ಬೆಳಗ್ಗೆ ಭೀಮನ ಅಮಾವಾಸ್ಯೆಗೆ ಗಂಡನ ಪಾದಪೂಜೆ – ಮಧ್ಯಾಹ್ನ ಮನೆಯಲ್ಲೇ ಶವವಾಗಿದ್ದಳು ಹೆಂಡತಿ
ಪ್ರೀತಿಸಿ ಮದುವೆಯಾದ ಪತ್ನಿಗೆ ಗಂಡನೇ ಯಮನಾಗಿದ್ದು ಹೇಗೆ?

ಭೀಮನ ಅಮಾವಾಸ್ಯೆ. ಗಂಡನ ಪಾದ ಪೂಜೆ ಮಾಡುವ ಮೂಲಕ, ಪತಿಯ ಆಯಸ್ಸು ವೃದ್ಧಿಯಾಗಲಿ ಅಂತಾ ಪತ್ನಿ ಬೇಡಿಕೊಳ್ಳುತ್ತಾಳೆ. ಇಲ್ಲಿ ಪತಿಯ ಆಯಸ್ಸು ಹೆಚ್ಚಾಗಲಿ ಅಂತಾ ಪೂಜಿಸಿದ ಪತ್ನಿಯ ಆಯಸ್ಸನ್ನೇ ಮುಗಿಸಿದ್ದಾನೆ ಪತಿರಾಯ. ಅದು ಕೂಡಾ ಪ್ರೀತಿಸಿ ಮದುವೆಯಾಗಿ ಒಂದು ವರ್ಷದಲ್ಲೇ. ಬೆಳಗ್ಗೆ ಪತಿಯ ಪಾದಪೂಜೆ, ಮಧ್ಯಾಹ್ನದೊಳಗೆ ಪತ್ನಿಯ ಶವ ಮನೆಯೊಳಗೆ.
ಇದನ್ನೂ ಓದಿ: ಕೇರಳ ನಿಮಿಷ ಪ್ರಿಯಾಗೆ ಮರುಜನ್ಮ – ಸಂಧಾನ ಸಕ್ಸಸ್.. ಗಲ್ಲು ಕ್ಯಾನ್ಸಲ್
ಬೆಂಗಳೂರು ಹೊರವಲಯದಲ್ಲಿ ದಾಸನಪುರದ ಅಂಚೆಪಾಳ್ಯದಲ್ಲಿ ನವ ವಿವಾಹಿತೆಯೊಬ್ಬರು ದಾರುಣ ಅಂತ್ಯ ಕಂಡಿದ್ದಾರೆ. ವಿಪರ್ಯಾಸವೆಂದರೆ, ಜುಲೈ 24ರಂದು ಬೆಳಗ್ಗೆ ಭೀಮನ ಅಮಾವಾಸ್ಯೆಗೆ ಗಂಡನ ಪಾದ ಪೂಜೆ ಮಾಡಿದ್ದಳು. ಗಂಡನನ್ನು ಕೂರಿಸಿ ಪೂಜೆ ಮಾಡಿದ ಫೋಟೋ ಶೇರ್ ಕೂಡಾ ಮಾಡಿಕೊಂಡಿದ್ದಳು. ನಂತರ ಗಂಡ ಹೆಂಡತಿ ಇಬ್ಬರೂ ಸೆಲ್ಫಿ ತಗೊಂಡಿದ್ದರು. ಈ ಫೋಟೋ ಕೂಡಾ ಶೇರ್ ಆಗಿತ್ತು. ನಂತರ ಕೆಲವೇ ಗಂಟೆಗಳಲ್ಲಿ ಹಾಕಿಕೊಂಡ ಚೂಡಿದಾರ್ನಲ್ಲಿಯೇ ಪತ್ನಿ ಶವವಾಗಿದ್ದಳು.
ಬೆಂಗಳೂರಿನ ಕಾಲೇಜಿನಲ್ಲಿ ಪಿಜಿ ಓದುವಾಗ ಅಭಿಷೇಕ್ ಮತ್ತು ಸ್ಪಂದನಾ ಪರಿಚಯವಾಗಿತ್ತು. 24 ವರ್ಷದ ಸ್ಪಂದನಾ ಮತ್ತು ಅಭಿಷೇಕ್, 2024ರಲ್ಲಿ ಕನಕಪುರ ಉಪನೋಂದಣಾಧಿಕಾರಿಗಳ ಕಚೇರಿಯಲ್ಲಿ ಮದುವೆ ಮಾಡಿಕೊಂಡಿದ್ರು. ಇದೀಗ ಮದುವೆಯಾಗಿ ವರ್ಷ ಕಳೆಯೋ ಮುನ್ನವೇ ಸ್ಪಂದನಾ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದಾರೆ.
ಸ್ಪಂದನಾ ಕುಟುಂಬಸ್ಥರು ಅಭಿಷೇಕ್ ಹಾಗೂ ಆತನ ಮನೆಯವರ ಮೇಲೆ ಆರೋಪ ಮಾಡ್ತಿದ್ದಾರೆ. ಪತಿಯ ವಿರುದ್ಧ ವರದಕ್ಷಿಣೆ ಕಿರುಕುಳದ ಆರೋಪ ಮಾಡಿದ್ದಾರೆ. ಕನಕಪುರದ ಕರಿಕಲ್ಲ ದೊಡ್ಡಿ ನಿವಾಸಿಯಾಗಿರುವ ಅಭಿಷೇಕ್ ಮೇಲೆ ವರದಕ್ಷಿಣೆ ಕಿರುಕುಳ ಆರೋಪ ಕೇಳಿ ಬಂದಿದೆ. ಸ್ಪಂದನಾ ಸಾವಿನ ಸುದ್ದಿಯನ್ನ ಸ್ಥಳೀಯರು ಆಕೆಯ ಪೋಷಕರಿಗೆ ತಿಳಿಸಿದ್ದಾರೆ. ಮಹಿಳೆ ಸಾವಿನ ಬಗ್ಗೆ ಮಾದನಾಯಕನಹಳ್ಳಿ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಸ್ಪಂದನಾ ಪೋಷಕರು ಆಕೆಯ ಗಂಡ ಅಭಿಷೇಕ್ ಆತನ ತಾಯಿ ಲಕ್ಷ್ಮಮ್ಮ ವಿರುದ್ಧ ವರದಕ್ಷಿಣೆ ಕಿರುಕುಳ ಹಾಗೂ ಕೊಲೆ ಆರೋಪ ಆರೋಪ ಮಾಡಿದ್ದು, ಇಬ್ಬರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಮಾದನಾಯಕನಹಳ್ಳಿ ಪೊಲೀಸರು ದೂರು ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಪೊಲೀಸರ ತನಿಖೆ ಬಳಿಕವೇ ಸ್ಪಂದನಾ ಸಾವಿನ ಸತ್ಯ ಬಯಲಾಗಬೇಕಿದೆ.

ನೋಡಿರಿ

