ಫಿಪಾ ವಿಶ್ವಕಪ್‌ನಲ್ಲಿ ಅರ್ಜೆಂಟೀನಾ ಚಾಂಪಿಯನ್ – ಮೆಸ್ಸಿ ಮ್ಯಾಜಿಕ್‌ಗೆ ಅಭಿಮಾನಿಗಳು ಫಿದಾ
ಎಂಬಪ್ಪೆ ಹ್ಯಾಟ್ರಿಕ್ ಗೋಲು - ರೋಚಕ ಫೈನಲ್‌ನಲ್ಲಿ ಹಾಲಿ ಚಾಂಪಿಯನ್ ಫ್ರಾನ್ಸ್ ಗೆ ಸೋಲು
ಕತಾರ್: ಫಿಫಾ ವಿಶ್ವಕಪ್ 2022ರ ಕಿರೀಟ ಅರ್ಜೆಂಟೀನಾ ಮುಡಿಗೇರಿದೆ. ಅನುಭವಿ ಆಟಗಾರ ಲಿಯೋನೆಲ್ ಮೆಸ್ಸಿ ತಂಡ, ಆಕ್ರಮಣಕಾರಿ ಪ್ರದರ್ಶನದ ಫ್ರಾನ್ಸ್ ತಂಡವನ್ನು ಸೋಲಿಸಿ ಮೂರನೇ ಬಾರಿ ವಿಶ್ವಕಪ್ ಎತ್ತಿಹಿಡಿದಿದೆ. ಕಳೆದ ಬಾರಿ ವಿಶ್ವಕಪ್ ಎತ್ತಿಹಿಡಿಯುವಲ್ಲಿ ಯಶಸ್ವಿಯಾಗಿದ್ದ ಫ್ರಾನ್ಸ್ ತಂಡ ಹಾಲಿ ಚಾಂಪಿಯನ್ ಪಟ್ಟವನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಫೈನಲ್‌ನಲ್ಲಿ ನಡೆದ ರೋಚಕ ಹಣಾಹಣಿಯಲ್ಲಿ ಮೆಸ್ಸಿ ಮ್ಯಾಜಿಕ್ ಎದುರು ಎಂಬಪ್ಪೆ ಹ್ಯಾಟ್ರಿಕ್ ಗೋಲು ಕೂಡಾ ವ್ಯರ್ಥವಾಗಿತ್ತು.
ಇದನ್ನೂ ಓದಿ : ಶತಕ ಸಿಡಿಸಿ ಮಿಂಚಿದ ಅರ್ಜುನ್ ಈಗ ಬೌಲಿಂಗ್‌ನಲ್ಲೂ ಶೈನಿಂಗ್
ಭಾನುವಾರ ಕತಾರ್‌ನ ಲುಸೈಲ್ ಕ್ರೀಡಾಂಗಣದಲ್ಲಿ ನಡೆದ ಫಿಫಾ ವಿಶ್ವಕಪ್ ಅಂತಿಮ ಪಂದ್ಯ ಫುಟ್‌ಬಾಲ್ ಅಭಿಮಾನಿಗಳನ್ನು ತುದಿಗಾಲಿನಲ್ಲಿ ನಿಲ್ಲಿಸಿತ್ತು. 3-3 ಸಮಬಲ ಗೋಲುಗಳೊಂದಿಗೆ ಎರಡು ಬಲಿಷ್ಠತಂಡಗಳ ಆಟಗಾರರು ಆಕ್ರಮಣಕಾರಿಯಾಗಿ ಆಟವಾಡಿದ್ದರು. ಕೊನೆಗೂ
ಪೆನಾಲ್ಟಿ ಶೂಟ್ ಔಟ್‌ಲ್ಲಿ ಫ್ರಾನ್ಸ್ ತಂಡವನ್ನು 4-2 ಗೋಲುಗಳ ಅಂತರದಲ್ಲಿ ಸೋಲಿಸುವುದರೊಂದಿಗೆ ಅರ್ಜೆಂಟೀನಾ ತಂಡ ವಿಶ್ವಕಪ್ ಎತ್ತಿಹಿಡಿದಿದೆ. ಸ್ಟಾರ್ ಆಟಗಾರ ಮೆಸ್ಸಿ ನಾಯಕತ್ವದಲ್ಲಿ ವಿಶ್ವಕಪ್ ಗೆದ್ದ ಅರ್ಜೆಂಟೀನಾ ತನ್ನ 36 ವರ್ಷಗಳ ವಿಶ್ವಕಪ್ ಬರವನ್ನು ನೀಗಿಸಿಕೊಂಡಿದೆ. ಇತ್ತ, ರಷ್ಯಾದಲ್ಲಿ ನಡೆದ ಕಳೆದ ಆವೃತ್ತಿಯ ವಿಶ್ವಕಪ್‌ನಲ್ಲಿ ಪ್ರಶಸ್ತಿ ಗೆದ್ದಿದ್ದ ಫ್ರಾನ್ಸ್ ತಂಡಕ್ಕೆ ತನ್ನ ಹಾಲಿ ಚಾಂಪಿಯನ್ ಪಟ್ಟವನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ.
ಅರ್ಜೆಂಟೀನಾ ಪಂದ್ಯದ ಮೊದಲಾರ್ಧದಲ್ಲಿಯೇ ಎರಡು ಗೋಲುಗಳನ್ನು ಗಳಿಸುವಲ್ಲಿ ಯಶಸ್ವಿಯಾಯಿತು. ಇದರ ನಂತರ, ಕೈಲಿಯನ್ ಎಂಬಪ್ಪೆ ಕೇವಲ 97 ಸೆಕೆಂಡುಗಳಲ್ಲಿ ಎರಡು ಗೋಲುಗಳನ್ನು ಗಳಿಸುವ ಮೂಲಕ ದ್ವಿತೀಯಾರ್ಧದಲ್ಲಿ ಫ್ರಾನ್ಸ್ ತಂಡದ ಹುಮ್ಮಸ್ಸನ್ನು ಹೆಚ್ಚಿಸಿದ್ದರು. ಆದರೆ ಮೆಸ್ಸಿ ಹೆಚ್ಚುವರಿ ಸಮಯದಲ್ಲಿ ಗೋಲು ಗಳಿಸುವ ಮೂಲಕ ಮತ್ತೆ ಅರ್ಜೆಂಟೀನಾ ತಂಡಕ್ಕೆ ಮುನ್ನಡೆ ತಂದುಕೊಟ್ಟರು. ನಂತರ ಎಂಬಪ್ಪೆ ಕೂಡ ಪೆನಾಲ್ಟಿಯನ್ನು ಗೋಲಾಗಿ ಪರಿವರ್ತಿಸುವ ಮೂಲಕ ಮತ್ತೆ ಪಂದ್ಯದಲ್ಲಿ ಸಮಬಲ ಸಾಧಿಸಿದರು. ಹೀಗಾಗಿ ಪಂದ್ಯ ಪೆನಾಲ್ಟಿ ಹಂತಕ್ಕೆ ತಲುಪಿತು. ಪೆನಾಲ್ಟಿಯಲ್ಲಿ ಫ್ರಾನ್ಸ್ನ ಕೈಲಿಯನ್ ಎಂಬಪ್ಪೆ ಮೊದಲ ಗೋಲು ಬಾರಿಸುವಲ್ಲಿ ಯಶಸ್ವಿಯಾದರು. ನಂತರ ಅರ್ಜೆಂಟೀನಾ ಪರ ಮೆಸ್ಸಿ ಕೂಡ ಗೋಲು ಬಾರಿಸಿದರು. ಇದಾದ ನಂತರ ಫ್ರಾನ್ಸ್ ಪರ ಎರಡನೇ ಪೆನಾಲ್ಟಿ ಶೂಟೌಟ್ ಮಾಡಲು ಬಂದ ಮಾರ್ಟಿನೆಜ್ ಕೋಮನ್ ಅವರ ಕಿಕ್ ಅನ್ನು ತಡೆಯುವಲ್ಲಿ ಅರ್ಜೆಂಟೀನಾದ ಗೋಲ್ ಕೀಪರ್ ಯಶಸ್ವಿಯಾದರು. ಬಳಿಕ ಅರ್ಜೆಂಟೀನಾ ಪರ ಡೈಬಾಲಾ ಎರಡನೇ ಗೋಲು ಗಳಿಸಿದರು. ಹಾಗೆಯೇ ಫ್ರಾನ್ಸ್ ಪರ ಚುಮೇನಿ ಬಾರಿಸಿದ ಮೂರನೇ ಪೆನಾಲ್ಟಿ ಕಿಕ್ ಅನ್ನು ಸಹ ಅರ್ಜೆಂಟೀನಾದ ಗೋಲ್ ಕೀಪರ್ ರ್ ಮಾರ್ಟಿನೆಜ್ ತಡೆದರು. ಇದಾದ ನಂತರ ಅರ್ಜೆಂಟೀನಾ ಪರ ಪರೆಡೆಸ್ ಮೂರನೇ ಗೋಲು ಗಳಿಸಿದರು. ಆದರೆ 2 ಮತ್ತು 3 ನೇ ಪೆನಾಲ್ಟಿ ಶೂಟೌಟನ್ನು ಗೋಲಾಗಿ ಪರಿವರ್ತಿಸುವಲ್ಲಿ ವಿಫಲವಾಗಿದ್ದ ಫ್ರಾನ್ಸ್ ನಾಲ್ಕನೇ ಪೆನಾಲ್ಟಿಯನ್ನು ಗೋಲಾಗಿ ಪರಿವರ್ತಿಸುವಲ್ಲಿ ಯಶಸ್ವಿಯಾಯಿತು. ಫ್ರಾನ್ಸ್ ಪರ ಕೊಲೊ ಮುವಾನಿ 2ನೇ ಗೋಲು ಗಳಿಸಿದರು. ಅಂತಿಮವಾಗಿ ಮೊಂಟಿಯೆಲ್ ಅರ್ಜೆಂಟೀನಾ ಪರ 4ನೇ ಗೋಲು ಗಳಿಸಿ ತಂಡಕ್ಕೆ ಜಯ ತಂದುಕೊಟ್ಟರು.