ಪೆಟ್ಟು ತಿಂದಲ್ಲೇ ರಿಷಭ್ ಪಂತ್ ಅರ್ಧಶತಕ – ನೋವಲ್ಲೇ ಆಡಿದ್ದರು ಕುಂಬ್ಳೆ, ಸಚಿನ್!
ಗಾಯದಲ್ಲೇ ಇಮ್ರಾನ್ ಖಾನ್ ವಿಶ್ವಕಪ್‌ ಗೆಲ್ಲಿಸಿದ್ದು ಹೇಗೆ?

ಪೆಟ್ಟು ತಿಂದಲ್ಲೇ ರಿಷಭ್ ಪಂತ್ ಅರ್ಧಶತಕ – ನೋವಲ್ಲೇ ಆಡಿದ್ದರು ಕುಂಬ್ಳೆ, ಸಚಿನ್!ಗಾಯದಲ್ಲೇ ಇಮ್ರಾನ್ ಖಾನ್ ವಿಶ್ವಕಪ್‌ ಗೆಲ್ಲಿಸಿದ್ದು ಹೇಗೆ?

ಗಾಯಗೊಂಡ ಹುಲಿ ತೀವ್ರವಾಗಿ ಬೇಟೆ ಮುಂದುವರೆಸುತ್ತದೆ ಎನ್ನುತ್ತೇವೆ.. ಹಾಗೆಯೇ ರಿಷಬ್‌ ಪಂತ್‌.. ಗಾಯಗೊಂಡ ಹುಲಿಯಂತೆಯೇ ಆಟ ಆಡಿದ್ದಾರೆ.. ತಂಡ ಕಠಿಣ ಸ್ಥಿತಿಯಲ್ಲಿದೆ ಎನ್ನುವುದನ್ನು ಅರಿತ ಪಂತ್‌, ಬ್ಯಾಟಿಂಗ್‌ಗೆ ಬಂದರು.. ಅಮೂಲ್ಯ ಅರ್ಧಶತಕ ಭಾರಿಸಿದ್ರು.. ಈ ಮೂಲಕ ಇಂಗ್ಲಿಷರ ವಿರುದ್ಧ ಯಾವತ್ತಿದ್ದರೂ ಬ್ಯಾಟಿಂಗ್‌ನಲ್ಲಿ ತಾನು ಹುಲಿ ಎನ್ನುವುದನ್ನು ಮತ್ತೊಮ್ಮೆ ತೋರಿಸಿಕೊಟ್ಟರು.. ಕ್ರಿಕೆಟ್ ಇತಿಹಾಸದಲ್ಲಿ ಇಂತಹ ಹಲವು ಘಟನೆಗಳು ನಡೆದಿವೆ.. ಅದರಲ್ಲೂ ಭಾರತೀಯ ಆಟಗಾರರೇ ಹೆಚ್ಚಿನ ಸಂಖ್ಯೆಯಲ್ಲಿ ಗಾಯಗೊಂಡರೂ ಮೈದಾನದಲ್ಲಿ ಕೆಚ್ಚೆದೆ ತೋರಿಸಿದ ಇತಿಹಾಸ ಹೊಂದಿದ್ದಾರೆ.. ಕ್ರಿಕೆಟ್‌ನ ಇತಿಹಾಸದಲ್ಲಿ ಗಾಯದ ಜೊತೆಗೇ ಆಡಿದ ಪ್ರಮುಖ ಘಟನೆಗಳ ವಿವರಣೆ ಇಲ್ಲಿದೆ.

ಇದನ್ನೂ ಓದಿ: ಬೆರಳು ಮುರಿದ್ರೂ ಬ್ಯಾಟಿಂಗ್ ಇಳಿದ ಪಂತ್ – ಮ್ಯಾಚ್ ಗೆಲ್ಲೋಕೆ ರಿಸ್ಕ್ ತಗೊಂಡ್ರಾ?

ರಿಷಬ್‌ ಪಂತ್‌ ಮ್ಯಾಂಚೆಸ್ಟರ್‌ನಲ್ಲಿ ಕಾಲಿನ ಬೆರಳು ಫ್ರ್ಯಾಕ್ಚರ್‌ ಆದ್ರೂ ಬ್ಯಾಟಿಂಗ್‌ ಮೂಲಕ ಕ್ರಿಕೆಟ್‌ ಜಗತ್ತನ್ನು ನಿಬ್ಬೆರಗಾಗಿಸಿದ್ದಾರೆ.. ತೀವ್ರ ನೋವಿದ್ದರೂ ಬ್ಯಾಟಿಂಗ್‌ ಮುಂದುವರೆಸಿ, ತಂಡದ ಬೆನ್ನೆಲುಬಾಗಿದ್ದಾರೆ.. ಕ್ರಿಕೆಟ್‌ನ ಇತಿಹಾಸದ ಪುಟಗಳನ್ನು ತಿರುವಿ ಹಾಕಿದ್ರೆ, ಗಾಯಗೊಂಡಿದ್ದರೂ ಆಟ ಮುಂದುವರಿಸಿದ ಆಟಗಾರರ ಸಾಲಿನಲ್ಲಿ ಮೊದಲು ಸಿಗುವ ಹೆಸರೇ ಕ್ರಿಕೆಟ್ ದೇವರು ಸಚಿನ್‌ ತೆಂಡೂಲ್ಕರ್‌.. ಎರಡು ಪಂದ್ಯಗಳಲ್ಲಿ ತೀವ್ರಗಾಯದ ನಡುವೆಯೂ ತಂಡದ ಬ್ಯಾಟಿಂಗ್‌ಗೆ ಬೆನ್ನೆಲುಬಾಗಿ ನಿಂತಿದ್ದು ಸಚಿನ್‌ ತೆಂಡೂಲ್ಕರ್‌.. ಅದೂ ಕೂಡ ಬದ್ಧ ವೈರಿ ಪಾಕಿಸ್ತಾನದ ವಿರುದ್ಧವೇ ಎರಡು ಬಾರಿಯೂ ಗಾಯದ ನಡುವೆ ಆಡಿದ್ದರು ಎನ್ನುವುದು ವಿಶೇಷ.. 1999ರಲ್ಲಿ ಚೆನ್ನೈನಲ್ಲಿ ಪಾಕಿಸ್ತಾನದ ವಿರುದ್ಧದ ಟೆಸ್ಟ್‌ ಪಂದ್ಯದಲ್ಲಿ ಭಾರತಕ್ಕೆ ಗೆಲ್ಲೋದಿಕ್ಕೆ 271ರನ್‌ಗಳ ಟಾರ್ಗೆಟ್‌ ನಿಗದಿಯಾಗಿತ್ತು.. ಆದ್ರೆ ಆ ಪಂದ್ಯದ ವೇಳೆಗೆ ಸಚಿನ್‌ ತೆಂಡೂಲ್ಕರ್‌ ತೀವ್ರ ಬೆನ್ನುನೋವಿಗೆ ತುತ್ತಾಗಿದ್ದರು.. ನಡೆಯೋದಿಕ್ಕೂ ಸಾಧ್ಯವಾಗದ ಸ್ಥಿತಿಯಲ್ಲಿತ್ತು ಅವರ ಕಂಡೀಷನ್‌.. ಆದ್ರೆ ತನ್ನ ನೋವಿಗಿಂತ ದೇಶ ಮುಖ್ಯ ಎಂದು ನಂಬಿದ್ದ ಸಚಿನ್‌, ಪಾಕಿಸ್ತಾನದ ಬೌಲರ್‌ಗಳನ್ನು ಇನ್ನಿಲ್ಲದಂತೆ ಕಾಡಿದ್ದರು.. ವಾಸಿಮ್‌ ಅಕ್ರಮ್‌, ವಕಾರ್‌ ಯೂನಿಸ್‌ರಂತಹ ದಿಗ್ಗಜರ ವೇಗದ ಬೌಲಿಂಗ್‌ ಎದುರಿಸಿದ್ರು.. 273 ಎಸೆಗಳಲ್ಲಿ 18 ಬೌಂಡರಿಗಳೊಂದಿಗೆ ಸಚಿನ್‌ 136 ರನ್‌ ಗಳಿಸಿದ್ರು.. ಆದ್ರೆ ಆ ಪಂದ್ಯದಲ್ಲಿ ಭಾರತ ನಾಲ್ಕು ರನ್‌ಗಳ ಅಂತರದಿಂದ ಸೋಲು ಕಂಡಿತ್ತು..

ಇನ್ನು 2003ರ ವಿಶ್ವಕಪ್‌ ವೇಳೆಯಲ್ಲೂ ದಕ್ಷಿಣ ಆಫ್ರಿಕಾದ ಸೆಂಚೂರಿಯನ್‌ ನಡೆದ ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ಸಚಿನ್‌ ಕೈ ನೋವಿನಿಂದ ಬಳಲುತ್ತಿದ್ದರು.. ಆದ್ರೆ ಪಾಕಿಸ್ತಾನ ವಿರುದ್ಧ ಗೆಲ್ಲೋದಿಕ್ಕೆ ಭಾರತಕ್ಕೆ 274ರನ್‌ಗಳ ಗುರಿಯಿತ್ತು.. ತನ್ನ ಗಾಯವನ್ನು ಲೆಕ್ಕಿಸಿದ ಸಚಿನ್‌, ವಾಸಿಮ್‌ ಅಕ್ರಮ್‌, ವಕಾರ್‌ ಯೂನಿಸ್‌ ಮತ್ತು ಶೋಯೆಬ್‌ ಅಖ್ತರ್‌ ಅವರ ವೇಗದ ಬೌಲಿಂಗನ್ನು ಬೆಂಡೆತ್ತಿದ್ದರು.. ಅಖ್ತರ್‌ಗೆ ಭರ್ಜರಿ ಸಿಕ್ಸರ್‌ ಭಾರಿಸಿದ್ದಲ್ಲದೆ, 75 ಎಸೆತಗಳಲ್ಲಿ ಭರ್ಜರಿ 98 ರನ್‌ ಹೊಡೆದು ಔಟಾಗಿದ್ದರು.. ಪಾಕಿಸ್ತಾನದ ವಿರುದ್ಧ ವಿಶ್ವಕಪ್ ನಲ್ಲಿ ಎಂದೂ ಸೋಲದ ಭಾರತ, ಆ ಪಂದ್ಯದಲ್ಲಿ 6 ವಿಕೆಟ್‌ಗಳ ಅಂತರದ ಭರ್ಜರಿ ಜಯ ದಾಖಲಿಸಿತ್ತು..

ಇನ್ನು ಅನಿಲ್‌ ಕುಂಬ್ಳೆ ಅವರ ವಿಶ್ವಪ್ರಸಿದ್ಧ ಬ್ಯಾಂಡೇಜ್‌ ಬೌಲಿಂಗ್‌ ನಿಮಗೆ ಗೊತ್ತೇ ಇರುತ್ತೆ.. 2002ರಲ್ಲಿ ಆಂಟಿಗುವಾದಲ್ಲಿ ವೆಸ್ಟಿಂಡೀಸ್‌ ವಿರುದ್ಧ ಬ್ಯಾಟಿಂಗ್‌ ಮಾಡುತ್ತಿದ್ದಾಗ ಮಾರ್ವಿನ್‌ ಡಿಲನ್‌ ಬೌಲಿಂಗ್‌ನಲ್ಲಿ ಕುಂಬ್ಲೆಯವರ ದವಡೆಯ ಮೂಳೆ ಮುರಿದಿತ್ತು.. ಹಾಗಿದ್ದರೂ 20 ನಿಮಿಷ ಬ್ಯಾಟಿಂಗ್‌ ಮುಂದುವರೆಸಿದ್ದರು.. ಅಲ್ಲಿಂದ ನಂತರ ಬೌಲಿಂಗ್‌ಗೆ ಇಳಿದ ಕುಂಬ್ಳೆ ಬ್ಯಾಂಡೇಜ್‌ ಕಟ್ಟಿಕೊಂಡೇ 14 ಓವರ್‌ ಬೌಲಿಂಗ್‌ ಮಾಡಿದ್ದಲ್ಲದೆ, ಬ್ರಿಯಾನ್‌ ಲಾರಾ ಅವರ ವಿಕೆಟ್‌ ಗಳಿಸಿದ್ದರು.. ಇದು ಕ್ರಿಕೆಟ್‌ ಜಗತ್ತು ಎಂದೂ ಮರೆಯಲು ಸಾಧ್ಯವೇ ಇಲ್ಲದಂತಹ ಘಟನೆ ಎಂದು ದಾಖಲಾಗಿದೆ..

ಇನ್ನು 2019ರ ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಶಿಖರ್‌ ಧವನ್‌ ಅವರ ಬೆರಳಿನಲ್ಲಿ ಹೇರ್‌ಲೈನ್‌ ಕ್ರ್ಯಾಕ್‌ ಆಗಿತ್ತು.. ನೋವಿನ ನಡುವೆಯೂ ಧವನ್‌ 117 ರನ್‌ ಗಳಿಸಿ, ಭಾರತದ ಗೆಲುವಿಗೆ ನೆರವಾಗಿದ್ದರು. ಗಾಯದಿಂದಾಗಿ ಧವನ್‌ ನಂತರ ಟೂರ್ನಮೆಂಟ್‌ನಿಂದ ಹೊರಗುಳಿಯಬೇಕಾಯಿತು..

ಕ್ರಿಕೆಟ್‌ ಇತಿಹಾಸದಲ್ಲಿ ಗಾಯದ ನಡುವೆಯೇ ಶ್ರೇಷ್ಠ ಇನ್ನಿಂಗ್ಸ್‌ ಆಡಿದ ಇನ್ನೊಂದು ಘಟನೆ ಅಂದ್ರೆ ಅದು ಆಸ್ಟ್ರೇಲಿಯಾದ ಕ್ಯಾಪ್ಟನ್‌ ಸ್ಟೀವ್‌ ವ್ಹಾ ಅವರ ಆಟ. 2001ರ ಆ್ಯಷಸ್‌ ಸರಣಿಯಲ್ಲಿ ಸ್ಟೀವ್‌ ವ್ಹಾ ಅವರ ಕೈಗೆ ಗಾಯವಾಗಿದ್ದರೂ ಐತಿಹಾಸಿಕ ಶತಕ ಭಾರಿಸಿದ್ದರು. 157 ರನ್‌ ಹೊಡೆದ ವ್ಹಾ, ಆಸೀಸ್‌ ಗೆಲುವಿನಲ್ಲಿ ಮಹತ್ವದ ಪಾತ್ರವಹಿಸಿದ್ದರು.. ನಾಯಕ ಛಲವನ್ನು ಸ್ಟೀವ್‌ ತೋರಿಸಿದ್ದರು..

ನಾಯಕತ್ವದ ಛಲಕ್ಕೆ ಇನ್ನೊಂದು ಹೆಸರು ಅಂದ್ರೆ, ಪಾಕಿಸ್ತಾನದ ಮಾಜಿ ನಾಯಕ ಇಮ್ರಾನ್‌ ಖಾನ್‌.. 1992ರ ವಿಶ್ವಕಪ್‌ ವೇಳೆ ಇಮ್ರಾನ್‌, ದೀರ್ಘಕಾಲೀನ ಗಾಯದಿಂದ ಬಳಲುತ್ತಿದ್ದರು.. ಪ್ರತಿ ಪಂದ್ಯಕ್ಕೂ ಮೊದಲು ಅವರು ನೋವು ನಿವಾರಕ ಮಾತ್ರೆಗಳನ್ನು ನುಂಗಿ ಮೈದಾನಕ್ಕಿಳಿಯುತ್ತಿದ್ದರು.. ವಿಶ್ವಕಪ್‌ನ ಸೆಮಿಫೈನಲ್ ಮತ್ತು ಫೈನಲ್‌ನಲ್ಲಿ 44 ಮತ್ತು 72 ರನ್‌ಗಳನ್ನು ಭಾರಿಸಿದ್ದ ಇಮ್ರಾನ್‌ ಖಾನ್‌, 6 ವಿಕೆಟ್‌ ಕಬಳಿಸಿ, ಪಾಕಿಸ್ತಾನ ಮೊದಲ ವಿಶ್ವಕಪ್‌ ಗೆಲ್ಲುವಂತೆ ಮಾಡಿದ್ದರು.. ಕ್ರಿಕೆಟ್‌ ಇತಿಹಾಸದ ಪುಟಗಳನ್ನು ತಿರುವುತ್ತಾ ಹೋದರೆ ಇಂತಹ ಹಲವು ಘಟನೆಗಳು ಸಿಗುತ್ತವೆ.. ಈಗ ಇದೇ ಇತಿಹಾಸದ ಭಾಗವಾಗಿದ್ದಾರೆ ರಿಷಬ್‌ ಪಂತ್‌.. ತನ್ನ ನೋವಿಗಿಂತಲೂ ತಂಡ ಗೆಲ್ಲೋದು ಮುಖ್ಯ ಎನ್ನುವುದು ಬಂದಾಗ ಆಟಗಾರರು ಯಾವ ನೋವನ್ನೂ  ಲೆಕ್ಕಕ್ಕೆ ಇಡೋದಿಲ್ಲ ಅನ್ನೋದಕ್ಕೆ ಇದೊಂದು ಒಳ್ಳೆಯ ಉದಾಹರಣೆ..

 

Sulekha