಯಕೀಯ ಆರೈಕೆಯನ್ನು ಒದಗಿಸುತ್ತಿದೆ.

ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಈ ದುರಂತದಲ್ಲಿ ಸಾವನ್ನಪ್ಪಿದವರ ಕುಟುಂಬಗಳಿಗೆ ಸಂತಾಪ ಸೂಚಿಸಿದ್ದಾರೆ. “ಹವಾಮಾನ ಮುನ್ಸೂಚನೆಯ ಬಗ್ಗೆ ನಮಗೆ ಈಗಾಗಲೇ ತಿಳಿದಿತ್ತು, ಆದರೆ ಆಡಳಿತದ ಕಡೆಯಿಂದ ಯಾವುದೇ ಲೋಪವಾಗಿದೆಯೇ ಎಂದು ಖಚಿತಪಡಿಸಿಕೊಳ್ಳಬೇಕು,” ಎಂದು ಅವರು ಹೇಳಿದ್ದಾರೆ. ಈ ಘಟನೆಯಲ್ಲಿ ಇಬ್ಬರು ಸಿಐಎಸ್‌ಎಫ್ ಸಿಬ್ಬಂದಿ ಸೇರಿದಂತೆ 60 ಜನರು ಸಾವನ್ನಪ್ಪಿದ್ದಾರೆ ಎಂದು ಅವರು ದೃಢಪಡಿಸಿದ್ದಾರೆ. ಕಿಶ್ತ್ವಾರ್‌ನ ಚೋಸಿತಿಯಲ್ಲಿ ಸಂಭವಿಸಿದ ಈ ದುರಂತವು ಜಮ್ಮು ಮತ್ತು ಕಾಶ್ಮೀರದಲ್ಲಿ ಇತ್ತೀಚಿನ ವರ್ಷಗಳಲ್ಲಿ ಸಂಭವಿಸಿದ ಅತ್ಯಂತ ಭೀಕರ ಮೇಘಸ್ಫೋಟಗಳಲ್ಲಿ ಒಂದಾಗಿದೆ. ಆಡಳಿತ, ಸೈನ್ಯ, ಮತ್ತು ವೈದ್ಯಕೀಯ ತಂಡಗಳ ಸಂಯೋಜಿತ ಪ್ರಯತ್ನದಿಂದ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದ್ದು, ಈ ದುರಂತದಿಂದ ತತ್ತರಿಸಿರುವ ಜನರಿಗೆ ಆಶಾಕಿರಣವನ್ನು ತಂದಿದೆ.

Kishor KV