ನಿರಂತರ 170 ಗಂಟೆ ಭರತನಾಟ್ಯ – ಮಂಗಳೂರಿನ ವಿದ್ಯಾರ್ಥಿನಿಯಿಂದ ವಿಶ್ವ ದಾಖಲೆ

ನಿರಂತರ 170 ಗಂಟೆ ಭರತನಾಟ್ಯ – ಮಂಗಳೂರಿನ ವಿದ್ಯಾರ್ಥಿನಿಯಿಂದ ವಿಶ್ವ ದಾಖಲೆ

ಸಾಧನೆ ಅಂದರೆ ಈ ವಿದ್ಯಾರ್ಥಿನಿಯ ರೀತಿ ಇರಬೇಕು. ತಾಳ್ಮೆ, ಶೃದ್ಧೆ, ಕಲೆ, ಎಲ್ಲವೂ ಇದ್ದಾಗ ಇಂಥಾದ್ದೊಂದು ಸಾಧನೆ ಮಾಡಬಹುದು. ಸಾಧಿಸುವ ಹಠ ಬಂದಾಗ ನಿದ್ದೆ, ಆಹಾರಕ್ಕೂ ಹೆಚ್ಚಿನ ಪ್ರಾಮುಖ್ಯತೆ ಇರೋದಿಲ್ಲ ಅನ್ನೋದನ್ನ ತೋರಿಸಿದ್ದಾರೆ ಮಂಗಳೂರಿನ ವಿದ್ಯಾರ್ಥಿನಿ ರೆಮೋನಾ ಪಿರೇರಾ. ಇವರು 170 ಗಂಟೆಗಳ ಕಾಲ ನಿರಂತರ ಭರತನಾಟ್ಯ ಪ್ರದರ್ಶಿಸುವ ಮೂಲಕ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಸೇಂಟ್ ಅಲೋಶಿಯಸ್ ಕಾಲೇಜಿನ ವಿದ್ಯಾರ್ಥಿನಿಯಾಗಿರುವ ರೆಮೋನಾ, ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಅಧಿಕಾರಿಗಳ ಸಮ್ಮುಖದಲ್ಲಿ ಈ ದಾಖಲೆಯ ಪ್ರದರ್ಶನ ನೀಡಿದ್ದಾರೆ.

ಇದನ್ನೂ ಓದಿ:D ಬಾಸ್ ಫ್ಯಾನ್ಸ್‌ಗೆ ರಮ್ಯಾ ‘ಚಾಲೆಂಜ್’ – ಕಮೆಂಟ್ ಮಾಡಿದವರಿಗೆ ಜೈಲೂಟ ಫಿಕ್ಸ್

ನಿರಂತರ 170 ಗಂಟೆ ಭರತನಾಟ್ಯ. ಇದು ಸಾಮಾನ್ಯ ಸಾಧನೆಯಂತೂ ಅಲ್ಲ. ಇಲ್ಲಿ ವಿದ್ಯಾರ್ಥಿನಿಯ ಕಠಿಣ ತಪಸ್ಸು. ಸಾಧಿಸುವ ಛಲ, ಗುರಿ ಮುಟ್ಟಲು ಬೇಕಾದ ಪರಿಶ್ರಮವಿದೆ. ಮಂಗಳೂರಿನ ಸೈಂಟ್ ಅಲೋಶಿಯಸ್ ಕಾಲೇಜಿನ ಅಂತಿಮ‌ ಬಿಎ ವಿದ್ಯಾರ್ಥಿನಿ ರೆಮೋನಾ ಸಾಧನೆ ಈಗ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್  ಸೇರ್ಪಡೆಯಾಗಿದೆ. ಕಾಲೇಜಿನ ರಾಬರ್ಟ್ ಸಿಕ್ವೇರಾ ಹಾಲ್​​ನಲ್ಲಿ ರೆಮೋನಾ ಭರತನಾಟ್ಯ ಪ್ರದರ್ಶನ ನೀಡಿದ್ದಾರೆ. ಸತತ ಏಳು ದಿನಗಳ ಕಾಲ ರಾತ್ರಿ ಹಗಲೆನ್ನದೆ ದಿನವಿಡೀ ಭರತನಾಟ್ಯ ಪ್ರದರ್ಶನ ಮಾಡಿದ್ದಾರೆ. ಸತತ 127 ಗಂಟೆ ಭರತನಾಟ್ಯ ಪ್ರದರ್ಶನ ನೀಡಿದ್ದೇ ಈವರೆಗಿನ ದಾಖಲೆಯಾಗಿತ್ತು. ಇದೀಗ 170 ಗಂಟೆ ಸತತ ಪ್ರದರ್ಶನ ನೀಡುವ ಮೂಲಕ ರೆಮೋನಾ ಪಿರೇರಾ ವಿಶ್ವಮಟ್ಟದಲ್ಲಿ ದೊಡ್ಡ ಸಾಧನೆ ಮಾಡಿದ್ದಾರೆ.

ಕಳೆದ 13 ವರ್ಷಗಳಿಂದ ರೆಮೋನಾ ಭರತನಾಟ್ಯ ಅಭ್ಯಾಸ ಮಾಡುತ್ತಿದ್ದಾರೆ. ಈಗಾಗಲೇ ಭರತನಾಟ್ಯದಲ್ಲಿ ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ. ಈ ವಿಶ್ವದಾಖಲೆಗಾಗಿ ಹಲವು ವರ್ಷಗಳಿಂದ ಸಿದ್ಧತೆ ಮಾಡಿದ್ದಾರೆ. ಪ್ರತಿದಿನ 5 ರಿಂದ 6ಗಂಟೆ ಭರತನಾಟ್ಯ ಅಭ್ಯಾಸ ಮಾಡಿದ್ದಾರೆ. ವಿದ್ಯೆಯ ಜೊತೆ ಭರತನಾಟ್ಯಕ್ಕೂ ಸಮಾನ ಪ್ರಾಶಸ್ತ್ಯ ನೀಡಿದ್ದಾರೆ. ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಅಧಿಕಾರಿಗಳ ಸಮ್ಮುಖದಲ್ಲಿಯೇ ರೆಮೋನಾ ಭರತನಾಟ್ಯ ಪ್ರದರ್ಶಿಸಿದ್ದಾರೆ. ಏಳು ದಿನಗಳ‌ ಪ್ರದರ್ಶನ ಕ್ಯಾಮರಾದ ಮೂಲಕ ರೆಕಾರ್ಡ್ ಮಾಡಲಾಗಿದೆ. ಅಧಿಕಾರಿಗಳು ರೆಮೋನಾ ಸಾನೆಯನ್ನು ಸಂಪೂರ್ಣವಾಗಿ ದಾಖಲೀಕರಣ ಮಾಡಿಕೊಂಡಿದ್ದಾರೆ. ರೆಮೋನಾ ಸಾಧನೆಗೆ ಕಾಲೇಜು ಆಡಳಿತ ಮಂಡಳಿ, ಶಿಕ್ಷಕರು, ಸಹಪಾಠಿಗಳಿಂದಲೂ ಸಂಪೂರ್ಣ ಬೆಂಬಲ ವ್ಯಕ್ತವಾಗಿದೆ. ಇದೀಗ, ರೆಮೋನಾ ಸಾಧನೆಗೆ ಸಹಪಾಠಿಗಳು ಸಂತಸ ವ್ಯಕ್ತಪಡಿಸಿದ್ದಾರೆ.

ಭರತನಾಟ್ಯ ಪ್ರದರ್ಶಿಸುತ್ತಿದ್ದ ಸಂದರ್ಭ ರೆಮೋನಾ ಮಿತ ಆಹಾರ ಸೇವಿಸುತ್ತಿದ್ದರು. ಪ್ರತಿ 3 ಗಂಟೆಗೊಮ್ಮೆ 15 ನಿಮಿಷದ ವಿಶ್ರಾಂತಿ ಇರುತ್ತಿತ್ತು. ಈ ವೇಳೆಯಲ್ಲಿ ಬಾಳೆಹಣ್ಣು, ಮೊಸರು, ಎಳನೀರು, ಸ್ವಲ್ಪ ವೈಟ್ ರೈಸ್ ಸೇವನೆ ಮಾಡಿದ್ದರು. ರೆಮೋನಾ ಪಿರೇರಾ ನಿರಂತರ ಭರತನಾಟ್ಯ ಮಾಡುತ್ತಿದ್ದಾಗ ವೈದ್ಯರು, ವೈದ್ಯಕೀಯ ಸಿಬ್ಬಂದಿ, ಆ್ಯಂಬುಲೆನ್ಸ್​ ಒಳಗೊಂಡ ತಂಡವೂ ಸ್ಥಳದಲ್ಲಿ ಹಾಜರಿತ್ತು. ಪ್ರತಿ ಬಾರಿ 3 ಗಂಟೆಗೊಮ್ಮೆ ವಿಶ್ರಾಂತಿ ಪಡೆಯುತ್ತಿದ್ದಾಗ ವೈದ್ಯರು ಆರೋಗ್ಯ ತಪಾಸಣೆ ಮಾಡುತ್ತಿದ್ದರು.ಒಟ್ಟು ಏಳು ದಿನಗಳ ಅವಧಿಯಲ್ಲಿ ರೆಮೋನಾ ಪಿರೇರಾ ಭರತನಾಟ್ಯದ ವಿವಿಧ ಪ್ರಕಾರಗಳ ಪ್ರದರ್ಶನ ಮಾಡಿ ತೋರಿಸಿದ್ದಾರೆ. ಅದಕ್ಕೆ ತಕ್ಕಂತೆ ರೆಕಾರ್ಡೆಡ್ ಹಾಡುಗಳನ್ನು ಬಳಕೆ ಮಾಡಲಾಗಿತ್ತು.

ಜು.21ರಂದು ಬೆಳಗ್ಗೆ 10.30ರಿಂದ ಸಂತ ಅಲೋಶಿಯಸ್ ಕಾಲೇಜಿನ ಎಲ್‌ಸಿಆರ್‌ಐ ಸಭಾಂಗಣದಲ್ಲಿ ಭರತನಾಟ್ಯ ಪ್ರದರ್ಶನ ಆರಂಭಿಸಿದ್ದಾರೆ. ಜು.28ರಂದು ಇವರು ವಿಶ್ವದಾಖಲೆಯಲ್ಲಿ ತಮ್ಮ ಹೆಸರನ್ನು ದಾಖಲಿಸಿಕೊಂಡರು. ಇವರು ಭರತನಾಟ್ಯದ ವಿವಿಧ ಪ್ರಕಾರಗಳಾದ ಅಲರಿಪ್ಪು ಜತಿಸ್ವರ, ವರ್ಣ, ಪದವರ್ಣ, ತಿಲ್ಲಾನಗಳೊಂದಿಗೆ ಲಘು ಶಾಸ್ತ್ರೀಯ, ದೇವರನಾಮಗಳಿಗೆ ಭರತನಾಟ್ಯ ಪ್ರದರ್ಶನ ನೀಡಿದರು.

Sulekha