ಹಳದಿ ಮಾರ್ಗಕ್ಕೂ ಅಪರ್ಣಾರದ್ದೇ ಧ್ವನಿ! – ಸಾವಿಗೂ ಮುನ್ನ ವಾಯ್ಸ್ ರೆಕಾರ್ಡಿಂಗ್!
ಕ್ಯಾನ್ಸರ್ ನಡುವೆಯೂ ಮನಗೆದ್ದ ಕನ್ನಡತಿ!

ಅಪರ್ಣಾ ವಸ್ತಾರೆ.. ಅಚ್ಚಕನ್ನಡದ ಸ್ವಚ್ಛ ನಿರೂಪಕಿ.. ಅಪರ್ಣಾ ಅವರು ನಮ್ಮನ್ನ ಅಗಲಿ ಒಂದು ವರ್ಷವೇ ಕಳೆದಿದೆ.. ಆದ್ರೂ ಅವರ ನೆನಪುಗಳು ಮಾತ್ರ ಅಜರಾಮರ. ಸಿಲಿಕಾನ್ ಸಿಟಿ ಬೆಂಗಳೂರಿಗರಿಗಂತೂ ಅಪರ್ಣಾ ಅವರು ಯಾವಾಗ್ಲೂ ನೆನಪಿನಲ್ಲಿರೋ ವ್ಯಕ್ತಿ.. ಬೆಂಗಳೂರು ನಗರದ ಜೀವನಾಡಿ ನಮ್ಮ ಮೆಟ್ರೋ ರೈಲಿನಲ್ಲಿ ದಯವಿಟ್ಟು ಗಮನಿಸಿ.. ಮುಂದಿನ ನಿಲ್ದಾಣ.. ಅಂತಾ ಅಪರ್ಣಾ ಧ್ವನಿ ಕೇಳಿದಾಗ ಅವರು ನಮ್ಮೊಂದಿಗೆ ಇದ್ದಾರೆ. ನಮ್ಮ ಪಕ್ಕದಲ್ಲೇ ಕೂತು ನಿಮ್ಮ ನಿಲ್ದಾಣ ಬಂದಿದೆ ಎಂದು ಎಚ್ಚರಿಸುವಂತಿರುತ್ತೆ. ನಮ್ಮ ಮೆಟ್ರೋ ಹಳದಿ ಮಾರ್ಗ ಉದ್ಘಾಟನೆಯಾಗಿದೆ. ಈ ಮಾರ್ಗದಲ್ಲೂ ಅಪರ್ಣಾ ಧ್ವನಿ ಇರ್ತಿದ್ರೆ ಎಷ್ಟು ಚೆನ್ನಾಗಿರ್ತಿತ್ತು ಅಂತಾ ಅದೆಷ್ಟೋ ಮಂದಿ ಹೇಳಿದ್ದೂ ಇದೆ. ಇದೀಗ ಎಲ್ಲೋ ಲೈನ್ ಪ್ರಯಾಣಿಕರಿಗೂ ಬಿಎಂಆರ್‌ಸಿಎಲ್ ಸರ್‌ಪ್ರೈಸ್ ಕೊಟ್ಟಿದೆ. ನಮ್ಮ ಮೆಟ್ರೋ ಹಳದಿ ಮಾರ್ಗದಲ್ಲೂ ಅಪರ್ಣಾ ಧ್ವನಿ ಬಳಸಿಕೊಳ್ಳಲಾಗಿದೆ.
ಇದನ್ನೂ ಓದಿ: ದಸರಾ ಆನೆಗಳಿಗೆ ತೂಕ ಪರೀಕ್ಷೆ – ಕ್ಯಾಪ್ಟನ್ ಅಭಿಮನ್ಯು ಮೀರಿಸಿದ ಭೀಮ
ಅಪ್ಪಟ ಕನ್ನಡದಲ್ಲಿಯೇ ನಿರೂಪಣೆ ಮಾಡುತ್ತಿದ್ದ ಅಪರ್ಣಾ ಧ್ವನಿಯನ್ನು ಕೇಳದವರೇ ಇಲ್ಲ. ಅವರು ನಿರೂಪಣೆಗೆ ನಿಂತರೆ, ನಿರರ್ಗಳವಾಗಿ ಗಂಟೆಗಟ್ಟಲೇ ಕನ್ನಡದಲ್ಲಿಯೇ ಮಾತುಡುತ್ತಿದ್ದರು. ಇವರ ನಿರೂಪಣೆಯ ಶೈಲಿಗೆ ಅದೆಷ್ಟೋ ಅಭಿಮಾನಿಗಳು ಇದ್ದಾರೆ. ವಿಶ್ವದ ಮೂಲೆ ಮೂಲೆಯಲ್ಲೂ ನೆಲೆಸಿರುವ ಕನ್ನಡಿಗರ ಫೇವರಿಟ್ ನಿರೂಪಕಿಯಾಗಿದ್ರು ಅಪರ್ಣಾ. ನನ್ನ ಗುರುತು ಕನ್ನಡ… ನನ್ನ ಅಸ್ತಿತ್ವ ಕನ್ನಡ.. ಎಂದು ಹೆಮ್ಮೆಯಿಂದ ಹೇಳುತ್ತಿದ್ದ ಅಪರ್ಣಾ, ಬದುಕಿನ ಯಾತ್ರೆ ಮುಗಿಸಿ ಒಂದು ವರ್ಷವೇ ಕಳೆದಿದೆ.. ಶ್ವಾಸಕೋಶದ ಕ್ಯಾನ್ಸರ್‌ನಿಂದ ಬಳಲುತ್ತಿದ್ದ 2024ರ ಜುಲೈ 11ರಂದು ನಿಧನರಾಗಿದ್ದಾರೆ. ಅಪರ್ಣಾ ನಾಲ್ಕನೇ ಹಂತದ ಕ್ಯಾನ್ಸರ್‌ನಿಂದ ಬಳಲುತ್ತಿದ್ರೂ ಯೆಲ್ಲೋ ಲೈನ್ ಮೆಟ್ರೋಗೆ ಅವರು ಧ್ವನಿ ನೀಡಿದ್ರು ಅನ್ನೋ ವಿಚಾರ ಈಗ ರಿವೀಲ್ ಆಗಿದೆ. ಇಂದಿನಿಂದ ಅಪರ್ಣಾ ಅವರ ಧ್ವನಿ ನಮ್ಮ ಮೆಟ್ರೋ ಹಳದಿ ಮಾರ್ಗದಲ್ಲಿ ಕೇಳಿಸುತ್ತಿದೆ.
ಹೌದು.. ಅಪರ್ಣಾ ಧ್ವನಿ ತುಂಬಾ ಸುಮಧುರ.. ಆಕೆ ಆ್ಯಂಕರಿಂಗ್ಗೆ ನಿಂತರೆ ಬಾಯಿಯಿಂದ ಮುತ್ತುಗಳು ಉದುರುತ್ತಿವೆ ಎಂದೆನಿಸುತ್ತಿತ್ತು. ನಮ್ಮ ಮೆಟ್ರೋಗೂ ಅಪರ್ಣಾ ಧ್ವನಿ ನೀಡಿದ್ರು.. ಹಸಿರು ಹಾಗೂ ಪರ್ಪಲ್ ಲೈನ್ ಮೆಟ್ರೋಗೆ ಅಪರ್ಣಾ ಧ್ವನಿ ನೀಡಿರೋದು ನಮ್ಮ ಮೆಟ್ರೋದ ಹೈಲೈಟ್ ಕೂಡ ಆಗಿತ್ತು. ನಿನ್ನೆ ನಮ್ಮ ಮೆಟ್ರೋ ಹಳದಿ ಬಣ್ಣದ ಮಾರ್ಗ ಲೋಕಾರ್ಪಣೆಗೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲೋ ಲೈನ್ ಉದ್ಘಾಟನೆ ಮಾಡಿದ್ದಾರೆ. ಆರ್ವಿ ರಸ್ತೆಯಿಂದ ಬೊಮ್ಮಸಂದ್ರದವರೆಗೆ ಈ ರೈಲು ಸಂಪರ್ಕ ಕಲ್ಪಿಸುತ್ತದೆ. ಒಟ್ಟೂ 16 ನಿಲ್ದಾಣಗಳನ್ನು ಈ ಮೆಟ್ರೋ ರೈಲು ಹಾದು ಹೋಗುತ್ತದೆ. ಹಳದಿ ಬಣ್ಣದ ಮೆಟ್ರೋಗೂ ಅಪರ್ಣಾ ಅವರದ್ದೇ ಧ್ವನಿ ಇದ್ರೆ ಚೆನ್ನಾಗಿರ್ತಿತ್ತು ಎಂಬುದು ಕನ್ನಡಿಗರ ಆಸೆ ಆಗಿತ್ತು. ಇದೀಗ ಕನ್ನಡಿಗರ ಆಸೆಯನ್ನ ಬಿಎಂ ಆರ್‌ಸಿ ಎಲ್ ಈಡೇರಿದೆ. ನಮ್ಮ ಮೆಟ್ರೋ ಹಳದಿ ಬಣ್ಣದ ಮಾರ್ಗದಲ್ಲೂ ಅಪರ್ಣಾ ಧ್ವನಿ ಪ್ರತಿಧ್ವನಿಸುತ್ತಿದೆ.
ಹೌದು, ನಮ್ಮ ಮೆಟ್ರೋ ತಾಂತ್ರಿಕ ತಂಡ 2024 ರ ಏಪ್ರಿಲ್, ಮೇ ನಲ್ಲಿ ಅಪರ್ಣಾ ಬಳಿ ತೆರೆಳಿ ನಮ್ಮ ಮೆಟ್ರೋಗೆ ಧ್ವನಿ ನೀಡುವಂತೆ ಕೇಳಿಕೊಂಡಿತ್ತು. ಕ್ಯಾನ್ಸರ್ ನಿಂದ ಬಳಲುತ್ತಿದ್ದರೂ ಅಪರ್ಣಾ ಅವರು ಇದಕ್ಕೆ ಒಪ್ಪಿಗೆ ನೀಡಿದ್ರು. ನೋವಿನಲ್ಲೂ ಅಪರ್ಣಾ ರೆಕಾರ್ಡಿಂಗ್ ಕಾರ್ಯ ಮುಗಿಸಿದ್ರು. ಇದೀಗ ಬಿಎಂಆರ್‌ಸಿಎಲ್ ಅಪರ್ಣಾ ಅವರ ಧ್ವನಿಯನ್ನ ಹಳದಿ ಮಾರ್ಗದಲ್ಲೂ ಬಳಸಿಕೊಂಡಿದೆ. ಹಳದಿ ಮಾರ್ಗದಲ್ಲಿ ಒಟ್ಟು 16 ನಿಲ್ದಾಣಗಳಲ್ಲಿ ಅವರ ಧ್ವನಿಯನ್ನ ಬಳಸಿಕೊಳ್ಳಲಾಗಿದೆ.
ಇನ್ನು ಸದ್ಯ ಹಸಿರು ಬಣ್ಣದ ಲೈನ್ ನಾಗಸಂದ್ರದಿಂದ ಸಿಲ್ಕ್ ಇನ್ಸ್ಟಿಟ್ಯೂಟ್ವರೆಗೆ ಕಾರ್ಯ ನಿರ್ವಹಿಸುತ್ತಿದೆ. ಈ ಮಾರ್ಗದಲ್ಲಿ 32 ಮೆಟ್ರೋ ಸ್ಟೇಷನ್ಗಳು ಇವೆ. ಪರ್ಪಲ್ ಲೈನ್ ವೈಟ್ ಫೀಲ್ಡ್ನಿಂದ ಚೆಲ್ಲಘಟ್ಟದವರೆಗೆ ಕಾರ್ಯ ನಿರ್ವಹಿಸುತ್ತಿದೆ. ಈ ಮಾರ್ಗದಲ್ಲಿ 37 ಮೆಟ್ರೋ ಸ್ಟೇಷನ್ಗಳು ಇವೆ. ಈಗ ಹಳದಿ ಮೆಟ್ರೋ ಸೇರಿ 85 ಸ್ಟೇಷನ್ಗಳಲ್ಲಿ ಅಪರ್ಣ ಅವರ ಧ್ವನಿ ಪ್ರಸಾರ ಮಾಡಲಾಗ್ತಿದೆ. ಅಪರ್ಣಾ ಅವರು ನಾಲ್ಕನೇ ಹಂತದ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು ಮೆಟ್ರೋಗೆ ಧ್ವನಿ ನೀಡಿ ತಮ್ಮ ಕೆಲಸದ ಮೇಲಿನ ಶ್ರದ್ಧೆಯನ್ನು ತೋರಿಸಿಕೊಟ್ಟಿದ್ದಾರೆ. ಅಪರ್ಣಾ ಅವರ ಕರ್ತವ್ಯ ನಿಷ್ಠೆಗೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ನೋಡಿರಿ

