ಕರ್ನಾಟಕದಲ್ಲಿ ಮತ ಕಳವು ನಡೆದಿದೆ.. ಶೀಘ್ರವೇ ಸಾಕ್ಷ್ಯ ಒದಗಿಸುತ್ತೇನೆ! – ಹೊಸ ಬಾಂಬ್‌ ಸಿಡಿಸಿದ ರಾಹುಲ್‌ ಗಾಂಧಿ!

ಕರ್ನಾಟಕದಲ್ಲಿ ಮತ ಕಳವು ನಡೆದಿದೆ.. ಶೀಘ್ರವೇ ಸಾಕ್ಷ್ಯ ಒದಗಿಸುತ್ತೇನೆ! – ಹೊಸ ಬಾಂಬ್‌ ಸಿಡಿಸಿದ ರಾಹುಲ್‌ ಗಾಂಧಿ!

ವಿಪಕ್ಷ ನಾಯಕ, ಸಂಸದ ರಾಹುಲ್‌ ಗಾಂಧಿ ಹೊಸ ಬಾಂಬ್‌ ಸಿಡಿಸಿದ್ದಾರೆ. ಕರ್ನಾಟಕದ ಚುನಾವಣೆಯಲ್ಲಿ ಮತ ಕಳವು ನಡೆದಿದೆ. ಆದಷ್ಟು ಬೇಗ ಸಾಕ್ಷ್ಯಗಳನ್ನ ನೀಡುತ್ತೇನೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ಇದನ್ನೂ ಓದಿ: ಲಂಡನ್‌ಗೆ ಭೇಟಿ ಕೊಟ್ಟ ಮೋದಿ- ಇಂದು ಜಾರಿಯಾಗಲಿದೆ ಭಾರತ – UK ಮುಕ್ತ ವ್ಯಾಪಾರ ಒಪ್ಪಂದ

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿರುವ ರಾಹುಲ್‌ ಗಾಂಧಿ, ಮಹಾರಾಷ್ಟ್ರ, ಮಧ್ಯಪ್ರದೇಶ ಮಾತ್ರವಲ್ಲ, ಕರ್ನಾಟಕದ ಒಂದು ಲೋಕಸಭಾ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು, ಅಲ್ಲಿನ ಚುನಾವಣಾ ಪ್ರಕ್ರಿಯೆಯ ಬಗ್ಗೆ ನಾವು ಆಳವಾದ ಅಧ್ಯಯನ ನಡೆಸಿದ್ದೇವೆ. ಬೋಗಸ್ ವೋಟಿಂಗ್ ಬಗ್ಗೆ ಮಾಹಿತಿ ನಮಗೆ ಲಭ್ಯವಾಗಿದೆ. ಯಾವ ರೀತಿ ಮತಕಳವು ಮಾಡಲು ಸಾಧ್ಯ ಎನ್ನುವುದನ್ನು ಕರ್ನಾಟಕದ ಈ ಕ್ಷೇತ್ರದ ಮೂಲಕವೇ ದೇಶದ ಜನರ ಮತ್ತು ಕೇಂದ್ರ ಚುನಾವಣಾ ಆಯೋಗದ ಮುಂದೆ ಇಡುತ್ತೇವೆ. ಸದ್ಯದಲ್ಲೇ ಎಲ್ಲಾ ವಿಚಾರಗಳ ಸತ್ಯವನ್ನು ಬಹಿರಂಗಪಡಿಸಲಿದ್ದೇವೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ಮತದಾರರ ಪಟ್ಟಿಯನ್ನು ಕಾಗದದ ರೂಪದಲ್ಲಿ ನೀಡುತ್ತಾರೆ. ನಾವು ಅಂಥ ಪಟ್ಟಿಗಳನ್ನು ವಿಶ್ಲೇಷಿಸಲು ಸಾಧ್ಯವಿಲ್ಲ. ನಾವು ಮತದಾರರ ಪಟ್ಟಿಯನ್ನು ಸಂಗ್ರಹಿಸಿ ಡಿಜಿಟಲೈಸ್ ಮಾಡಿದ್ದು, ಅದಕ್ಕೆ ಆರು ತಿಂಗಳು ಹಿಡಿದಿದೆ. ಈ ಪ್ರಕ್ರಿಯೆಯಿಂದ ನಾವು ಆಯೋಗದ ಕಳ್ಳಾಟವನ್ನ ಪತ್ತೆಹಚ್ಚಿದೆವು. ಯಾರು ಮತ ಹಾಕುತ್ತಾರೆ, ಮತದಾರರನ್ನು ಹೇಗೆ ಸೇರಿಸಲಾಗುತ್ತದೆ, ಹಳೆಯವರನ್ನು ಹೇಗೆ ತೆಗೆದುಹಾಕಲಾಗುತ್ತದೆ ಎಂಬುದನ್ನು ತಿಳಿದುಕೊಂಡೆವು ಎಂದು ರಾಹುಲ್ ಗಾಂಧಿ ಹೇಳಿದರು.

ಇನ್ನು ರಾಹುಲ್‌ ಗಾಂಧಿ ಆರೋಪದ ಕುರಿತು ಸಿಎಂ ಸಿದ್ಧರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ. ಚುನಾವಣಾ ಅಕ್ರಮದ ಬಗ್ಗೆ ನನಗೆ ತಿಳಿದಿಲ್ಲ. ನನಗೆ ಈ ಬಗ್ಗೆ ಗೊತ್ತಿಲ್ಲ. ಹೀಗಾಗಿ ಈ ಬಗ್ಗೆ ಯಾವುದೇ ಹೇಳಿಕೆ ನೀಡುವುದಿಲ್ಲ ಎಂದು ಹೇಳಿದ್ದಾರೆ. ಇದೀಗ ರಾಹುಲ್‌ ಗಾಂಧಿ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

Shwetha M