ಕರ್ನಾಟಕ ವಿಧಾನಸಭಾ ಚುನಾವಣೆ – ಜೆಡಿಎಸ್ನಿಂದ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ
ಕರ್ನಾಟಕ ವಿಧಾನಸಭಾ ಚುನಾವಣೆಗೆ ಜೆಡಿಎಸ್ ಇಂದು ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದೆ. ರಾಜ್ಯದ 93 ವಿಧಾನಸಭಾ ಕ್ಷೇತ್ರಗಳಿಗೆ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಅಪ್ಪ-ಮಗನ ಎರಡು ಜೋಡಿಯೂ ಇದೆ. ಚನ್ನಪಟ್ಟಣದಿಂದ ಹೆಚ್.ಡಿ.ಕುಮಾರಸ್ವಾಮಿ ಮತ್ತು ರಾಮನಗರದಿಂದ ನಿಖಿಲ್ ಕುಮಾರಸ್ವಾಮಿ ಕಣಕ್ಕಿಳಿಯಲಿದ್ದಾರೆ. ಅಲ್ಲದೆ ಚಾಮುಂಡೇಶ್ವರಿ ಕ್ಷೇತ್ರದಿಂದ ಜಿ.ಟಿ.ದೇವೇಗೌಡ ಹಾಗೂ ಹುಣಸೂರು ಕ್ಷೇತ್ರದಿಂದ ಹರೀಶ್ ಗೌಡರಿಗೆ ಜೆಡಿಎಸ್ ಟಿಕೆಟ್ ನೀಡಿದೆ. ಪಾವಗಡದಲ್ಲಿ ಜೆಡಿಎಸ್ನಿಂದ ತಿಮ್ಮರಾಯಪ್ಪ ಕಣಕ್ಕಿಳಿಯಲಿದ್ದಾರೆ.
ಇದನ್ನೂ ಓದಿ: ವಿಧಾನಸಭೆ ಸಭಾಂಗಣದಲ್ಲಿ ಭಾವಚಿತ್ರ ಅನಾವರಣ- ಕಾರ್ಯಕ್ರಮ ಬಹಿಷ್ಕರಿಸಿದ ಕಾಂಗ್ರೆಸ್
93 ಕ್ಷೇತ್ರಗಳಿಗೆ ಟಿಕೆಟ್ ಘೋಷಿಸಿರುವ ಜೆಡಿಎಸ್, ತನ್ನ ಭದ್ರಕೋಟೆಯಾಗಿರುವ ಹಾಸನ ಜಿಲ್ಲೆಯ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಅನೌನ್ಸ್ ಮಾಡದಿರುವುದು ಕುತೂಹಲ ಕೆರಳಿಸಿದೆ. ಹಾಸನದ ಅರಸೀಕೆರೆ ಮತ್ತು ಅರಕಲಗೂಡು ಕ್ಷೇತ್ರಗಳ ಹಾಲಿ ಶಾಸಕರಾಗಿರುವ ಶಿವಲಿಂಗೇಗೌಡ ಮತ್ತು ಎ.ಟಿ.ರಾಮಸ್ವಾಮಿಯವರಿಗೆ ಜೆಡಿಎಸ್ ಈ ಬಾರಿ ಟಿಕೆಟ್ ನೀಡುತ್ತೋ ಇಲ್ಲವೋ ಎಂಬ ಕುತೂಹಲವಿದೆ. ಅಲ್ಲದೆ ದೇವೇಗೌಡರ ಕುಟುಂಬದಿಂದ ಮತ್ತೊಬ್ಬರು ಚುನಾವಣೆಗೆ ಸ್ಪರ್ಧೆಗಿಳಿಯುವ ನಿರೀಕ್ಷೆಯೂ ಇದೆ. ಹೆಚ್.ಡಿ.ರೇವಣ್ಣ ಪತ್ನಿ ಭವಾನಿ ರೇವಣ್ಣ ವಿಧಾನಸಭಾ ಚುನಾವಣೆಯ ಪ್ರಬಲ ಆಕಾಂಕ್ಷಿಯಾಗಿದ್ದು, ಹಾಸನದ ಯಾವುದಾದರೂ ಒಂದು ಕ್ಷೇತ್ರದಿಂದ ಟಿಕೆಟ್ ನೀಡುವಂತೆ ಒತ್ತಾಯಿಸುತ್ತಿದ್ದಾರೆ. ಹೀಗಾಗಿ ಹಾಸನವನ್ನು ಬದಿಗಿಟ್ಟು ಜೆಡಿಎಸ್ ಟಿಕೆಟ್ ಘೋಷಿಸಿರುವುದರಿಂದ, ಗೌಡರ ಕುಟುಂಬದಿಂದ ಮತ್ತೊಬ್ಬರಿಗೆ ಟಿಕೆಟ್ ಸಿಗುತ್ತಾ ಎಂಬ ಕುತೂಹಲ ಗರಿಗೆದರಿದೆ.