ಮಹಾರಾಜ ಟ್ರೋಫಿಗೆ ಬಿಗ್ ಶಾಕ್ – ಸಿಗದ ಪರ್ಮಿಷನ್, ಟೂರ್ನಿ ಕ್ಯಾನ್ಸಲ್?
RCB ಕಾಲ್ತುಳಿತವೇ ಚಿನ್ನಸ್ವಾಮಿಗೆ ಕಂಟಕ!

ಆರ್ಸಿಬಿ ಗೆದಿದ್ದೇ ಗೆದಿದ್ದು, ಕಾಲ್ತುಳಿತ ಆಗಿದ್ದೇ ಆಗಿದ್ದು.. ಚಿನ್ನಸ್ವಾಮಿ ಅಂಗಳಕ್ಕೆ ಒಂದು ರೀತಿಯ ಕಳಂಕ ಅಂಟಿಕೊಂಡಿದೆ. ಘಟನೆಗೆ ಅದೇನ್ ಕಾರಣವಿದ್ರೂ ಚಿನ್ನಸ್ವಾಮಿಗೆ ಅಂಟಿರೋ ರಕ್ತದ ಕಲೆ ಎರಡು ತಿಂಗಳಾದ್ರೂ ಹೋಗಿಲ್ಲ.. ಇದ್ರ ಎಫೆಕ್ಟ್ ಮಹಾರಾಜ ಟ್ರೋಫಿ ಮೇಲೆ ಬಿದ್ದಿದೆ. ಈ ಟ್ರೋಫಿ ಕ್ಯಾನ್ಸಲ್ ಆಗೋ ಹಂತಕ್ಕೆ ಬಂದಿದೆ
ಮಹಾರಾಜ ಟ್ರೋಫಿಗೆ ಕೌಂಟ್ ಡೌನ್ ಶುರುವಾಗಿದೆ. ಇದೇ ತಿಂಗಳ 11 ರಿಂದ ಟೂರ್ನಿ ಆರಂಭಕ್ಕೆ ಡೇಟ್ ಕೂಡ ಫಿಕ್ಸ್ ಆಗಿದೆ.. ಆದ್ರೆ ಈ ಟೂರ್ನಿ ನಡೆಯುತ್ತಾ ನಡೆಯಲ್ವಾ ನಡೆದ್ರೆ ಎಲ್ಲಿ ನಡೆಯುತ್ತಾ ಅನ್ನೋ ಪ್ರಶ್ನೆಗಳು ಹುಟ್ಟಿಕೊಂಡಿದೆ. ಇದ್ದಕ್ಕೆ ಕಾರಣ ಆರ್ಸಿಬಿ ಕಪ್ ಗೆದ್ದಾಗ ಆಗಿರೋ ಕಾಲ್ತುಳಿತದ ದುರಂತ.. ಮಹಾರಾಜ ಟ್ರೋಫಿಯ 4ನೇ ಆವೃತ್ತಿಯ ಟೂರ್ನಿ ಆಗಸ್ಟ್ 11ರಿಂದ 27ರವರೆಗೆ ನಡೆಯಲಿದ್ದು, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯಗಳನ್ನು ಆಯೋಜಿಸಲು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಸಿದ್ಧತೆ ಆರಂಭಿಸಿತ್ತು. ಆದರೆ, RCB ಸಂಭ್ರಮಾಚರಣೆಯ ಸಂದರ್ಭದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ 11 ಮಂದಿ ಅಭಿಮಾನಿಗಳು ಸಾವನ್ನಪ್ಪಿದ ಪ್ರಕರಣದ ತನಿಖೆ ಇನ್ನೂ ವಿಚಾರಣೆಯ ಹಂತದಲ್ಲಿ ಇರುವುದರಿಂದ ಕ್ರೀಡಾಂಗಣದಲ್ಲಿ ಪಂದ್ಯಗಳ ಆಯೋಜನೆಗೆ ಇದುವರೆಗೂ ಪೊಲೀಸ್ ಇಲಾಖೆಯಿಂದ ಅನುಮತಿ ಸಿಕ್ಕಿಲ್ಲ. ಈ ಬಾರಿಯ ಟೂರ್ನಿಯಲ್ಲಿ ಕ್ರೀಡಾಂಗಣಕ್ಕೆ ಅಭಿಮಾನಿಗಳ ಪ್ರವೇಶ ನಿರ್ಬಂಧಿಸಿ, ಮುಚ್ಚಿದ ಕ್ರೀಡಾಂಗಣದಲ್ಲಿ ಪಂದ್ಯಗಳನ್ನು ಆಯೋಜಿಸುವುದಾಗಿ ತಿಳಿಸಿದ್ದ ಆಯೋಜಕರು ವೇಳಾಪಟ್ಟಿಯನ್ನೂ ಬಿಡುಗಡೆಗೊಳಿಸಿದ್ದರು. ಆದಾಗ್ಯೂ ಪಂದ್ಯಗಳ ಆಯೋಜನೆಗೆ KSCA ಯಿಂದ ಸಲ್ಲಿಸಿರುವ ಮನವಿಗೆ ಬೆಂಗಳೂರು ಪೊಲೀಸ್ ಇಲಾಖೆಯಿಂದ ಇದುವರೆಗೂ ಯಾವುದೇ ಪ್ರತಿಕ್ರಿಯೆ ಬಂದಿಲ್ವಂತೆ. ಹೀಗಾಗಿ ಟೂರ್ನಿ ಬೆಂಗಳೂರಿನಲ್ಲಿ ನಡೆಯುವುದು ಅನುಮಾನ ಎನ್ನಲಾಗುತ್ತಿದೆ.
ಬೆಂಗಳೂರಿನಿಂದ ಶಿಫ್ಟ್ ಆಗುತ್ತಾ ಮಹಾರಾಜ ಟ್ರೋಫಿ?
ಒಂದು ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯಗಳನ್ನು ಆಯೋಜಿಸಲು ಅನುಮತಿ ದೊರೆಯದಿದ್ದರೆ ಬೇರೆ ಮೈದಾನಗಳಲ್ಲಿ ಪಂದ್ಯ ಆಯೋಜಿಸುವ ಕುರಿತು ಕೆಎಸ್ಸಿಎ ಚಿಂತನೆ ನಡೆಸುತ್ತಿದೆ. ಫ್ರಾಂಚೈಸಿಗಳ ಮಾಲೀಕರು ಹಾಗೂ ಟೂರ್ನಿಯ ನೇರಪ್ರಸಾರಕರೊಂದಿಗೆ ಈಗಾಗಲೇ ಸಾಧಕ-ಬಾಧಕಗಳ ಕುರಿತು ಚರ್ಚಿಸಲಾಗುತ್ತಿದ್ದು, ಶೀಘ್ರದಲ್ಲೇ ಅಂತಿಮ ನಿರ್ಧಾರ ಪ್ರಕಟಿಸಲಿದ್ದಾರೆ. ಒಂದೊಮ್ಮೆ ಚಿನ್ನಸ್ವಾಮಿಯಲ್ಲಿ ಅವಕಾಶ ಸಿಗದಿದ್ದರೆ ಮೈಸೂರು ಅಥವಾ ಹುಬ್ಬಳಿಯನ್ನು ಆಯ್ಕೆ ಮಾಡುವುದು ಅನಿವಾರ್ಯವಾಗಿದೆ.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸೆಪ್ಟೆಂಬರ್ನಲ್ಲಿ ನಡೆಯಲಿರುವ ಮಹಿಳಾ ಏಕದಿನ ವಿಶ್ವಕಪ್ನ ಉದ್ಘಾಟನಾ ಪಂದ್ಯ ಮತ್ತು ಸೆಮಿಫೈನಲ್ ಪಂದ್ಯವನ್ನು ನಡೆಸಬೇಕಿತ್ತು. ಕರ್ನಾಟಕದಲ್ಲಿ ಬೆಂಗಳೂರು ಹೊರತುಪಡಿಸಿ ಬೇರೆ ಯಾವುದೇ ಸ್ಥಳದಲ್ಲಿ ಅಂತರರಾಷ್ಟ್ರೀಯ ಕ್ರೀಡಾಂಗಣವನ್ನು ಹೊಂದಿಲ್ಲ. ಹೀಗಾಗಿ ಚಿನ್ನಸ್ವಾಮಿ ಸಮಸ್ಯೆಯನ್ನ ಆದಷ್ಟು ಬೇಗ ಪೊಲೀಸರು ಬಗೆಹರಿಸೋ ಕೆಲಸ ಮಾಡಬೇಕಿದೆ. ಕಾಲ್ತುಳಿತದ ಕಾರಣವನ್ನ ಮುಂದಿಟ್ಟು ಕುಳಿತ್ರೆ ಚಿನ್ನಸ್ವಾಮಿ ಕ್ರೀಡಾಂಗಣ ಹಾಳು ಕೊಂಪೆಯಾಗಿ ಹೋಗುತ್ತೆ.. ಹೀಗಾಗಿ ಪೊಲೀಸರು ಮತ್ತು ಸರ್ಕಾರ ಆದಷ್ಟು ಬೇಗ ಒಂದು ನಿರ್ಧಾರಕ್ಕೆ ಬಂದು ಚಿನ್ನಸ್ವಾಮಿಗೆ ಅಂಟಿರೋ ರಕ್ತದ ಕಲೆಯನ್ನ ಒರೆಸಬೇಕಿದೆ.. ಮಹರಾಜ ಟ್ರೋಫಿ ಹಾಗೂ ಮುಂದಿನ ಅಂತರರಾಷ್ಟ್ರೀಯ ಪಂದ್ಯಗಳಿಗೆ ಅನುಮತಿ ನೀಡಬೇಕು ಅನ್ನೋದು ಸಾಕಷ್ಟು ಕ್ರಿಕೆಟ್ ಪ್ರೇಮಿಗಳು ಅಭಿಪ್ರಾಯ.

ನೋಡಿರಿ

