ಇಂಡಿಯಾ-ಪಾಕ್ ಪಂದ್ಯ ನಡೆಯುತ್ತಾ – 2ನೇ ಆವೃತ್ತಿ ಏಷ್ಯಾಕಪ್ ಬಹಿಷ್ಕರಿಸಿದ್ದೇಕೆ ಭಾರತ?

ಏಷ್ಯನ್ ರಾಷ್ಟ್ರಗಳ ಪ್ರತಿಷ್ಠಿತ ಫೈಟ್ ಆಗಿರುವ ಏಷ್ಯಾಕಪ್ ಟೂರ್ನಿಗೆ ಮೂರು ವಾರಗಳಷ್ಟೇ ಬಾಕಿ ಇದೆ. 8 ತಂಡಗಳು ಭಾಗಿಯಾಗಲಿರೋ ಈ ಪಂದ್ಯಾವಳಿಗೆ ಆಟಗಾರರ ಸೆಲೆಕ್ಷನ್ ಜೋರಾಗೇ ನಡೀತಿದೆ. ಟೀಂ ಇಂಡಿಯಾ ಕೂಡ ಇದಕ್ಕೆ ಹೊರತಾಗಿಲ್ಲ. ಅಸಲಿಗೆ ಈ ಟೂರ್ನಿಗೆ ಭಾರತವೇ ಆತಿಥ್ಯ ವಹಿಸಬೇಕಿತ್ತು. ಆದ್ರೆ ಪಾಕಿಸ್ತಾನ ಹೈಬ್ರಿಡ್ ಮಾದರಿಯಲ್ಲಿ ಪಂದ್ಯಗಳ ಆಯೋಜನೆಗೆ ಒತ್ತಾಯಿಸಿದ್ದರಿಂದ ಯುಎಇಗೆ ಶಿಫ್ಟ್ ಮಾಡಲಾಗಿದೆ. ಸೆಪ್ಟೆಂಬರ್ 9 ರಿಂದ 28 ರವರೆಗೆ ಯುಎಇಯಲ್ಲಿ ಟೂರ್ನಿ ನಡೆಯಲಿದೆ .
ಇದನ್ನೂ ಓದಿ : ಕ್ರಿಕೆಟ್ ಮರೆತ PAK ಪ್ಲೇಯರ್ಸ್ – 295 ಟಾರ್ಗೆಟ್.. 92 ರನ್ ಗೆ ಆಲೌಟ್!
2026 ರ ಟಿ20 ವಿಶ್ವಕಪ್‌ಗೆ ಸಿದ್ಧತೆ ಭಾಗವಾಗಿ 2025 ರ ಏಷ್ಯಾಕಪ್ ಅನ್ನು ಟಿ20 ಸ್ವರೂಪದಲ್ಲಿ ಆಡಿಸಲಾಗ್ತಿದೆ. ಈ ಬಾರಿ ಎಂಟು ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸುತ್ತಿವೆ. ಭಾರತ ಮತ್ತು ಪಾಕಿಸ್ತಾನ ಯುಎಇ ಮತ್ತು ಒಮಾನ್ ಜೊತೆಗೆ ಗ್ರೂಪ್ ಎ ನಲ್ಲಿದ್ದರೆ, ಗ್ರೂಪ್ ಬಿಯಲ್ಲಿ ಶ್ರೀಲಂಕಾ, ಬಾಂಗ್ಲಾದೇಶ, ಅಫ್ಘಾನಿಸ್ತಾನ ಮತ್ತು ಹಾಂಗ್ ಕಾಂಗ್ ತಂಡಗಳಿವೆ. ಭಾರತ ಮತ್ತು ಪಾಕಿಸ್ತಾನ ತಂಡಗಳು ಸೂಪರ್ ಫೋರ್ ಮತ್ತು ಫೈನಲ್ ತಲುಪಿದರೆ ಒಟ್ಟಾರೆಯಾಗಿ ಮೂರು ಬಾರಿ ಮುಖಾಮುಖಿಯಾಗುವ ಸಾಧ್ಯತೆ ಇರುತ್ತೆ. ಭಾರತವು ಸೆಪ್ಟೆಂಬರ್ 10 ರಂದು ಯುಎಇ ವಿರುದ್ಧ ತನ್ನ ಮೊದಲ ಪಂದ್ಯವನ್ನು ಆಡಲಿದೆ. ಆ ನಂತರ ಸೆಪ್ಟೆಂಬರ್ 14 ರಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಎದುರಿಸಲಿದೆ. ಆದ್ರೆ ಇದೇ ಪಂದ್ಯವನ್ನ ಭಾರತ ಬಹಿಷ್ಕರಿಸುವಂತೆ ಒತ್ತಾಯ ಕೇಳಿ ಬರ್ತಿದೆ. ಇತ್ತೀಚೆಗೆ ಮುಕ್ತಾಯಗೊಂಡ ವಿಶ್ವ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್‌ನಲ್ಲೂ ಉಭಯ ತಂಡಗಳ ಪಂದ್ಯ ನಡೆಯಲಿಲ್ಲ. ಭಾರತ ತಂಡದ ಆಟಗಾರರು ಪಾಕ್ ವಿರುದ್ಧದ ಪಂದ್ಯವನ್ನು ಆಡಲು ನಿರಾಕರಿಸಿ ಟೂರ್ನಿಯಿಂದ ಹೆಸರನ್ನು ಹಿಂತೆಗೆದುಕೊಂಡರು.
ಭಾರತ ಹಿಂದೊಮ್ಮೆ ಏಷ್ಯಾಕಪ್ ಬಹಿಷ್ಕರಿಸಿತ್ತು. 1986 ರ ಏಷ್ಯಾಕಪ್‌ನಲ್ಲಿ ಮೆನ್ ಇನ್ ಬ್ಲೂ ತಂಡವು ಕಾಂಟಿನೆಂಟಲ್ ಟೂರ್ನಮೆಂಟ್ ಅನ್ನು ತಪ್ಪಿಸಿಕೊಂಡಿತ್ತು. 1984 ರ ಉದ್ಘಾಟನಾ ಆವೃತ್ತಿಯಲ್ಲಿ ಟ್ರೋಫಿಯನ್ನು ಗೆದ್ದು ಚಾಂಪಿಯನ್ ಆಗಿತ್ತು. ಆದ್ರೆ 1986 ರಲ್ಲಿ ನಡೆದ ಏಷ್ಯಾಕಪ್‌ನ ಎರಡನೇ ಆವೃತ್ತಿಯಲ್ಲಿ ಭಾರತ ಭಾಗವಹಿಸಲಿಲ್ಲ. ಏಕೆಂದರೆ ಆ ಸೀಸನ್ ಏಷ್ಯಾಕಪ್ ಶ್ರೀಲಂಕಾದಲ್ಲಿ ನಡೆಯಬೇಕಿತ್ತು. ಆ ಸಮಯದಲ್ಲಿ ಭಾರತ ಮತ್ತು ಶ್ರೀಲಂಕಾ ನಡುವೆ ಸಾಕಷ್ಟು ಬಿಕ್ಕಟ್ಟುಗಳಿದ್ವು. ಹೀಗಾಗಿ ಭಾರತ ಏಷ್ಯಾಕಪ್‌ನಲ್ಲಿ ಆಡಲು ನಿರಾಕರಿಸಿ ಏಷ್ಯಾಕಪ್ ಅನ್ನು ಬಹಿಷ್ಕರಿಸಿತು. ಭಾರತೀಯ ಆಟಗಾರರ ಭದ್ರತೆಯನ್ನು ಗಮನದಲ್ಲಿಟ್ಟುಕೊಂಡು ಶ್ರೀಲಂಕಾ ಪ್ರವಾಸಕ್ಕೆ ತಂಡವನ್ನು ಕಳುಹಿಸಲು ಭಾರತೀಯ ಕ್ರಿಕೆಟ್ ಮಂಡಳಿ ನಿರಾಕರಿಸಿತು. ಭಾರತ ಏಷ್ಯಾಕಪ್‌ನಿಂದ ಹಿಂದೆ ಸರಿದಾಗ, ನೆರೆಯ ಬಾಂಗ್ಲಾದೇಶಕ್ಕೆ ಟೂರ್ನಿಯಲ್ಲಿ ಪದಾರ್ಪಣೆ ಮಾಡುವ ಅವಕಾಶ ಸಿಕ್ಕಿತು. ಅಂತಿಮವಾಗಿ ಶ್ರೀಲಂಕಾ ಪಾಕ್ ವಿರುದ್ಧ ಗೆದ್ದು ಚಾಂಪಿಯನ್ ಆಗಿತ್ತು.
ಇನ್ನು ಪಾಕಿಸ್ತಾನ ಕೂಡ ಒಂದ್ಸಲ ಟೂರ್ನಿಯಿಂದ ಹಿಂದೆ ಸರಿದಿತ್ತು. 1990ರ ಏಷ್ಯಾಕಪ್‌ನಲ್ಲಿ ಪಾಕಿಸ್ತಾನ ಭಾಗವಹಿಸಿರಲಿಲ್ಲ. 1990-91ರ ಏಷ್ಯಾಕಪ್ ಡಿಸೆಂಬರ್ 25, 1990 ರಿಂದ ಜನವರಿ 4, 1991 ರವರೆಗೆ ಭಾರತದಲ್ಲಿ ನಡೆಯಿತು. ಇದರಲ್ಲಿ ಭಾರತ, ಶ್ರೀಲಂಕಾ ಮತ್ತು ಬಾಂಗ್ಲಾದೇಶ ಭಾಗವಹಿಸಿದ್ದವು, ಪಾಕಿಸ್ತಾನ ರಾಜಕೀಯ ಕಾರಣಗಳಿಂದಾಗಿ ಭಾಗವಹಿಸಲಿಲ್ಲ. ಭಾರತ ಮತ್ತು ಶ್ರೀಲಂಕಾ ಫೈನಲ್‌ನಲ್ಲಿ ಸೆಣಸಾಡಿದರು, ಭಾರತ 7 ವಿಕೆಟ್‌ಗಳಿಂದ ಗೆದ್ದು ಚಾಂಪಿಯನ್ ಆಯಿತು.
ಸದ್ಯ ಈ ಬಾರಿ ಪೆಹಲ್ಗಾಮ್ ದಾಳಿಯಿಂದಾಗಿ ಉಭಯ ರಾಷ್ಟ್ರಗಳ ನಡುವಿನ ಭೌಗೋಳಿಕ ರಾಜಕೀಯ ಸಂಘರ್ಷ ಹೆಚ್ಚಾಗಿದೆ. ಆದ್ರೆ ಅದನ್ನ ಕ್ರೀಡೆಗೆ ವಿಸ್ತರಿಸೋದು ಡೌಟ್ ಇದೆ. ಅಂದ್ರೆ ಪಾಕಿಸ್ತಾನ ವಿರುದ್ಧದ ಏಷ್ಯಾ ಕಪ್ ಮುಖಾಮುಖಿಯಿಂದ ಬಿಸಿಸಿಐ ಹಿಂದೆ ಸರಿಯಲ್ಲ. ಚಾಂಪಿಯನ್ಸ್ ಲೀಗ್ ಖಾಸಗಿ ಲೀಗ್ ಆಗಿದ್ದು ಅಲ್ಲಿ ಆಟಗಾರರು ಸ್ವಯಂ ನಿರ್ಧಾರ ತೆಗೆದುಕೊಳ್ಳಬಹುದು. ಆದ್ರೆ ಏಷ್ಯಾಕಪ್ ಟೂರ್ನಿಯಲ್ಲಿ ಆಟಗಾರರು ಆಡ್ಬೇಕಾ ಬೇಡ್ವಾ ಅನ್ನೋದನ್ನ ಬಿಸಿಸಿಐ ನಿರ್ಧಾರ ಮಾಡ್ಬೇಕಾಗತ್ತೆ. ಈಗಾಗ್ಲೇ ಪಾಕ್ ವಿರುದ್ಧ ಪಂದ್ಯಗಳನ್ನ ಆಡೋಕೆ ಪರ್ಮಿಷನ್ ಪಡೆದಿದೆ. ಹೀಗಾಗಿ ಏಷ್ಯಾಕಪ್‌ನಲ್ಲಿ ಪಾಕಿಸ್ತಾನದ ವಿರುದ್ಧ ಕಣಕ್ಕಿಳಿಯೋದು ಪಕ್ಕಾ.

ನೋಡಿರಿ

