ಸಂಸದ ಪ್ರಜ್ವಲ್ ರೇವಣ್ಣ ಭವಿಷ್ಯ ಇಂದು ನಿರ್ಧಾರ – 14 ತಿಂಗಳ ಸೆರೆವಾಸಕ್ಕೆ ಮುಕ್ತಿ ಸಿಗುತ್ತಾ?

ಅತ್ಯಾಚಾರ ಪ್ರಕರಣದಲ್ಲಿ ಅಂದರ್ ಆಗಿರೋ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ಭವಿಷ್ಯ ಇಂದು ನಿರ್ಧಾರ ಆಗಲಿದೆ. 26 ಸಾಕ್ಷಿಗಳ ವಿಚಾರಣೆ ನಡೆಸಿರುವ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಈ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣ ದೋಷಿಯೋ ಅಥವಾ ಅಲ್ಲವೋ ಎಂದು ತೀರ್ಪು ನೀಡಲಿದೆ. ಕಳೆದ 14 ತಿಂಗಳಿನಿಂದ ಸೆರೆವಾಸದಲ್ಲಿರುವ ಪ್ರಜ್ವಲ್ ರೇವಣ್ಣ ಅವರ ರಾಜಕೀಯ ಭವಿಷ್ಯದ ದೃಷ್ಟಿಯಿಂದಲೂ ಈ ತೀರ್ಪು ಮಹತ್ವದ್ದಾಗಲಿದೆ.
ಸರಣಿ ಅತ್ಯಾಚಾರ ಆರೋಪ ಹೊತ್ತು ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಬಂಧನಕ್ಕೊಳಗಾಗಿ 14 ತಿಂಗಳು ಕಳೆದಿವೆ. ಮೂರು ಅತ್ಯಾಚಾರ ಪ್ರಕರಣ, ಒಂದು ಲೈಂಗಿಕ ದೌರ್ಜನ್ಯ ಹೀಗೆ ಒಟ್ಟು ನಾಲ್ಕು ಪ್ರಕರಣಗಳ ಪೈಕಿ ಒಂದು ಪ್ರಕರಣ ಈಗ ನಿರ್ಣಾಯಕ ಹಂತ ತಲುಪಿದ್ದು, ಇಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಪ್ರಜ್ವಲ್ ರೇವಣ್ಣ ಅವರ ಹಣೆಬರಹ ಬರೆಯಲಿದೆ.
ಕಳೆದ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾಗಿರುವ ಅಶ್ಲೀಲ ದೃಶ್ಯವಿದ್ದ ಪೆನ್ ಡ್ರೈವ್ಗಳನ್ನು ಹಾಸನ ಕ್ಷೇತ್ರ ಬೀದಿ ಬೀದಿಗಳಲ್ಲಿ ಹಂಚಲಾಗಿತ್ತು. ಹೊಳೆನರಸೀಪುರದ ಮಹಿಳೆಯೊಬ್ಬರು ನೀಡಿದ್ದ ದೂರಿನ ಆಧಾರದ ತನಿಖೆ ಆರಂಭವಾಯಿತು. ಪ್ರಕರಣ ಸಂಬಂಧ 2024ರ ಮೇ 31ರಂದು ಪ್ರಜ್ವಲ್ ರೇವಣ್ಣ ಅವರನ್ನು ಪೊಲೀಸರು ಬಂಧಿಸಿದ್ದರು. ಬಳಿಕ, ಕೆ.ಆರ್.ನಗರದ ಮನೆ ಕೆಲಸದ ಮಹಿಳೆ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಅತ್ಯಾಚಾರ ಪ್ರಕರಣ ದಾಖಲಿಸಿಕೊಂಡಿದ್ದರು.
ತನಿಖೆ ನಡೆಸಿದ ಎಸ್‌ಐಟಿ ಆರೋಪಪಟ್ಟಿ ಸಲ್ಲಿಸಿತ್ತು. ಇದಾದ ಬಳಿಕ 2024ರ ಡಿಸೆಂಬರ್ 30ರಂದು ಕೇಸ್ ಮ್ಯಾಜಿಸ್ಟ್ರೇಟ್ ಕೋರ್ಟ್ನಿಂದ ಜನಪ್ರತಿನಿಧಿಗಳ ವಿಶೇಷ ಕೋರ್ಟ್ಗೆ ವರ್ಗಾವಣೆಯಾಗಿತ್ತು. ಕೇಸ್ ವರ್ಗಾವಣೆಯಾದ ಕೇವಲ 7 ತಿಂಗಳಿನಲ್ಲಿ ಸಾಕ್ಷ್ಯ ವಿಚಾರಣೆ ಪೂರ್ಣಗೊಳಿಸಿದ ಜಡ್ಜ್ ಸಂತೋಷ್ ಗಜಾನನ ಭಟ್ ಅವರು ತೀರ್ಪು ಕಾಯ್ದಿರಿಸಿದ್ದಾರೆ.
2021 ರ ಕೋವಿಡ್ ಸಂದರ್ಭದಲ್ಲಿ ಹೊಳೆನರಸೀಪುರದ ಗನ್ನಿಕಾಡಾದ ಫಾರ್ಮ್ಹೌಸ್ನಲ್ಲಿದ್ದ ಪ್ರಜ್ವಲ್ ರೇವಣ್ಣ ಮನೆಕೆಲಸಕ್ಕೆ ನೇಮಕವಾಗಿದ್ದ ಮಹಿಳೆಯನ್ನು ನೀರು ತರುವ ನೆಪದಲ್ಲಿ 1ನೇ ಮಹಡಿಗೆ ಕರೆಸಿಕೊಂಡು ಬಲವಂತವಾಗಿ ಅತ್ಯಾಚಾರ ನಡೆಸಿದ್ದಾರೆ. ಬೆಂಗಳೂರಿನ ಬಸವನಗುಡಿಯ ಮನೆ ಕ್ಲೀನ್ ಮಾಡಬೇಕೆಂದು ಪ್ರಜ್ವಲ್ ತಾಯಿ ಭವಾನಿ ರೇವಣ್ಣ ಸೂಚನೆ ಮೇರೆಗೆ ಬಂದಿದ್ದಾಗಲೂ 3ನೇ ಮಹಡಿಗೆ ಕರೆಸಿಕೊಂಡು ಅತ್ಯಾಚಾರ ಮಾಡಿದ್ದಲ್ಲದೇ ಅದನ್ನು ಮೊಬೈಲ್ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದಾರೆ ಅನ್ನೋ ಆರೋಪ ಪ್ರಜ್ವಲ್ ರೇಣವಣ್ಣ ಮೇಲೆ ಇದೆ.
ನಂತರ ಸಾಕ್ಷ್ಯ ನಾಶ ಮಾಡುವ ಉದ್ದೇಶದಿಂದ ರೆಕಾರ್ಡ್ ಮಾಡಿಕೊಂಡ ಮೊಬೈಲ್ ನಾಶಪಡಿಸಿದ್ದಾರೆ. ಈ ವಿಚಾರವನ್ನು ಯಾರಿಗೂ ತಿಳಿಸದಂತೆ ಮಹಿಳೆಗೆ ಜೀವ ಬೆದರಿಕೆಯನ್ನೂ ಹಾಕಿದ್ದಾರೆ. ಘಟನೆಗೆ ಸಾಕ್ಷಿಯಾಗಿ ಮೊಬೈಲ್ನಲ್ಲಿ ಚಿತ್ರೀಕರಿಸಿದ ವಿಡಿಯೋ, ಸಂತ್ರಸ್ತೆಯ ಹೇಳಿಕೆ, ಆಕೆಯ ಒಳ ಉಡುಪಿನಲ್ಲಿ ಪ್ರಜ್ವಲ್ ರೇವಣ್ಣನ ವೀರ್ಯದ ಕಲೆ ಪತ್ತೆಯಾಗಿದೆ. ಹೀಗಾಗಿ ಇಂದು ಬರೋ ತೀರ್ಪು ಪ್ರಜ್ವಲ್ ರೇವಣ್ಣ ಭವಿಷ್ಯ ನಿರ್ಧಾರ ಮಾಡಲಿದೆ.
ಗನ್ನಿಕಾಡಾದ ಫಾರ್ಮ್ ಹೌಸ್ ಪ್ರಜ್ವಲ್ ರೇವಣ್ಣಗೆ ಸೇರಿದ್ದಲ್ಲ. ಅಲ್ಲಿ ಮೊದಲನೇ ಮಹಡಿಯೇ ಇರಲಿಲ್ಲ, ಆ ಫಾರ್ಮ್ ಹೌಸ್ನಲ್ಲಿ ಮಹಿಳೆ ಕೆಲಸದಲ್ಲಿರಲಿಲ್ಲ, ಮಹಿಳೆ ಕೆ.ಆರ್.ನಗರದ ತನ್ನ ಮನೆಯಲ್ಲಿದ್ದರು. ಬೆಂಗಳೂರಿನ ಬಸವನಗುಡಿಯ ಮನೆಯೂ ಪ್ರಜ್ವಲ್ ರೇವಣ್ಣಗೆ ಸೇರಿದ್ದಲ್ಲ. ಹೀಗಾಗಿ, ಅಲ್ಲಿ ಇಂತಹ ಕೃತ್ಯ ನಡೆದೇ ಇಲ್ಲ. ಅತ್ಯಾಚಾರ ಪ್ರಕರಣದಲ್ಲಿ ಸಿಲುಕಿಸಲು ನಕಲಿ ದಾಖಲೆಗಳನ್ನು ಸೃಷ್ಟಿಸಲಾಗಿದೆ. ರಾಜಕೀಯ ವೈಷಮ್ಯದಿಂದ ಕೇಸ್ ದಾಖಲಿಸಲಾಗಿದೆ. ಹೀಗಾಗಿ ಪ್ರಕರಣದಿಂದ ಖುಲಾಸೆಗೊಳಿಸಬೇಕು ಎಂದು ವಾದ ಮಂಡಿಸಿದ್ದಾರೆ.

ನೋಡಿರಿ

