ತಿರುಪತಿ ತಿಮ್ಮಪ್ಪ ಕೋಟಿ ಕೋಟಿ ಒಡೆಯ! – ಒಂದೇ ತಿಂಗಳಲ್ಲಿ 129.45 ಕೋಟಿ ಕಾಣಿಕೆ ಸಂಗ್ರಹ

ಅತ್ಯಂತ ಪ್ರಸಿದ್ಧ ದೇವಾಲಯಗಳಲ್ಲಿ ತಿರುಮಲ ತಿರುಪತಿ ದೇವಸ್ಥಾನವೂ ಒಂದು. ನಿತ್ಯ ಸಾವಿರಾರು ಮಂದಿ ತಿಮ್ಮಪ್ಪನ ದರ್ಶನ ಪಡೆದು ಪುನೀತರಾಗುತ್ತಾರೆ. ಭಕ್ತರ ಇಷ್ಟಾರ್ಥಗಳು, ನಂಬಿಕೆಗಳು ಪೂರ್ಣಗೊಂಡಾಗ ಅವರು ತಿಮ್ಮಪ್ಪನ ಹೆಸರಿನಲ್ಲಿ ಹಣ, ಚಿನ್ನ, ಬೆಳ್ಳಿ, ವಜ್ರ ಸೇರಿದಂತೆ ಇನ್ನಿತರ ವಸ್ತುಗಳನ್ನು, ಆಭರಣಗಳನ್ನು ಕಾಣಿಕೆಯಾಗಿ ನೀಡುತ್ತಾರೆ. ಹೀಗಾಗಿಯೇ ತಿರುಪತಿ ದೇವಸ್ಥಾನ ಶ್ರೀಮಂತ ದೇಗುಲ ಎನಿಸಿಕೊಂಡಿದೆ. ಇದೀಗ ತಿರುಪತಿ ದೇವಸ್ಥಾನದಲ್ಲಿ ದಾಖಲೆ ಪ್ರಮಾಣದಲ್ಲಿ ಕಾಣಿಕೆ ಸಂಗ್ರಹವಾಗಿದೆ.
ಇದನ್ನೂ ಓದಿ: ಲೋಕಸಭಾ ಚುನಾವಣೆಯಲ್ಲಿ ಮತಗಳ್ಳತನ ಆರೋಪ – ರಾಹುಲ್ ಗಾಂಧಿಗೆ ಚುನಾವಣಾ ಆಯೋಗದಿಂದ ನೋಟಿಸ್!
ತಿರುಪತಿ ತಿಮ್ಮಪ್ಪನ ದೇವರ ಸನ್ನಿಧಿಯಲ್ಲಿ ಹುಂಡಿ ಹಣ ಎಣಿಕೆ ಕಾರ್ಯ ನಡೆದಿದೆ. ಜುಲೈ ತಿಂಗಳಲ್ಲಿಯೇ 129.45 ಕೋಟಿ ರೂ. ಸಂಗ್ರಹವಾಗಿದೆ. 2024ರ ಜುಲೈನಲ್ಲಿ 125.35 ಕೋಟಿ ರೂ. ಕಾಣಿಕೆ ಸಂಗ್ರಹವಾಗಿತ್ತು. ಆದರೆ ಈ ಬಾರಿ 129.45 ಕೋಟಿ ರೂ. ಸಂಗ್ರಹವಾಗಿದ್ದು, ಕಳೆದ ಸಲಕ್ಕಿಂತ 4.09 ಕೋಟಿ ರೂ. ಅಧಿಕ ಕಾಣಿಕೆ ಸಂಗ್ರಹವಾಗಿದೆ ಎಂದು ತಿರುಮಲ ತಿರುಪತಿ ದೇವಸ್ಥಾನ ಮಂಡಳಿ ಮೂಲಗಳು ತಿಳಿಸಿವೆ.
ಬೇಸಿಗೆ ರಜೆ ಮುಗಿದು ಶಾಲಾ-ಕಾಲೇಜುಗಳು ತೆರೆದಿದ್ದರೂ ಕೂಡ ಜುಲೈನಲ್ಲಿ ಭಕ್ತರ ಬರುವಿಕೆಯಲ್ಲಿ ಹೆಚ್ಚಳ ಕಂಡುಬಂದಿದೆ. ಈ ವರ್ಷ ಇಲ್ಲಿಯವರೆಗೆ 23.76 ಲಕ್ಷ ಭಕ್ತರು ತಿರುಪತಿಗೆ ಆಗಮಿಸಿ, ದರ್ಶನ ಪಡೆದುಕೊಂಡಿದ್ದಾರೆ. ಟಿಟಿಡಿ ಅಧಿಕಾರಿಗಳ ಮಾಹಿತಿ ಪ್ರಕಾರ, ಕಳೆದ ವರ್ಷಕ್ಕಿಂತ ಈ ವರ್ಷ ಭಕ್ತರ ಸಂಖ್ಯೆಯಲ್ಲಿ ಶೇ.7.4ರಷ್ಟು ಏರಿಕೆಯಾಗಿದೆ ಎಂದು ತಿಳಿಸಿದ್ದಾರೆ.

ನೋಡಿರಿ

