7,000 ಕೋಟಿ ರೂಪಾಯಿ ದುರ್ಬಳಕೆ ಆರೋಪ – E.D ಕಚೇರಿಗೆ ಉದ್ಯಮಿ ಅನಿಲ್ ಅಂಬಾನಿ ಹಾಜರ್

7,000 ಕೋಟಿ ರೂಪಾಯಿ ದುರ್ಬಳಕೆ ಆರೋಪ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಇ.ಡಿ ಸಮನ್ಸ್ ನೀಡಿದ ಬೆನ್ನಲ್ಲೇ ಇಂದು ನವದೆಹಲಿಯಲ್ಲಿರುವ ಇ.ಡಿ. ಕಚೇರಿಗೆ ಉದ್ಯಮಿ ಅನಿಲ್ ಅಂಬಾನಿ ಹಾಜರಾದರು. ಸಾಲ ವಂಚನೆ ಪ್ರಕರಣದ ವಿಚಾರಣೆಯ ಹಿನ್ನೆಲೆಯಲ್ಲಿ ಅನಿಲ್ ಅಂಬಾನಿ ವಿರುದ್ಧ ಇ.ಡಿ. ಲುಕ್ ಔಟ್ ನೋಟಿಸ್ ಹೊರಡಿಸಿತ್ತು. ಈ ಮೂಲಕ ತನಿಖೆಯ ವೇಳೆ ದೇಶ ತೊರೆಯದಂತೆ ಸೂಚನೆ ನೀಡಿತ್ತು.
ಹಣಕಾಸು ಅಕ್ರಮಗಳು ಮತ್ತು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಆರ್ಥಿಕ ನಿಯಮಗಳು ಉಲ್ಲಂಘನೆಯಾಗಿರುವ ಅನಾಮಾನದ ಹಿನ್ನೆಲೆಯಲ್ಲಿ ತನಿಖೆ ನಡೆಯುತ್ತಿದೆ. ಅನಿಲ್ ಅಂಬಾನಿಗೆ ಸೇರಿದ ಅನೇಕ ಆಸ್ತಿ ಮತ್ತು ಘಟಕಗಳಲ್ಲಿನ ಪಾತ್ರದ ಕುರಿತು ಕೂಡ ಇ.ಡಿ. ಪರಿಶೀಲನೆ ನಡೆಸುತ್ತಿದೆ. ಪ್ರಕರಣದ ತನಿಖೆಯಲ್ಲಿ ಅಂಬಾನಿ ಅವರ ಹೇಳಿಕೆ ನಿರ್ಣಾಯಕ ಪಾತ್ರ ಹೊಂದಿದೆ.
ಜುಲೈ 24ರಂದು ರಿಲಯನ್ಸ್ ಅನಿಲ್ ಅಂಬಾನಿ ಗ್ರೂಪ್ ಕಂಪನಿಗಳ ವಿರುದ್ಧದ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ 35 ಆಸ್ತಿ, 50 ಕಂಪನಿಗಳು ಮತ್ತು 25ಕ್ಕೂ ಹೆಚ್ಚು ವ್ಯಕ್ತಿಗಳ ಮೇಲೆ ಶೋಧ ಕಾರ್ಯಾಚರಣೆ ಪ್ರಾರಂಭಿಸಿದ ಇ.ಡಿ. ಬಳಿಕ ನೋಟಿಸ್ ಜಾರಿ ಮಾಡಿತ್ತು. ಈಗಾಗಲೇ ಸಿಬಿಐ ಎಫ್‌ಐಆರ್ ದಾಖಲಿಸಿದ್ದು, ಈ ಬೆನ್ನಲ್ಲೇ ಇ.ಡಿ. ಹಣಕಾಸು ಅಪರಾಧದ ಅಡಿಯಲ್ಲಿ ತನಿಖೆ ಕೈಗೊಂಡಿದೆ.
ಇ.ಡಿ.ಯಿಂದ ನಡೆಸಿದ ಪ್ರಾಥಮಿಕ ತನಿಖೆಯಲ್ಲಿ ಬ್ಯಾಂಕುಗಳು, ಷೇರುದಾರರು, ಹೂಡಿಕೆದಾರರು ಮತ್ತು ಇತರ ಸಾರ್ವಜನಿಕ ಸಂಸ್ಥೆಗಳನ್ನು ವಂಚಿಸುವ ಮೂಲಕ ಸಾರ್ವಜನಿಕ ಹಣವನ್ನು ಬೇರೆಡೆಗೆ ತಿರುಗಿಸಲು ಮತ್ತು ವಂಚಿಸಲು ಯೋಜನೆ ರೂಪಿಸಿರುವುದು ಬಯಲಾಗಿದೆ. ಯೆಸ್ ಬ್ಯಾಂಕ್ ಅಧಿಕಾರಿಗೆ ಲಂಚ ನೀಡಿರುವುದೂ ತನಿಖೆಗೆ ಒಳಪಟ್ಟಿದೆ ಎಂದು ಅಧಿಕಾರಿಗಳು ತಿಳಿಸಿರುವುದಾಗಿ ವರದಿಯಾಗಿದೆ. ಅಷ್ಟೇ ಅಲ್ಲದೇ ಯೆಸ್ ಬ್ಯಾಂಕ್ನಿಂದ 2017ರಿಂದ 2019ರವರೆಗೆ ಅಕ್ರಮವಾಗಿ ಸಾಲ ಪಡೆದಿವುದು ಬಹಿರಂಗವಾಗಿದೆ.
ಇ.ಡಿ. ನೋಟಿಸ್ ಜಾರಿಯಾದ ನಂತರ ಪ್ರತಿಕ್ರಿಯಿಸಿದ್ದ ರಿಲಯನ್ಸ್ ಪವರ್ ಮತ್ತು ರಿಲಯನ್ಸ್ ಇನ್ಫ್ರಾಸ್ಟ್ರಕ್ಚರ್, ಇದರಿಂದಾಗಿ ತಮ್ಮ ಉದ್ಯಮಗಳ ಕಾರ್ಯಾಚರಣೆ ಮತ್ತು ಆರ್ಥಿಕ ಪ್ರದರ್ಶನ, ಷೇರುದಾರರು, ಉದ್ಯಮಿಗಳು ಅಥವಾ ಇತರೆ ಸಾರ್ವಜನಿಕ ಸಂಸ್ಥೆಗಳ ಮೇಲೆ ಯಾವುದೇ ರೀತಿಯ ಪರಿಣಾಮ ಉಂಟಾಗುವುದಿಲ್ಲ ಎಂದು ತಿಳಿಸಿದೆ

ನೋಡಿರಿ

