ಸಾಯಬೇಕು ಅನ್ನುವಷ್ಟು ನೋವಾಗಿದೆ ಎಂದ ಸ್ಟಾರ್ ಕ್ರಿಕೆಟರ್ – ಪತ್ನಿಯಿಂದ ದೂರಾಗಿದ್ಯಾಕೆ ಎಂಬ ವಿಚಾರ ತಿಳಿಸಿದ ಯುಜ್ವೇಂದ್ರ ಚಾಹಲ್

ಸಾಯಬೇಕು ಅನ್ನುವಷ್ಟು ನೋವಾಗಿದೆ ಎಂದ ಸ್ಟಾರ್ ಕ್ರಿಕೆಟರ್ – ಪತ್ನಿಯಿಂದ ದೂರಾಗಿದ್ಯಾಕೆ ಎಂಬ ವಿಚಾರ ತಿಳಿಸಿದ ಯುಜ್ವೇಂದ್ರ ಚಾಹಲ್

ಭಾರತದ ಕ್ರಿಕೆಟರ್ ಯುಜ್ವೇಂದ್ರ ಚಾಹಲ್ ಪತ್ನಿ ಧನಶ್ರೀ ವರ್ಮಾ ಜೊತೆ ಡಿವೋರ್ಸ್ ಆದರೂ ಈ ಬಗ್ಗೆ ಎಲ್ಲೂ ಮುಕ್ತವಾಗಿ ಮಾತಾಡಿರಲಿಲ್ಲ. ಇದೀಗ ಮೊದಲ ಬಾರಿಗೆ ಚಾಹಲ್ ಮನಬಿಚ್ಚಿ ಮಾತನಾಡಿದ್ದಾರೆ. ಮೊದಲ ಬಾರಿಗೆ ತಮ್ಮ ಮಾನಸಿಕ ಆರೋಗ್ಯದ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಧನಶ್ರೀಯಿಂದ ವಿಚ್ಛೇದನ ಪಡೆದಾಗ ಮೋಸಗಾರ ಎಂದು ಕರೆದವರಿಗೂ ಉತ್ತರ ನೀಡಿದ್ದಾರೆ. ಜೊತೆಗೆ ವಿನಾಕಾರಣ ಆರೋಪಗಳಿಂದ ಮಾನಸಿಕ ವೇದನೆ, ಜೊತೆಗೆ ಆತ್ಮಹತ್ಯೆಯ ಯೋಚನೆಯ ಬಗ್ಗೆ ಮನಕಲಕುವ ವಿಚಾರವನ್ನ ತೆರೆದಿಟ್ಟಿದ್ದಾರೆ.

ಇದನ್ನೂ ಓದಿ:ಆಂಗ್ಲರ ಜೊತೆ ಅಂಪೈರ್ ಡೀಲ್? – ಸಿಗ್ನಲ್ ಕೊಟ್ಟು DRS ತಡೆದ್ರಾ?

ಭಾರತ ಕ್ರಿಕೆಟ್ ತಂಡದ ಸ್ಟಾರ್ ಸ್ಪಿನ್ನರ್ ಯುಜ್ವೇಂದ್ರ ಚಾಹಲ್ ,ಧನಶ್ರೀ ವರ್ಮಾ ಅವರಿಂದ ವಿಚ್ಛೇದನ ಪಡೆದ ಮೇಲೆ, ಪಡೆಯುವ ಮೊದಲು ತನಗಾದ ಮಾನಸಿಕ ವೇದನೆಯನ್ನು ಮೊದಲ ಬಾರಿಗೆ ವಿವರಿಸಿದ್ದಾರೆ. ಧನಶ್ರೀ ಅವರಿಂದ ವಿಚ್ಛೇದನ ಪಡೆದ ನಂತರ ಕೆಲವರು ಇವರನ್ನು ಮೋಸಗಾರ ಎಂದು ಕರೆದಿದ್ದರು. ಇದೀಗ ಚಾಹಲ್ ಇತ್ತೀಚಿನ ಸಂದರ್ಶನದಲ್ಲಿ, ತಮ್ಮ ಮಾನಸಿಕ ಆರೋಗ್ಯದ ಬಗ್ಗೆ ಮಾತನಾಡಿದ್ದಾರೆ ಮತ್ತು ಆ ಸಮಯದಲ್ಲಿ ನಾನು ಆತ್ಮಹತ್ಯೆ ಮಾಡಿಕೊಳ್ಳ ಬೇಕು ಎಂದು ಆಲೋಚಿಸುತ್ತಿದ್ದೆ ಎಂಬ ಆಘಾತಕಾರಿ ವಿಚಾರ ಹೇಳಿದ್ದಾರೆ.

ಧನಶ್ರೀ ವರ್ಮಾ ಅವರಿಂದ ವಿಚ್ಛೇದನದ ನಂತರ ತಮ್ಮನ್ನು ವಂಚಕ ಎಂದು ತಪ್ಪಾಗಿ ಹಣೆಪಟ್ಟಿ ಕಟ್ಟಲಾಗಿದೆ. ನನ್ನನ್ನು ಮೋಸಗಾರ ಎಂದು ಕರೆಯಲಾಯಿತು, ಆದರೆ ನಾನು ಜೀವನದಲ್ಲಿ ಎಂದಿಗೂ ಮೋಸ ಮಾಡಲಿಲ್ಲ. ನಾನು ಅತ್ಯಂತ ನಿಷ್ಠಾವಂತ ವ್ಯಕ್ತಿ. ನನ್ನಂತಹ ನಿಷ್ಠಾವಂತ ವ್ಯಕ್ತಿಯನ್ನು ನೀವು ಎಲ್ಲಿಯೂ ಕಾಣುವುದಿಲ್ಲ. ನಾನು ನನ್ನೊಂದಿಗಿರುವ ಜನರ ಬಗ್ಗೆ ತುಂಬಾ ಕಾಳಜಿ ವಹಿಸುತ್ತೇನೆ. ನನಗೆ ಇಬ್ಬರು ಸಹೋದರಿಯರಿದ್ದಾರೆ, ಆದ್ದರಿಂದ ಮಹಿಳೆಯರನ್ನು ಹೇಗೆ ಗೌರವಿಸಬೇಕೆಂದು ನನಗೆ ತಿಳಿದಿದೆ. ನನಗೆ ಅತ್ಯಂತ ನೋವುಂಟುಮಾಡುವ ವಿಷಯವೆಂದರೆ ಜನರು ನನ್ನ ಇಡೀ ಕಥೆಯನ್ನು ತಿಳಿಯದೆಯೇ ಅವರಿಗೆ ಅನಿಸಿದ್ದನ್ನ ಬರೆಯುತ್ತಾರೆ ಎಂದು ಹೇಳಿದ್ದಾರೆ.

ತಮ್ಮ ವಿಚ್ಛೇದನಕ್ಕೆ ಕಾರಣವನ್ನು ನೀಡಿದ ಚಾಹಲ್, ಒಟ್ಟಿಗೆ ಉತ್ತಮ ಸಮಯ ಕಳೆಯಲು ಸಾಧ್ಯವಾಗದ ಕಾರಣ ಅಂತರ ಹೆಚ್ಚಾಯಿತು ಎಂದು ಹೇಳಿದರು. ಎರಡೂ ಕಡೆಯಿಂದ ರಾಜಿ ಅಗತ್ಯವಾಗಿದ್ದರೂ, ಕೆಲವೊಮ್ಮೆ ಭಿನ್ನಾಭಿಪ್ರಾಯಗಳಿಂದಾಗಿ ಎಲ್ಲವೂ ಹಾಳಾಗುತ್ತದೆ ಎಂದು ಹೇಳಿದರು. ತಾವು ಮತ್ತು ಧನಶ್ರೀ ಇಬ್ಬರೂ ತಮ್ಮ ತಮ್ಮ ವೃತ್ತಿಜೀವನದಲ್ಲಿ ಬ್ಯುಸಿಯಾಗಿದ್ದೇವೆ. ಇದರಿಂದಾಗಿ, ಕಳೆದ ಕೆಲವು ವರ್ಷಗಳಿಂದ ಇಬ್ಬರ ನಡುವಿನ ಉದ್ವಿಗ್ನತೆ ಹೆಚ್ಚಾಗಿದ್ದು, ಅದು ಕ್ರಮೇಣ ಸಂಬಂಧದ ಮೇಲೆ ಪರಿಣಾಮ ಬೀರುತ್ತಿತ್ತು ಎಂದು ಹೇಳಿದರು. “ನಾನು ನಾಲ್ಕೈದು ತಿಂಗಳುಗಳಿಂದ ತುಂಬಾ ಖಿನ್ನತೆಯಲ್ಲಿದ್ದೆ. ನನಗೆ ತುಂಬಾ ಆತಂಕ ಆಗುತ್ತಿತ್ತು. ನನ್ನ ಕಣ್ಣುಗಳಲ್ಲಿ ಕತ್ತಲೆ ಆವರಿಸುತ್ತಿತ್ತು. ಆ ಸಮಯದಲ್ಲಿ ನನ್ನೊಂದಿಗಿದ್ದ ಕೆಲವೇ ಜನರಿಗೆ ಈ ವಿಷಯಗಳು ತಿಳಿದಿದ್ದವು. ಇದಲ್ಲದೆ, ನಾನು ಈ ವಿಷಯಗಳನ್ನು ಯಾರೊಂದಿಗೂ ಹಂಚಿಕೊಳ್ಳಲಿಲ್ಲ. ಈ ಸಮಯದಲ್ಲಿ, ನಾನು ಆತ್ಮಹತ್ಯೆ ಮಾಡಿಕೊಳ್ಳುವ ಬಗ್ಗೆಯೂ ಯೋಚಿಸುತ್ತಿದ್ದೆ, ಏಕೆಂದರೆ ಆಗ ನನ್ನ ಮೆದುಳು ಸಂಪೂರ್ಣವಾಗಿ ಕೆಲಸ ಮಾಡುವುದನ್ನು ನಿಲ್ಲಿಸಿತ್ತು ಎಂದು ಚಾಹಲ್ ಹೇಳಿದ್ದಾರೆ. ಜೀವನದಲ್ಲಿ ಎಲ್ಲಾ ಸೌಲಭ್ಯಗಳನ್ನು ಹೊಂದಿದ್ದರೂ, ನಾನು ಖಾಲಿತನ ಅನುಭವಿಸುತ್ತಿದ್ದೆ. ನಿಮ್ಮ ಜೀವನದಲ್ಲಿ ಎಲ್ಲವೂ ಇದೆ, ಎಲ್ಲಾ ಸೌಕರ್ಯಗಳಿವೆ, ಆದರೆ ನಿಮಗೆ ಸಂತೋಷವಿರದಿದ್ದರೆ ಏನೂ ಇಲ್ಲ ಎಂದು ಅವರು ಹೇಳಿದರು.

2024ರ T20 ವಿಶ್ವಕಪ್ ಸಮಯದಲ್ಲಿ ಚಾಹಲ್ ಕ್ರಿಕೆಟ್‌ನಿಂದ ದೂರವಿದ್ದ ಬಗ್ಗೆ ಮಾತನಾಡಿ. ‘ನನಗೆ ಕ್ರಿಕೆಟ್‌ನಿಂದ ಒಂದು ವಿರಾಮ ಬೇಕಿತ್ತು. ಈ ಹಿಂದೆ ಹೀಗಾದಾಗ, ನಾನು ತುಂಬಾ ಬ್ಯುಸಿಯಾಗಿದ್ದೆ. ನನಗೆ ಗಮನಹರಿಸಲು ಸಾಧ್ಯವಾಗುತ್ತಿರಲಿಲ್ಲ. ಮೈದಾನದಲ್ಲಿ ಆಡುವಾಗಲೂ, ಈ ವಿಷಯಗಳು ನನ್ನ ಮನಸ್ಸಿನಲ್ಲಿ ಓಡಾಡುತ್ತಿದ್ದವು. ವಿಚ್ಛೇದನ ಮತ್ತು ನೂರಾರು ಬೇರೆ ವಿಷಯಗಳು ತಲೆಯಲ್ಲಿ ತುಂಬಿದ್ದವು. ಒಂದು ತಿಂಗಳು ನಾನು ಕೇವಲ ಎರಡು ಗಂಟೆ ನಿದ್ರೆ ಮಾಡುತ್ತಿದ್ದೆ. ಉಳಿದ ದಿನ ನನ್ನ ಸ್ನೇಹಿತರೊಂದಿಗೆ ಮಾತನಾಡುತ್ತಿದ್ದೆ. ನನ್ನ ಆತಂಕವನ್ನು ಅವರಿಗೆ ಹೇಳಿಕೊಳ್ಳುತ್ತಿದ್ದೆ. ಆತ್ಮಹತ್ಯೆಯ ಆಲೋಚನೆಗಳು ಬರುತ್ತಿದ್ದುದನ್ನೂ ಅವರೊಂದಿಗೆ ಹಂಚಿಕೊಳ್ಳುತ್ತಿದ್ದೆ’ ಎಂದು ಚಾಹಲ್ ಹೇಳಿದರು.

ಇದೇ ಫಸ್ಟ್ ಟೈಂ ಮನಬಿಚ್ಚಿ ಮಾತನಾಡಿದ ಚಾಹಲ್, ‘ಸಂಬಂಧವೆಂದರೆ ಹೊಂದಾಣಿಕೆ. ಒಬ್ಬರು ಸಿಟ್ಟಾದರೆ, ಇನ್ನೊಬ್ಬರು ಸಮಾಧಾನಪಡಿಸಬೇಕು. ಕೆಲವೊಮ್ಮೆ ಇಬ್ಬರು ವ್ಯಕ್ತಿಗಳ ಸ್ವಭಾವವೂ ಹೊಂದಿಕೆ ಆಗುವುದಿಲ್ಲ. ನಾನು ಭಾರತಕ್ಕಾಗಿ ಆಡುತ್ತಿದ್ದೆ, ಅವಳು ಕೂಡ ತನ್ನ ಕೆಲಸದಲ್ಲಿ ಬ್ಯುಸಿಯಾಗಿದ್ದಳು. ಒಂದೆರಡು ವರ್ಷಗಳ ಕಾಲ ಇದು ಹೀಗೇ ನಡೆಯಿತು. ನಾನು ನನ್ನ ಜೀವನದಿಂದ ಬೇಸತ್ತಿದ್ದೆ. ಪ್ರತಿದಿನ ಅದೇ ವಿಷಯಗಳು, ಅದೇ ಆತಂಕ. ದಿನದಲ್ಲಿ ಎರಡು ಗಂಟೆ ಅಳುವುದು, 2-3 ಗಂಟೆ ನಿದ್ರೆ. ಹೀಗಿರುವುದಕ್ಕಿಂತ ಸಾಯುವುದೇ ಮೇಲು ಎಂದು ಅನಿಸಿತು. ಈ ರೀತಿಯ ಆಲೋಚನೆಗಳು ಮೊದಲೆಲ್ಲ ತಿಂಗಳಿಗೆ 1-2 ಬಾರಿ ಬರುತ್ತಿದ್ದವು. ನಾನು ಕ್ರಿಕೆಟ್‌ನಿಂದ ವಿರಾಮ ತೆಗೆದುಕೊಂಡಾಗ ಹೀಗೆಲ್ಲಾ ಆಯಿತು. ಇಂತಹ ಪರಿಸ್ಥಿತಿ ನನ್ನ ಶತ್ರುಗಳಿಗೂ ಬರಬಾರದು’ ಎಂದು ಚಾಹಲ್ ಭಾವುಕರಾಗಿ ಹೇಳಿದ್ದಾರೆ.

Sulekha