ಕಾರವಾರ ಕೈ ಶಾಸಕ ಸತೀಶ್ ಸೈಲ್ಗೆ ED ಶಾಕ್ – 6 ಅಧಿಕಾರಿಗಳ ತಂಡದಿಂದ ಮನೆಯಲ್ಲಿ ಶೋಧ

ಕಾರವಾರ ತಾಲೂಕಿನ ಚಿತ್ತಾಕುಲದಲ್ಲಿರುವ ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಮನೆ ಮೇಲೆ ಇ.ಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.ಇಡಿ ಅಧಿಕಾರಿ ಕೇಶವ್ ನೇತೃತ್ವದಲ್ಲಿ 12 ಪ್ಯಾರಾ ಮಿಲಿಟರಿ ಶಸಸ್ತ್ರ ತಂಡದೊಂದಿಗೆ ಸುಮಾರು 6 ಅಧಿಕಾರಿಗಳ ತಂಡ ದಾಳಿ ಮಾಡಿದೆ. ಈ ವೇಳೆ ಶಾಸಕರಾಗಲಿ ಅಥವಾ ಅವರ ಕುಟುಂಬದವರಾಗಲಿ ಮನೆಯಲ್ಲಿ ಇರಲಿಲ್ಲ. ಹೀಗಾಗಿ ಮನೆಯಲ್ಲಿ ಇರುವ ಕೆಲಸದವನನ್ನು ವಿಚಾರಣೆ ನಡೆಸುತಿದ್ದು, ಶಾಸಕರಿಗೂ ಬುಲಾವ್ ಹೋಗಿದೆ. ವಿಧಾನಸಭೆ ಅಧಿವೇಶನ ನಡೆಯುತ್ತಿರುವ ಕಾರಣ ಶಾಸಕ ಸೈಲ್ ಬೆಂಗಳೂರಿನಲ್ಲಿದ್ದಾರೆ.
ಇದನ್ನೂ ಓದಿ: ಶಬರಿಮಲೆ ಯಾತ್ರೆಗೆ ಶ್ರೀಲಂಕಾ ಸರ್ಕಾರದಿಂದಲೂ ಮಾನ್ಯತೆ!
ಮಲ್ಲಿಕಾರ್ಜುನ ಶಿಪ್ಪಿಂಗ್ ಕಂಪನಿ ಮೂಲಕ ಅದಿರು ಸಾಗಾಟ ನಡೆಸುತ್ತಿದ್ದ ಸತೀಶ್ ಸೈಲ್ ಈ ಹಿಂದೆ ಆಕ್ರಮ ಅದಿರು ಸಾಗಾಟ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸಿದ್ದರು. ಈ ಕುರಿತು ಈ ಹಿಂದೆ ಮಾಜಿ ಲೋಕಾಯುಕ್ತ ಸಂತೋಷ್ ಹೆಗಡೆ ತಂಡದಿಂದ ದೂರು ದಾಖಲಿಸಲಾಗಿತ್ತು. ಜನಪ್ರತಿನಿಧಿಗಳ ನ್ಯಾಯಾಲದಿಂದ ಜೈಲು ಶಿಕ್ಷೆ ವಿಧಿಸಲಾಗಿತ್ತು. ಹೈಕೋರ್ಟ್ ಮೂಲಕ ಜಾಮೀನು ಪಡೆದು ಸತೀಶ್ ಸೈಲ್ ಹೊರಬಂದಿದ್ದರು. ಇವತ್ತು ಇಡಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದು, ಸಾಕಷ್ಟು ಮಾಹಿತಿಯನ್ನ ಕಲೆ ಹಾಕಿದ್ದಾರೆ.
ಬೇಲೆಕೇರಿ ಬಂದರಿನಿಂದ ಅದಿರನ್ನು ಅಕ್ರಮವಾಗಿ ವಿದೇಶಕ್ಕೆ ಸಾಗಾಟ ಮಾಡಿದ ಪ್ರಕರಣದಲ್ಲಿ ಸತೀಶ್ ಸೈಲ್ ಅವರನ್ನು ದೋಷಿ ಎಂದು ಕಳೆದ ವರ್ಷ ಅಕ್ಟೋಬರ್ನಲ್ಲಿ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ತೀರ್ಪು ನೀಡಿತ್ತು. ನಂತರ ಬೇಲೆಕೇರಿ ಅದಿರು ಸಾಗಾಟ ಪ್ರಕರಣ ಸಂಬಂಧಿತ 6 ಪ್ರಕರಣಗಳಲ್ಲಿ ಅವರಿಗೆ 7 ವರ್ಷ ಜೈಲು ಶಿಕ್ಷೆ ಹಾಗೂ 44 ಕೋಟಿ ರೂಪಾಯಿಗೂ ಹೆಚ್ಚು ಮೊತ್ತದ ದಂಡ ವಿಧಿಸಲಾಗಿತ್ತು. ಆನಂತರ ಜೈಲು ಪಾಲಾಗಿದ್ದ ಅವರು ಶಾಸಕ ಸ್ಥಾನದಿಂದ ಅನರ್ಹರಾಗುವ ಭೀತಿ ಎದುರಿಸುತ್ತಿದ್ದರು ನಂತರ ಜನಪ್ರತಿನಿಧಿಗಳ ನ್ಯಾಯಾಲಯದ ತೀರ್ಪಿನ ವಿರುದ್ಧ ಸೈಲ್ ಹೈಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ನವೆಂಬರ್ನಲ್ಲಿ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರಿದ್ದ ಪೀಠ, ಸೈಲ್ಗೆ ವಿಧಿಸಿರುವ ಶಿಕ್ಷೆಯ ಆದೇಶವನ್ನು ಅಮಾನತಿನಲ್ಲಿಡಲು ಸೂಚಿಸಿತ್ತು. ದಂಡ ಮೊತ್ತದ ಶೇ 25 ರಷ್ಟನ್ನು ಠೇವಣಿ ಇಡುವಂತೆ ಸೂಚನೆ ನೀಡಿದ್ದ ಹೈಕೋರ್ಟ್ ಸೈಲ್ಗೆ ಜಾಮೀನು ನೀಡಿತ್ತು.

ನೋಡಿರಿ

