ಶ್ರಾವಣ ಮಾಸದಲ್ಲಿ ಯಾಕೆ ಮಾಂಸಾಹಾರ ಸೇವಿಸಲ್ಲ – ಪುರಾಣ ಮತ್ತು ವೈಜ್ಞಾನಿಕ ಕಾರಣವೇನು?

ಬಹುತೇಕ ಮನೆಗಳಲ್ಲಿ ಶ್ರಾವಣ ಮಾಸದಲ್ಲಿ ಮಾಂಸಾಹಾರವನ್ನು ಸೇವಿಸಲಾಗುವುದಿಲ್ಲ. ಕೇವಲ ತರಕಾರಿ, ಹಣ್ಣು ಹಂಪಲುಗಳನ್ನೇ ಸೇವಿಸುತ್ತಾರೆ. ಹಾಗಿದ್ರೆ ಯಾಕೆ ಶ್ರಾವಣ ಮಾಂಸ ಸೇವಿಸಲ್ಲ ಅನ್ನೋದ್ದನ್ನ ಈ ಲೇಖನದಲ್ಲಿ ತಿಳಿಯೋಣ..
ಶ್ರಾವಣ ಬಂದ್ರೆ ಸಾಕಷ್ಟು ಕೋಳಿ, ಕುರಿಗಳ ಪ್ರಾಣ ಉಳಿಯುತ್ತೆ. ಶ್ರಾವಣ ಮಾಸ ಬಂದ್ರೆ ಮಾಂಸಾಹಾರ ಪ್ರಿಯರಿಗೆ ಬೇಸರವಾಗುತ್ತದೆ. ಇದಕ್ಕೆ ಕಾರಣ ಸಾಮಾನ್ಯವಾಗಿ ಹಿಂದೂ ಸಂಪ್ರದಾಯವನ್ನು ಅನುಸರಿಸುವ ಬಹುತೇಕ ಮನೆಗಳಲ್ಲಿ ಈ ತಿಂಗಳಲ್ಲಿ ಕೇವಲ ತರಕಾರಿ, ಹಣ್ಣು ಹಂಪಲುಗಳನ್ನೇ ಅಡುಗೆಗೆ ಬಳಸಲಾಗುತ್ತದೆ. ಶ್ರಾವಣ ಮಾಸದಲ್ಲಿ ಬಹುತೇಕ ಮನೆಗಳಲ್ಲಿ ಮಾಂಸಾಹಾರ ಸೇವನೆ ನಿಷಿದ್ಧ ಎಂದು ಪರಿಗಣಿಸಲಾಗುತ್ತದೆ. ಇದು ಒಂದು ಧಾರ್ಮಿಕ ನಂಬಿಕೆಯಾದರೂ ಇದರ ಹಿಂದೆ ವೈಜ್ಞಾನಿಕವಾದ ಹಲವಾರು ಕಾರಣಗಳೂ ಇವೆ.
ಶ್ರಾವಣ ಮಾಸವನ್ನು ಅತ್ಯಂತ ಪವಿತ್ರ ತಿಂಗಳು ಎಂದು ಪರಿಗಣಿಸಿರುವುದರಿಂದ ಈ ಮಾಸದಲ್ಲಿ ಮಾಂಸಾಹಾರಿಗಳು ಸಂಪೂರ್ಣವಾಗಿ ಮಾಂಸಾಹಾರವನ್ನು ತ್ಯಜಿಸುತ್ತಾರೆ. ಇದಕ್ಕೆ ಕಾರಣ ನಂಬಿಕೆ ಮತ್ತು ಗೌರವ. ಪುರಾತನ ಧರ್ಮಗ್ರಂಥಗಳಲ್ಲಿ ಮಾಂಸಾಹಾರವನ್ನು ಖಂಡಿಸಲಾಗಿದೆ. ಭಗವದ್ಗೀತೆಯಲ್ಲಿ ಶ್ರೀಕೃಷ್ಣನು ತನಗೆ ಒಂದು ಎಲೆ, ಹೂವು, ಹಣ್ಣು ಅಥವಾ ನೀರನ್ನು ಪ್ರೀತಿ ಮತ್ತು ಭಕ್ತಿಯಿಂದ ಅರ್ಪಿಸಿದರೆ ಸಾಕು ನಾನು ಅದನ್ನು ಸ್ವೀಕರಿಸುತ್ತೇನೆ ಎಂದಿದ್ದಾನೆ. ಹೀಗಾಗಿ ಪವಿತ್ರವಾದ ತಿಂಗಳಲ್ಲಿ ದೇವರ ಕೃಪೆ ಪಡೆಯಲು ಬಹುತೇಕ ಎಲ್ಲರೂ ಮಾಂಸಾಹಾರವನ್ನು ತ್ಯಜಿಸುತ್ತಾರೆ.
ವೈಜ್ಞಾನಿಕ ಕಾರಣ ನೋಡೋದಾದ್ರೆ ಶ್ರಾವಣ ಮಾಸ ಮಳೆಗಾಲದಲ್ಲಿ ಬರುತ್ತದೆ. ಮಳೆಗಾಲದಲ್ಲಿ ಭೂಮಿ ಮೇಲೆ ಸೂರ್ಯನ ಬೆಳಕು ಕಡಿಮೆ ಬೀಳುತ್ತದೆ. ಹೀಗಾಗಿ ನಮ್ಮ ಜೀರ್ಣಾಂಗ ವ್ಯವಸ್ಥೆಯು ದುರ್ಬಲವಾಗುತ್ತದೆ. ಅದಕ್ಕೆ ಮಾಂಸಾಹಾರವನ್ನು ಅರಗಿಸಿಕೊಳ್ಳುವ ಸಾಮರ್ಥ್ಯ ಇರುವುದಿಲ್ಲ. ಹೀಗಾಗಿ ಶ್ರಾವಣ ಮಾಸದಲ್ಲಿ ಉಪವಾಸ ಮಾಡುವವರು ಜೀರ್ಣವಾಗಲು ಸುಲಭವಾಗುವ ಹಣ್ಣು, ತರಕಾರಿಗಳನ್ನು ತಮ್ಮ ಆಹಾರದಲ್ಲಿ ಆಯ್ದುಕೊಳ್ಳುತ್ತಾರೆ. ಮಳೆಗಾಲದಲ್ಲಿ ಹಲವು ರೋಗಗಳು ನೀರಿನಿಂದ ಹರಡುತ್ತದೆ. ಇದು ಬಹುಬೇಗನೆ ಪ್ರಾಣಿ, ಪಕ್ಷಿಗಳ ಮೇಲೆ ದಾಳಿ ಮಾಡುತ್ತವೆ. ಅವುಗಳಿಂದ ಸೋಂಕು ನಮಗೆ ಬಾರದಂತೆ ತಡೆಯಲು ಮಾಂಸಾಹಾರ ತಪ್ಪಿಸುವುದು ಒಳ್ಳೆಯದು.
ಇನ್ನು ಮಳೆಗಾಲದಲ್ಲಿ ಮೀನು ಮತ್ತು ಇತರ ಜಲಚರಗಳು ಸಂತಾನೋತ್ಪತ್ತಿ ಸಮಯವಾಗಿದೆ. ಈ ಸಮಯದಲ್ಲಿ ಜಲಚರ ಜೀವಿಗಳನ್ನು ತಿನ್ನುವುದರಿಂದ ಅವುಗಳ ಸಂತಾನೋತ್ಪತ್ತಿ ಕುಂಠಿತವಾಗುತ್ತದೆ. ಹೀಗಾಗಿ ಶ್ರಾವಣ ಮಾಸದಲ್ಲಿ ಮೀನು ಮತ್ತು ಇತರ ರೀತಿಯ ಸಮುದ್ರಾಹಾರಗಳನ್ನು ತಿನ್ನುವುದನ್ನು ನಿಷೇಧಿಸಲಾಗಿದೆ.

ನೋಡಿರಿ

