‘ಸು ಫ್ರಮ್ ಸೋ’ ಫುಲ್ ಡಿಮ್ಯಾಂಡ್ – ಸಾವಿರ ಕೊಟ್ರೂ ಸಿಗುತ್ತಿಲ್ಲ ಟಿಕೆಟ್
ನಿಜಕ್ಕೂ ಸಿನಿಮಾ ಹೇಗಿದೆ?

‘ಸು ಫ್ರಮ್ ಸೋ’ ಫುಲ್ ಡಿಮ್ಯಾಂಡ್ – ಸಾವಿರ ಕೊಟ್ರೂ ಸಿಗುತ್ತಿಲ್ಲ ಟಿಕೆಟ್ನಿಜಕ್ಕೂ ಸಿನಿಮಾ ಹೇಗಿದೆ?

 

ಗೋಡೆ ಮೇಲೆ.. ಮೋರಿ ಕಟ್ಟೆ ಮೇಲೆ.. ಕಸದ ತೊಟ್ಟಿ ಮೇಲೆ.. ಆಟೋ ಮೇಲೆ ಒಂದೇ ಒಂದು ಬ್ಯಾನರ್ ಇಲ್ಲ.. ಅಬ್ಬರದ ಪ್ರಚಾರ ಅಂತೂ ಇಲ್ಲವೇ ಇಲ್ಲ.. ಟಿವಿ ಹಾಕಿದ್ರೆ ಒಂದೇ ಒಂದು ಇಂಟರ್ ವ್ಯೂವ್ರ್‌ ಇಲ್ಲ.. ಯಟ್ಯೂಬ್‌ನಲ್ಲಿ ಒಂದೇ ಒಂದು ಪ್ರಮೋಷನ್ ವಿಡಿಯೋ ಇಲ್ಲ.. ಆದ್ರೂ ಎಲ್ಲರ ಬಾಯಿಯಲ್ಲಿ ಈಗ ಕೇಳ್ತಾ ಇರೋದ್ ಒಂದೇ ಸು ಫ್ರಮ್ ಸೋ ಸೂಪರ್ ಆಗಿದೆ ಅನ್ನೋದು.. ಫಸ್ಟ್ ಡೇ ಫಸ್ಟ್ ಶೋನಿಂದಲೇ ಪಿಕಪ್ ಆಗಿರುವ ಈ ಸಿನಿಮಾಕ್ಕೆ ಸಿನಿ ರಸಿಕರು ಮುಗಿಬಿದ್ದು ಟಿಕೆಟ್ ಬುಕ್ ಮಾಡುತ್ತಿದ್ದಾರೆ. ಸಿನಿಮಾ ಚೆನ್ನಾಗಿದ್ರೆ ಪೇಕ್ಷಕರು ಇಷ್ಟ ಪಟ್ಟೇ ಪಡ್ತಾರೆ ಅನ್ನೋದ್ದನ್ನ ಈ ಸಿನಿಮಾ ತೋರಿಸಿದೆ. ಪರಬಾಷೆ ಸಿನಿಮಾವನ್ನೇ ತಗದೂ ಈ ಸಿನಿಮಾವನ್ನ ಹಾಕ್ತಿದ್ದಾರೆ.

ನಗು.. ನಗು.. ನಗು.. ಸ್ಟಾರ್ಟಿಂಗ್‌ನಿಂದ ಎಂಡ್ ತನಕ್ ನಗು ಅಷ್ಟೇ.. ಪೈಸಾ ವಸೂಲ್ ಸಿನಿಮಾ.. ತೆರೆ ಕಾಣೋ ತನಕ ಹೆಸರೇ ಗೊತ್ತಿರದ ಸಿನಿಮಾ ಬಗ್ಗೆ ಈಗ ಇಡೀ ಸ್ಯಾಂಡಲ್‌ವುಡ್ ಮಾತನಾಡುತ್ತಿದೆ.. ಸ್ಯಾಂಡಲ್‌ವುಡ್‌ ಅಂಗಳದಲ್ಲಿ ಹೊಸಬರ ‘ಸು ಫ್ರಂ ಸೋ’ ಆರ್ಭಟ ಜೋರಾಗಿದೆ. ಎಲ್ಲೆಲ್ಲೂ ಸಿನಿಮಾ ಬಗ್ಗೆ ಟಾಕ್ ಜೋರಾಗಿದೆ.

ಮತ್ತೊಂದು ಕ್ವಾಲಿಟಿ ಕಂಟೆಂಟ್ ಮೂಲಕ ಕನ್ನಡ ಸಿನಿರಸಿಕರ ಎದುರಿಗೆ ಹಾಜರಾಗಿರುವ ನಟ, ನಿರ್ದೇಶಕ ಹಾಗೂ ನಿರ್ಮಾಪಕ ರಾಜ್ ಬಿ.ಶೆಟ್ಟಿ, ‘ಸು ಪ್ರಮ್ ಸೋ’ ಎಂಬ ಹಾಸ್ಯ ಕಥಾಹಂದರ ಸಿನಿಮಾವನ್ನು ಜನರ ಮುಂದಿಟ್ಟಿದ್ದಾರೆ. ಬರಹಗಾರ, ನಿರ್ದೇಶಕ ಜೆ.ಪಿ. ತುಮಿನಾಡ್ ಬರೆದು, ನಿರ್ದೇಶಿಸಿರುವ ಈ ಚಿತ್ರವು ಚಿತ್ರಮಂದಿರಕ್ಕೆ ಬಂದ ಸಿನಿಪ್ರೇಕ್ಷಕರನ್ನು ನಗಿಸಿ, ಅವರ ಹೊಟೆಯನ್ನು ಹುಣ್ಣಾಗಿಸುತ್ತಿದೆ.. ರಿಲೀಸ್ ಆಗೋ ಮುಂಚೆ ಸ್ವಲ್ಪವೇ ಸ್ವಲ್ಪ ಪ್ರಮೋಷನ್ ಪಡೆಯದ ಈ ಸಿನಿಮಾ ರಿಲೀಸ್ ಆದ ಮೇಲೆ ಫುಲ್ ಹೈಪ್ ಕ್ರಿಯೇಟ್ ಮಾಡಿದೆ. ಮೊದಲಿಗೆ ಕಥೆ ಏನು ಅನ್ನೋದ್ದನ್ನ ಹೇಳ್ತಿನಿ..

ನಿರ್ದೇಶಕ ಜೆಪಿ ತುಮ್ಮಿನಾಡು ಅವರು ಕಥೆಯನ್ನ ಅದ್ಭುತವಾಗಿ ಕಟ್ಟಿಕೊಟ್ಟಿದ್ದಾರೆ..  ಕಥೆ ಮುಂದೇನಾಗುತ್ತೆ ಅನ್ನೋದು ಗೊತ್ತಾಗದಂತೆ ಕಥೆಯನ್ನ ಕಟ್ಟಿಕೊಟ್ಟಿದ್ದಾರೆ. ಒಬ್ಬ ವ್ಯಕ್ತಿಯ ಕತೆಯಾಗದೇ, ಒಂದು ಹಳ್ಳಿಯ ಕತೆಯಾಗುವಂತೆ ನಿರ್ದೇಶಕರು ಹೇಳಿದ್ದಾರೆ. ಹಳ್ಳಿಯ ಮೇಲೆ ಕಥೆ ನಿಂತಿದ್ರಿಂದಇಲ್ಲಿ ಪ್ರತಿಯೊಂದು ಪಾತ್ರವೂ ಪ್ರೇಕ್ಷರನ್ನ ರಂಜಿಸುತ್ತೆ.. ಪ್ರತಿಯೊಂದು ಮಾತೂ ಮುಖ್ಯವಾಗುತ್ತೆ. ಒಂದು ಸುಳ್ಳು ನಿಜವಾಗುತ್ತಾ ಹೋಗುವುದನ್ನು ಜೆಪಿ ತುಮಿನಾಡು ತಮಾಷೆಯಾಗಿಯೇ ಹೇಳುತ್ತಾ ಪ್ರೇಕ್ಷಕರ ಮನ ಗೆದ್ದಿದ್ದಾರೆ..

ಮೈಮೇಲೆ ದೇವ್ವ ಬಂದಿದೆ ಅಂತ ತೋರಿಸುವ ಪೇಂಟರ್ ಅಶೋಕನ ಸುಳ್ಳಿನ ಸುತ್ತಲೂ ಕಟ್ಟಿಕೊಳ್ಳುವ ಪ್ರಸಂಗಗಳು ಕ್ರಮೇಣ ಇಡೀ ಹಳ್ಳಿಯನ್ನೇ ಆವರಿಸಿಕೊಳ್ಳುತ್ತದೆ. ನಂತ್ರ ಅದೇ ನಿಜವಾಗುತ್ತೆ.. ಈ ಕತೆಗೆ ಇಬ್ಬರು ನಾಯಕರು. ಇಡೀ ಊರೇ ಗೌರವಿಸುವ ರವಿಯಣ್ಣ ಮತ್ತು ಯಾರಿಗೂ ಅಷ್ಟಾಗಿ ಪರಿಚಯವಿರದ ಪೇಂಟರ್ ಅಶೋಕನ ಕಥೆ ಜನರನ್ನ ರಂಜಿಸುತ್ತೆ.. ಸರಳ ಸೀದಾ ವ್ಯಕ್ತಿಗಳನ್ನು ಅವರ ಎಲ್ಲಾ ಎಡವಟ್ಟುಗಳ ಜತೆಗೇ ಕೊಂಡೊಯ್ಯುವ ಕತೆ, ಪ್ರೇಕ್ಷಕ ಕುತೂಹಲದಿಂದ ಅವರಿಬ್ಬರನ್ನು ಹಿಂಬಾಲಿಸುವಂತೆ ಮಾಡುತ್ತದೆ. ಒಂದು ಊರನ್ನು ನಿರ್ದೇಶಕರು ಅಲ್ಲಿಯ ಆಚರಣೆ, ಸ್ನೇಹ. ಹೊಟ್ಟೆಕಿಚ್ಚು, ಭಯ, ಮೂಢನಂಬಿಕೆ ಸಮೇತ ಕತೆಯೊಳಗೆ ಎಳೆದುಕೊಂಡಿದ್ದಾರೆ. ಯಾರನ್ನೂ ವೈಭವೀಕರಿಸುವ ಯಾವ ಪ್ರಯತ್ನವೂ ಇಲ್ಲಿಲ್ಲ. ಮಾತು ಮಾತಿಗೆ ಒಂದು ನಗೆ ಹುಟ್ಟಿದರೆ ಅದು ಪಾತ್ರಗಳ ತಪ್ಪಲ್ಲ, ಆ ಊರು ಅಲ್ಲಿಯ ಹತ್ತು ಸಮಸ್ತರು ಇರುವುದೇ ಹಾಗೆ. ಅವರು ಬದುಕುವುದೂ ಹಾಗೆಯೇ. ಅದರಲ್ಲಿ ಯಾವ ನಾಟಕೀಯತೆ ಇಲ್ಲ. ಸು ಫ್ರಮ್ ಸೋ ನೋಡುತ್ತಾ ಆ ಅನುಭವ ಪ್ರೇಕ್ಷಕನಿಗೂ ಆಗುತ್ತೆ.. ಚಿತ್ರದೊಳಗೆ ಸೇರಿಹೋಗಲು ಹತ್ತರಿಂದ ಹದಿನೈದು ನಿಮಿಷ ಬೇಕಾಗುತ್ತದೆ. ಹೋದ ಮೇಲೆ ನಮ್ಮನ್ನೇ ಮರೆಸಿ ಆ ಹಳ್ಳಿಯ ಲೋಕದಲ್ಲಿ ಸಿನಿಮಾ ಕರೆದುಕೊಂಡು ಹೋಗುತ್ತೆ.. Vis flow..

ಒಂದೇ ಮಾತಿನಲ್ಲಿ ಹೇಳಬೇಕಂದ್ರೆ ಕರಾವಳಿ ಹಿನ್ನೆಲೆಯ ಒಂದು ಸಿಂಪಲ್ ಕಥೆಯನ್ನು ಚಿತ್ರದಲ್ಲಿ ಹೇಳಿದ್ದಾರೆ. ಕಲಾವಿದರು ಟೈಮಿಂಗ್ ಸಖತ್ತಾಗಿದೆ. ಅದೇ ಸಿನಿಮಾವನ್ನು ಸಖತ್ ಎಂಜಾಯ್ ಮಾಡುವಂತೆ ಮಾಡಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬೇರೆ ಭಾಷೆಗಳಿಗೆ ‘ಸು ಫ್ರಂ ಸೋ’ ಸಿನಿಮಾ ಡಬ್ ಮಾಡಿ ಬಿಡಿ ಎಂದು ಸಿನಿರಸಿಕರು ಕಾಮೆಂಟ್ ಮಾಡುತ್ತಿದ್ದಾರೆ.

ಸಣ್ಣ ಮಟ್ಟದಲ್ಲೇ ‘ಸು ಫ್ರಂ ಸೋ’ ಸಿನಿಮಾ ಬಿಡುಗಡೆಯಾಗಿ ದೊಡ್ಡ ಮಟ್ಟದಲ್ಲಿ ಹೆಸರು ಮಾಡ್ತಿದೆ..  ಜೋರಾಗಿ ಕಲೆಕ್ಷನ್  ಮಾಡ್ತಿದೆ. ಬೆಂಗಳೂರು ಬಿಟ್ಟು ಹೊರಭಾಗದ ಸಾಕಷ್ಟು ಕಡೆಗಳಲ್ಲಿ ಸಿನಿಮಾ ಬಿಡುಗಡೆ ಆಗಿಲ್ಲ. ಚಿತ್ರಕ್ಕೆ ಸಿಗುತ್ತಿರುವ ರೆಸ್ಪಾನ್ಸ್ ನೋಡಿ ನಮ್ಮ ಊರಲ್ಲೂ ಸಿನಿಮಾ ರಿಲೀಸ್ ಮಾಡಿ ಎಂದು ಸಿನಿರಸಿಕರು ಮನವಿ ಮಾಡುತ್ತಿದ್ದಾರೆ. ಅಷ್ಟರಮಟ್ಟಿಗೆ ಸಿನಿಮಾ ದರ್ಬಾರ್ ನಡೆಸುತ್ತಿದೆ.  ನಿಧಾನವಾಗಿ ಶೋಗಳ ಸಂಖ್ಯೆ, ಸ್ಕ್ರೀನ್‌ಗಳ ಸಂಖ್ಯೆ ಹೆಚ್ಚಿಸಿಕೊಳ್ಳುತ್ತಿದೆ. ಬೆಂಗಳೂರಿನಲ್ಲಿ ಮೊದಲ ದಿನ ಅಂದ್ರೆ 25 ರಂದು 78 ಶೋ ಕೊಡಲಾಗಿತ್ತು.. ಮೊದಲ ದಿನ ಸಿನಿಮಾ ಮಾಡಿದ ಹವಾ ನೋಡಿ ಎರಡನೇ ದಿನ ಬೆಂಗಳೂರಿನಲ್ಲಿ 210 ಶೋ ಕೊಡಲಾಗಿದೆ. ದೊಡ್ಡ ಸದ್ದಿನೊಂದಿಗೆ ಬಂದ ತೆಲುಗಿನ ‘ಹರಿ ಹರ ವೀರ ಮಲ್ಲು’ ಸಿನಿಮಾವನ್ನು ಕೂಡ ಕೆಲವು ಕಡೆ ತೆಗೆದು, ಅಲ್ಲಿ ‘ಸು ಫ್ರಮ್ ಸೋ’ ಸಿನಿಮಾಗೆ ಜಾಗ ಮಾಡಿಕೊಡಲಾಗುತ್ತಿದೆ. ಇದು ಅಲ್ವಾ ಕನ್ನಡ ಸಿನಿಮಾದ ಹವಾ.. ಒಳ್ಳೆ ಸಿನಿಮಾ ಕೊಟ್ರೆ ಪ್ರೇಕ್ಷಕರು ಮೋಸ ಮಾಡಲ್ಲ ಅನ್ನೋದ್ದನ್ನ ತೋರಿಸಿಕೊಟ್ಟಿದ್ದಾರೆ.

‘ಸು ಫ್ರಂ ಸೋ’ ಚಿತ್ರದ ಕಲೆಕ್ಷನ್ ಬಗ್ಗೆ ಅಧಿಕೃತ ಮಾಹಿತಿ ಚಿತ್ರತಂಡ ನೀಡಿಲ್ಲ. ಆದ್ರೆ ಮೊದಲ ದಿನ 1 ಕೋಟಿ ಎರಡನೇ ದಿನ 2 ಕೋಟಿಗೂ ಹೆಚ್ಚು ಕಲೆಕ್ಷನ್ ಆಗಿರಬಹುದು ಅಂದಾಜಿಸಲಾಗಿದೆ.  ಚಿಕ್ಕ ಪೋಸ್ಟರ್ ಕೂಡ ಅಂಟಿಸದೆ ಸಿನಿಮಾ ಈ ತರ ಹಿಟ್ ಆಗೋಕೆೆ ರಾಜ್‌ಬಿ ಶೆಟ್ಟಿಯ ಹೊಸ ಪ್ರಯೋಗವೇ ಕಾರಣ.. ಜುಲೈ 25ಕ್ಕೂ ಮೊದಲೇ ಮಂಗಳೂರು, ಶಿವಮೊಗ್ಗ, ಮೈಸೂರಿನಲ್ಲಿ ‘ಸು ಫ್ರಮ್ ಸೋ’ ಸಿನಿಮಾದ ಪ್ರೀಮಿಯರ್ ಶೋ ಮಾಡಿ, ಆಡಿಯೆನ್ಸ್ ರಿಯಾಕ್ಷನ್ ಪಡೆದುಕೊಂಡರು.   ಆಮೇಲೆ ಸು ಫ್ರಮ್ ಸೋ’ ಸದ್ದು ಆರಂಭವಾಗಿತ್ತು. ಸೆಲೆಬ್ರಿಟಿ ಪ್ರೀಮಿಯರ್‌ಗಿಂತಲೂ ಇದನ್ನು ಮಾಡಿದ್ದು ಚಿತ್ರತಂಡಕ್ಕೆ ಭಾರಿ ಪ್ಲಸ್ ಪಾಯಿಂಟ್ ಆಗಿದೆ. ಸ್ಟಾರ್ ನಟರಿಲ್ಲದ, ಭಾರೀ ಪ್ರಚಾರ ಇಲ್ಲದ ಹೊಸಬರ ಚಿತ್ರ ಈ ಮಟ್ಟಿಗೆ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡುತ್ತಿರುವುದು ನಿಜಕ್ಕೂ ಒಳ್ಳೆಯ ಬೆಳವಣಿಗೆ..

Kishor KV