ಸರ್ಕಾರಕ್ಕೆ ಪ್ರತಿಭಟನೆಯ ಎಚ್ಚರಿಕೆ ನೀಡಿದ ಯಶ್‌ ತಾಯಿ ಪುಷ್ಪ!

ಸರ್ಕಾರಕ್ಕೆ ಪ್ರತಿಭಟನೆಯ ಎಚ್ಚರಿಕೆ ನೀಡಿದ ಯಶ್‌ ತಾಯಿ ಪುಷ್ಪ!

ರಾಕಿಂಗ್ ಸ್ಟಾರ್ ಯಶ್ ಅವರ ತಾಯಿ ಪುಷ್ಪ ಅರುಣ್ ಕುಮಾರ್ ಸಾಕಷ್ಟು ಸುದ್ದಿಯಲ್ಲಿದ್ದಾರೆ. ತಮ್ಮ ಮುಕ್ತ ಮಾತುಗಳಿಂದಲೇ ಹೆಚ್ಚು ಗಮನ ಸೆಳೆಯುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲೂ ಟ್ರೋಲ್ ಆಗ್ತಾನೇ ಇದ್ದಾರೆ. ಇತ್ತೀಚೆಗಷ್ಟೇ ಪುಷ್ಪಾ ಅರುಣ್ ಕುಮಾರ್ ನಿರ್ಮಾಣದ ‘ಕೊತ್ತಲವಾಡಿ ಸಿನಿಮಾ ಆಗಸ್ಟ್ 1ರಂದು ರಿಲೀಸ್ ಆಗಿತ್ತು. ಆದ್ರೆ ಬಾಕ್ಸ್‌ಆಫೀಸ್‌ನಲ್ಲಿ ಈ ಸಿನಿಮಾ ಹೇಳಿಕೊಳ್ಳುವಷ್ಟು ಸದ್ದು ಮಾಡಿಲ್ಲ. ಇದೀಗ ಯಶ್‌ ತಾಯಿ ಏಕಾಏಕಿ ಸರ್ಕಾರಕ್ಕೆ ಪ್ರತಿಭಟನೆಯ ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: ಏಷ್ಯಾಕಪ್ ನಲ್ಲಿ ಭಾರತ-ಪಾಕಿಸ್ತಾನ ಫೈನಲ್ ಆಡೇ ಇಲ್ಲ – ಟೂರ್ನಿಯಲ್ಲಿ ಯಶಸ್ವೀ ತಂಡ ಇಂಡಿಯಾ!

ಕೊತ್ತಲವಾಡಿ ಸಿನಿಮಾ ರಿಲೀಸ್​ಗೂ ಮೊದಲೇ ಪುಷ್ಪಾ ಅವರು ಸಾಕಷ್ಟು ಸಂದರ್ಶನ ನೀಡಿದ್ದರು. ಸಿನಿಮಾ ರಿಲೀಸ್ ಬಳಿಕವೂ ಇದನ್ನು ಮುಂದುವರಿಸಿದ್ದಾರೆ. ಅನೇಕ ಕಡೆಗಳಲ್ಲಿ ಪುಷ್ಪಾ ಸಂದರ್ಶನ ನೀಡುತ್ತಿದ್ದಾರೆ. ಈ ವೇಳೆ ಅವರು ಸರ್ಕಾರಕ್ಕೆ ಪ್ರತಿಭಟನೆಯ ಎಚ್ಚರಿಕೆ ನೀಡಿದ್ದಾರೆ. ಎಲ್ಲಾ ಕ್ಷೇತ್ರಗಳಲ್ಲಿ ಸ್ಪರ್ಧೆ ಹಾಗೂ ವೈರತ್ವ ಇದ್ದೇ ಇದೆ. ಸಿನಿಮಾ ರಂಗ ಕೂಡ ಇದಕ್ಕೆ ಹೊರತಾಗಿಲ್ಲ. ಚಿತ್ರವನ್ನು ನೋಡದೇ ಕೆಲವರು ಸೋಶಿಯಲ್ ಮೀಡಿಯಾದಲ್ಲಿ ನೆಗೆಟಿವ್ ವಿಮರ್ಶೆ ಹಂಚುವ ಕೆಲಸ ಮಾಡುತ್ತಿದ್ದಾರಂತೆ. ಈ ರೀತಿಯ ಆರೋಪವನ್ನು ಪುಷ್ಪಾ ಮಾಡಿದ್ದಾರೆ. ಜೊತೆಗೆ ಇಂಥವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂಬುದು ಪುಷ್ಪಾ ಕೋರಿಕೆ.

‘ಟಾಕಿಂಗ್ ಪ್ಯಾರಟ್’ ಹೆಸರಿನ ಯೂಟ್ಯೂಬ್ ಚಾನೆಲ್​ಗೆ ಪುಷ್ಪಾ ಸಂದರ್ಶನ ನೀಡಿದ್ದಾರೆ. ‘ನಮ್ಮ ಸಿನಿಮಾದ ಪ್ರಚಾರ ನೋಡಿ ಕೆಲವರು ನೆಗೆಟಿವ್ ಟಾಕ್​ ಹಬ್ಬಿಸಿದ್ದರು. ಸಿನಿಮಾ ಮಾಡುವವರಿಗೆ ನಿಜಕ್ಕೂ ಕಷ್ಟ ಇದೆ. ಇಲ್ಲಿ ನೂರು ತೊಂದರೆ ಇದೆ. ಮುಖ್ಯಮಂತ್ರಿ ಎದುರು ಹೋಗ್ತೀನಿ. ಇದನ್ನು ತಡೆಯಿರಿ ಎಂದು ಕೇಳುತ್ತೇನೆ. ಇದು ಸರ್ಕಾರದ ಕೆಲಸ’ ಎಂದು ಪುಷ್ಪಾ ಹೇಳಿದ್ದಾರೆ.

ಸಿನಿಮಾ ನೋಡಿ ಬರೆದರೆ ತೊಂದರೆ ಇಲ್ಲ. ಆದರೆ, ಸುಮಾರು ಜನರು ಸಿನಿಮಾ ನೋಡದೇ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಳ್ಳುತ್ತಿದ್ದಾರೆ. ಇದರಿಂದ ಅನೇಕರಿಗೆ ತೊಂದರೆ ಆಗುತ್ತಿದೆ. ನಾವು ದೂರು ತೆಗೆದುಕೊಂಡು ಬಂದಾಗ ಇದನ್ನು ಸ್ವೀಕರಿಸಬೇಕು. ಇಲ್ಲವಾದಲ್ಲಿ ರಾಕ್​ಲೈನ್​ ವೆಂಕಟೇಶ್​ಗೆ ಹೇಳಿ ಉಗ್ರ ಹೋರಾಟ ಮಾಡುತ್ತೇವೆ ಎಂದು ಪುಷ್ಪಾ ಅವರು ಹೇಳಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ಸಿನಿಮಾಗಳು ಏಕೆ ಓಡುತ್ತಿಲ್ಲ ಎಂಬುದಕ್ಕೆ ಈ ರೀತಿಯ ಕುತಂತ್ರಗಳೇ ಕಾರಣ. ನನ್ನ ದುಡ್ಡು ನಾನು ತಡೆದುಕೊಳ್ಳುತ್ತೇನೆ. ಆದರೆ, ಇನ್ನೊಬ್ಬರಿಗೆ ಕಷ್ಟ ಆಗಬಹುದು. ನಾವು ಒಂದು ನಿರ್ಧಾರಕ್ಕೆ ಬರಲೇಬೇಕು. ಮುಂದಿನ ದಿನಗಳಲ್ಲಿ ಅದನ್ನು ಮಾಡಿಯೇ ಮಾಡುತ್ತೇನೆ  ಎಂದು ಅವರು ಹೇಳಿದ್ದಾರೆ.

Shwetha M