ಸ್ವಾತಂತ್ರ್ಯ ಹೋರಾಟದಲ್ಲಿ ಬಿಜೆಪಿ ಯಾರನ್ನೂ ಕಳೆದುಕೊಂಡಿಲ್ಲ – ಖರ್ಗೆ ಹೇಳಿಕೆಗೆ ಬಿಜೆಪಿ ಕೆಂಡಾಮಂಡಲ

ಸ್ವಾತಂತ್ರ್ಯ ಹೋರಾಟದಲ್ಲಿ ಬಿಜೆಪಿ ಯಾರನ್ನೂ ಕಳೆದುಕೊಂಡಿಲ್ಲ – ಖರ್ಗೆ ಹೇಳಿಕೆಗೆ ಬಿಜೆಪಿ ಕೆಂಡಾಮಂಡಲ

ನವದೆಹಲಿ: ಭಾರತ್ ಜೋಡೋ ಯಾತ್ರೆಯಲ್ಲಿ ‘ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಕಾಂಗ್ರೆಸ್ ಹಲವಾರು ತ್ಯಾಗಗಳನ್ನು ಮಾಡಿದೆ. ಆದರೆ ಬಿಜೆಪಿ ಯಾರೊಬ್ಬರನ್ನೂ ಕಳೆದುಕೊಂಡಿಲ್ಲ’ ಎಂದು    ಮಲ್ಲಿಕಾರ್ಜುನ ಖರ್ಗೆ ಹೇಳಿದ್ದರು. ಈ ಹೇಳಿಕೆಯನ್ನು ಖಂಡಿಸಿದ ಆಡಳಿತಾರೂಢ ಬಿಜೆಪಿ, ಕಾಂಗ್ರೆಸ್ ಮುಖ್ಯಸ್ಥರು ಕ್ಷಮೆಯಾಚಿಸಬೇಕು ಎಂದು ಸಂಸತ್​​​ನಲ್ಲಿ ಪಟ್ಟು ಹಿಡಿದೆ.

ರಾಜಸ್ಥಾನದ ಅಲ್ವಾರ್​​ನಲ್ಲಿ ಭಾರತ್ ಜೋಡೋ ಯಾತ್ರೆಯಲ್ಲಿ ಪಾಲ್ಗೊಂಡಿದ್ದ ವೇಳೆ ಮಾತನಾಡಿದ ಖರ್ಗೆ, ‘ಕಾಂಗ್ರೆಸ್ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿತು. ತಮ್ಮ ಪಕ್ಷದ ನಾಯಕರಾದ ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ ಪ್ರಾಣವನ್ನು ಕಳೆದುಕೊಂಡರು. ದೇಶಕ್ಕಾಗಿ ನಿಮ್ಮ ಮನೆಯ ನಾಯಿಯಾದರೂ ಸತ್ತಿದೆಯಾ?, ಆದರೂ ಬಿಜೆಪಿಯವರು ತಮ್ಮನ್ನು ತಾವು ದೇಶಭಕ್ತರು ಅಂದುಕೊಳ್ಳುತ್ತಾರೆ. ನಾವು ಏನಾದರೂ ಹೇಳಿದರೆ ನಮ್ಮನ್ನು ದೇಶದ್ರೋಹಿ ಅಂತಾರೆ ಎಂದಿದ್ದರು.

ಇದನ್ನೂ ಓದಿ: ‘ದ್ವೇಷವೇ ಎಲ್ಲದಕ್ಕೂ ಉತ್ತರವಲ್ಲ’ -ದರ್ಶನ್ ಮೇಲೆ ಚಪ್ಪಲಿ ಎಸೆತಕ್ಕೆ ಕಿಚ್ಚ ಸುದೀಪ್ ಪ್ರತಿಕ್ರಿಯೆ

ಮಂಗಳವಾರ ಸಂಸತ್ ಅಧಿವೇಶನ ಆರಂಭವಾದ ಕೂಡಲೇ ಬಿಜೆಪಿ ಖರ್ಗೆಯವರು ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದೆ. ಖರ್ಗೆ ಕ್ಷಮೆಗೆ ಒತ್ತಾಯ ಹೆಚ್ಚಾಗಿ ಸದನದಲ್ಲಿ ಗದ್ದಲ ಸೃಷ್ಟಿಯಾಗುತ್ತಿದ್ದಂತೆ ಅದನ್ನು ನಿಯಂತ್ರಿಸಲು ಹೆಣಗಾಡಿದ ಉಪರಾಷ್ಟ್ರಪತಿ ಮತ್ತು ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧನ್ಖರ್, ಖರ್ಗೆಯವರು ಸಂಸತ್​​ನ ಹೊರಗಡೆ ಈ ಹೇಳಿಕೆ ನೀಡಿದ್ದಾರೆ. ದೇಶದ 135 ಕೋಟಿ ಜನರು ಇದನ್ನು ವೀಕ್ಷಿಸುತ್ತಿದ್ದಾರೆ. ಯಾರೋ ಹೊರಗಡೆ ಏನಾದರೂ ಹೇಳಿರುತ್ತಾರೆ. ಈ ಹೇಳಿಕೆ ಬಗ್ಗೆ ಗದ್ದಲ ಸೃಷ್ಟಿಸಲು ನೀವೇನೂ ಮಕ್ಕಳಲ್ಲ ಎಂದಿದ್ದಾರೆ.

ಏತನ್ಮಧ್ಯೆ, ಕ್ಷಮೆ ಕೇಳಲು ನಿರಾಕರಿಸಿದ ಖರ್ಗೆ, ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದವರಲ್ಲಿ ನೀವು ಕ್ಷಮೆ ಕೇಳಲು ಒತ್ತಾಯಿಸುತ್ತಿದ್ದೀರಾ ಎಂದು ಗುಡುಗಿದ್ದಾರೆ. ರಾಜಸ್ಥಾನದ ಅಲ್ವಾರ್​​ನಲ್ಲಿ ನಡೆದ ಭಾರತ್ ಜೋಡೋ ಯಾತ್ರೆ ವೇಳೆ ನಾನು ಹೇಳಿಕೆ ನೀಡಿದ್ದೆ.ನಾನು ಸಂಸತ್​​ನ ಹೊರಗಡೆ ಹೇಳಿದ್ದೇನೆಯೇ ಹೊರತು ಒಳಗಡೆ ಅಲ್ಲ. ಅದನ್ನು ಇಲ್ಲಿ ಚರ್ಚಿಸುವ ಅಗತ್ಯವಿಲ್ಲ. ಇನ್ನೊಂದು ಮಾತು, ನಾನು ಇನ್ನೂ ಅದನ್ನೇ ಒತ್ತಿ ಹೇಳುತ್ತೇನೆ. ಬಿಜೆಪಿಯವರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿರಲಿಲ್ಲ ಎಂದು ರಾಜ್ಯಸಭೆಯಲ್ಲಿ ಖರ್ಗೆ ಹೇಳಿದ್ದಾರೆ.

suddiyaana