ಕೈಯಲ್ಲಿ ಪಂಜು.. ಪಕ್ಕದಲ್ಲಿ ಕಂಬಳದ ಕೋಣ.. – ತೆರೆ ಮೇಲೆ ಮಾವೀರನಾಗಿ ಮಿಂಚಲು ರಾಜ್ ಬಿ ಶೆಟ್ಟಿ ರೆಡಿ!

ಸ್ಯಾಂಡಲ್ವುಡ್ನಲ್ಲಿ ಸದ್ಯ ಕರಾವಳಿ ಕತೆಗಳದ್ದೇ ಸದ್ದು. ಈಗಾಗಲೇ ಕಾಂತಾರ ಸಿನಿಮಾ ವಿಶ್ವದಾದ್ಯಂತ ಅಬ್ಬರಿಸಿತ್ತು. ಕಾಂತಾರ ಚಾಪ್ಟರ್ 1 ಕೂಡ ತೆರೆಗೆ ಬರಲು ಸಿದ್ಧಾವಾಗಿದೆ. ಇನ್ನು ರಾಜ್ಬಿ ಶೆಟ್ಟಿ ನಿರ್ಮಾಣದಲ ಸು ಫ್ರಮ್ ಸೋ ಕೂಡ ಬಾಕ್ಸ್ ಆಫೀಸ್ನಲ್ಲಿ ಕಮಾಲ್ ಮಾಡ್ತಿದೆ. ಸು ಫ್ರಮ್ ಸೋ ಗೆಲುವಿನ ಖುಷಿಯಲ್ಲಿರೋ ರಾಜ್ಬಿ ಶೆಟ್ಟಿ ಈಗ ಫ್ಯಾನ್ಸ್ ಗೆ ಗುಡ್ನ್ಯೂಸ್ ಕೊಟ್ಟಿದ್ದಾರೆ. ಇದೀಗ ಶೆಟ್ರು ಮತ್ತೊಂದು ಕರಾವಳಿ ಕತೆ ಆಧಾರಿತ ಸಿನಿಮಾದಲ್ಲಿ ಮಿಂಚಲಿದ್ದಾರೆ.
ಇದನ್ನೂ ಓದಿ: ಜಮ್ಮುವಿನಲ್ಲಿ ಕಂದಕಕ್ಕೆ ಉರುಳಿದ ಸೇನಾ ವಾಹನ – 3 ಯೋಧರು ಸಾ*ವು, 15 ಸಿಬ್ಬಂದಿಗೆ ಗಾಯ
ಗುರುದತ್ ಗಾಣಿಗ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಕರಾವಳಿ ಸಿನಿಮಾದಲ್ಲಿ ರಾಜ್ ಬಿ ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಪ್ರಜ್ವಲ್ ದೇವರಾಜ್ ನಾಯಕನಾಗಿ ಕಾಣಿಸಿಕೊಳ್ಳುತ್ತಿರುವ ಕರಾವಳಿ ಸಿನಿಮಾಗೆ ರಾಜ್ ಬಿ ಶೆಟ್ಟಿ ಎಂಟ್ರಿ ಕೊಟ್ಟಿದ್ದಾರೆ. ಈ ಸಿನಿಮಾದಲ್ಲಿ ರಾಜ್ ಬಿ ಶೆಟ್ಟಿ ಮಾವೀರ ಪಾತ್ರದ ಮೂಲಕ ಮಿಂಚಲಿದ್ದಾರೆ. ರಾಜ್ ಎಂಟ್ರಿಯಿಂದ ಕರಾವಳಿ ಚಿತ್ರದ ಮೇಲಿನ ನಿರೀಕ್ಷೆ ದುಪ್ಪಟ್ಟಾಗಿದೆ. ಸದ್ಯ ರಾಜ್ ಬಿ ಶೆಟ್ಟಿ ಅವರ ಪಾತ್ರ ಪರಿಚಯದ ಟೀಸರ್ ರಿಲೀಸ್ ಆಗಿದೆ.
ರಾಜ್ ಬಿ ಶೆಟ್ಟಿ ಲುಕ್ ಆಕರ್ಷಕವಾಗಿದ್ದು, ಯಾವ ಪಾತ್ರ ಎನ್ನುವ ಕುತೂಹಲ ಹೆಚ್ಚಾಗಿದೆ. ಎರಡು ಕೋಣಗಳ ಮಧ್ಯೆ ನಿಂತು ದಿಟ್ಟಿಸಿ ನೋಡುತ್ತಿರುವ ರಾಜ್ ಬಿ ಶೆಟ್ಟಿ ಒಂದು ಕೈಯಲ್ಲಿ ಪಂಜು ಹಿಡಿದು ಕಾಣಿಸಿಕೊಂಡಿದ್ದಾರೆ. ರಾಜ್ ಲುಕ್ ನೋಡುತ್ತಿದ್ದರೆ ಕಂಬಳ ಓಡಿಸುವ ಓಟಗಾರನ ಅಥವಾ ಕಂಬಳ ನಡೆಸುವ ಕುಟುಂಬದ ಮಾವೀರ ಎನ್ನುವುದು ಕುತೂಹಲ ಮೂಡಿಸಿದೆ. ರಾಜ್ ಪಾತ್ರದ ಬಗ್ಗೆ ಸಿನಿಮಾ ತಂಡ ಯಾವುದೇ ಮಾಹಿತಿ ಬಿಟ್ಟುಕೊಟ್ಟಿಲ್ಲ. ಆದರೆ ಲುಕ್ ರಿಲೀಸ್ ಮಾಡುವ ಮೂಲಕ ಕರಾವಳಿ ಸಿನಿಮಾ ಮೇಲಿನ ನಿರೀಕ್ಷೆಯನ್ನು ಹೆಚ್ಚಿಸಿದೆ ಸಿನಿಮಾ ತಂಡ.
ಈಗಾಗಲೇ ಕರಾವಳಿ ಸಿನಿಮಾದಿಂದ ರಿಲೀಸ್ ಆಗಿರುವ ಪೋಸ್ಟರ್ ಮತ್ತು ಟೀಸರ್ ಸಿಕ್ಕಾಪಟ್ಟೆ ವೈರಲ್ ಆಗಿದೆ. ಇದೀಗ ರಾಜ್ ಬಿ ಶೆಟ್ಟಿ ಪೋಸ್ಟರ್ ಮತ್ತಷ್ಟು ಆಕರ್ಷಕವಾಗಿದ್ದು, ಸಿನಿಮಾದ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ. ಕರಾವಳಿಯಲ್ಲಿ ನಟ ಮಿತ್ರ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನೂ ರಮೇಶ್ ಇಂದಿರಾ ಅವರ ಪಾತ್ರ ಕೂಡ ಸಿಕ್ಕಾಪಟ್ಟೆ ಪವರ್ಫುಲ್ ಆಗಿದೆ. ನಾಯಕಿಯಾಗಿ ಸಂಪದಾ ಕಾಣಿಸಿಕೊಂಡಿದ್ದಾರೆ.
ಕರಾವಳಿ ಹೆಸರೇ ಹೇಳುವ ಹಾಗೆ ಬಹುತೇಕ ಸಿನಿಮಾ ಕರಾವಳಿಯ ಸುತ್ತಮುತ್ತನೇ ಚಿತ್ರೀಕರಣಗೊಂಡಿದೆ. ಈ ಸಿನಿಮಾ ಗುರುದತ್ ಗಾಣಿಗ ನಿರ್ದೇಶನದ ಜೊತೆಗೆ ವಿಕೆ ಫಿಲ್ಮಂ ಅಸೋಸಿಯೇಷನ್ ನಲ್ಲಿ ಗಾಣಿಗ ಫಿಲ್ಮ್ಸ್ನಲ್ಲಿ ನಿರ್ಮಾಣಾಗುತ್ತಿದೆ. ಕರಾವಳಿ ಮನುಷ್ಯ ಹಾಗೂ ಪ್ರಾಣಿ ಮಧ್ಯೆ ನಡೆಯುವ ಸಂಘರ್ಷದ ಕಥೆ. ಪಕ್ಕಾ ಹಳ್ಳಿ ಬ್ಯಾಕ್ ಡ್ರಾಪ್ ನಲ್ಲಿ ಸಿನಿಮಾ ಮೂಡಿ ಬರಲಿದೆ. ಈ ಚಿತ್ರಕ್ಕೆ ಸಚಿನ್ ಬಸ್ರೂರು ಸಂಗೀತ ಸಂಯೋಜನೆ ಮಾಡಿದ್ದಾರೆ. ಅಭಿಮನ್ಯೂ ಸದಾನಂದನ್ ಅವರ ಕ್ಯಾಮರಾ ವರ್ಕ್ ಚಿತ್ರಕ್ಕಿದೆ.

ನೋಡಿರಿ

